ಗೋಣಿಕೊಪ್ಪಲು, ಏ. 7: ಬಾಳೆಲೆ ಸಮೀಪದ ಕೊಟ್ಟಗೇರಿ ಭಾಗದಲ್ಲಿ ಜಾನುವಾರುಗಳ ಮೇಲೆ ಧಾಳಿ ನಡೆಸುತ್ತಿದ್ದ ಹುಲಿ ಸೆರೆಗೆ ಅರಣ್ಯ ಇಲಾಖೆ ಎಲ್ಲೆಡೆ ಜಾಲಾಡಿದರೂ ಅದರ ಸುಳಿವು ಪತ್ತೆಯಾಗಲಿಲ್ಲ.ನಾಗರಹೊಳೆ ಅರಣ್ಯದಂಚಿನ ಕೊಟ್ಟಗೇರಿ ಗ್ರಾಮದ ಕಾಫಿ ತೋಟದಲ್ಲಿ ಗುರುವಾರ ರಾತ್ರಿ ಹುಲಿ ಸುಳಿದಾಡುತ್ತಿರುವದು ಸಿಸಿ ಟಿವಿ ಕ್ಯಾಮರಾದಲ್ಲಿ ಗೋಚರಿಸಿತ್ತು. ಇದನ್ನು ಆಧರಿಸಿ ಅರಣ್ಯಾಧಿಕಾರಿಗಳು ಸಿಬ್ಬಂದಿ ಹಾಗೂ ಸಾಕಾನೆಗಳ ಸಮೇತ ಶನಿವಾರ ನಸುಕಿನ ವೇಳೆ 5 ಗಂಟೆಯಿಂದಲೇ ಕಾರ್ಯಾಚರಣೆ ನಡೆಸಿದರು.ವೀರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ತರಾಜ್, ತಿತಿಮತಿ ಎಸಿಎಫ್ ಶ್ರೀಪತಿ, ನಾಗರಹೊಳೆ ಎಸಿಎಫ್ ಪೌಲ್ ಅಂಟೋನಿ, ಮತ್ತಿಗೋಡು ಆರ್ಎಫ್ಒ ಕಿರಣ್ ಕುಮಾರ್, ಪೊನ್ನಂಪೇಟೆ ಆರ್ಎಫ್ಒ ಗಂಗಾಧರ್, ಅಶೋಕ್ ಹನುಗುಂದ, ಸ್ನೇಕ್ ಸತೀಶ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಸ್ಟಿಪಿಎಫ್ ತಂಡ, ಅರಣ್ಯ ಇಲಾಖೆ ಸಿಬ್ಬಂದಿ ಸೇರಿದಂತೆ 40 ಜನ ಪಾಲ್ಗೊಂಡಿದ್ದರು.
ಅರಣ್ಯ ಇಲಾಖೆಯ ಹುಲಿ ಸೆರೆಹಿಡಿಯುವ ವಿಶೇಷ ತಜ್ಞ ವೆಂಕಟೇಶ್ ಮತ್ತಿಗೋಡು ಸಾಕಾನೆ ಶಿಬಿರದ ಅಭಿಮನ್ಯು, ಕೃಷ್ಣ, ದ್ರೋಣ, ಭೀಮ ಆನೆಗಳನ್ನು ಬಳಸಿಕೊಂಡು ಕಾಫಿ ತೋಟವನ್ನೆಲ್ಲ ಬೆಳಿಗ್ಗೆ 11 ಗಂಟೆವರೆಗೂ ತಡಕಾಡಿದರು. ಅರವಳಿಕೆ ಮದ್ದು, ಬಲೆ ಮತ್ತಿತರ ಸಾಮಗ್ರಿ ಹಿಡಿದು ಹಲವು ಕಡೆಯಿಂದ ಕಾರ್ಯಾಚರಣೆ ನಡೆಸಿದರೂ ಹುಲಿ ಸುಳಿವು ಪತ್ತೆಯಾಗಲಿಲ್ಲ.
ಬೇಸಿಗೆಯಾದ್ದರಿಂದ ಹೆಜ್ಜೆ ಗುರುತು ಕೂಡ ಲಭಿಸುತ್ತಿಲ್ಲ. ಸಿಸಿಟಿವಿ ಕ್ಯಾಮರಾದಲ್ಲಿ ಪತ್ತೆಯಾದ ಜಾಗದಲ್ಲಿ ಬೋನಿಟ್ಟು ಅದರೊಳಗೆ ಗುರುವಾರ ಮಾಯಮುಡಿಯಲ್ಲಿ ಬಲಿಯಾದ ಕರುವಿನ ಮಾಂಸ ತುಂಬಿಸಿಡಲಾಗಿತ್ತು. ಆದರೂ ಹುಲಿ ಇತ್ತ ಸುಳಿದಿಲ್ಲ. ಮತ್ತಾವದೋ ಸ್ಥಳದ ಕಡೆಗೆ ಪಲಾಯನ ಮಾಡಿದೆ. ಬಿರುನಾಣಿ ಯಿಂದ ಹಿಡಿದು ಸಿದ್ದಾಪುರದ ಮಾಲ್ದಾರೆ ವರೆಗೆ ಜಾನುವಾರುಗಳ ಮೇಲೆ ಧಾಳಿ ನಡೆಸುತ್ತಿರುವ ಹುಲಿ ಒಂದೆಯೋ ಅಥವಾ ಬೇರೆ ಇದೆಯೋ ಎಂಬದನ್ನು ಸೆÀರೆಯಾದ ಬಳಿಕ ಸ್ಪಷ್ಟ ಮಾಹಿತಿ ಲಭಿಸಲಿದೆ ಎಂದು ಶ್ರೀಪತಿ ಹೇಳಿದರು.
ಈ ನಡುವೆ ಕೊಟ್ಟಗೇರಿಯಿಂದ 5 ಕಿಮೀ
(ಮೊದಲ ಪುಟದಿಂದ) ದೂರದಲ್ಲಿರುವ ಬೆಕ್ಕೆಸೊಡ್ಲೂರಿನಲ್ಲಿ ಜಾನುವಾರು ಒಂದು ಶುಕ್ರವಾರ ರಾತ್ರಿ ಹುಲಿ ಧಾಳಿಗೆ ಬಲಿಯಾಗಿದೆ. ಕೊಟ್ಟಗೇರಿ ಭಾಗದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಅರಣ್ಯಾಧಿಕಾರಿಗಳು ಶನಿವಾರ ಮಧ್ಯಾಹ್ನ 12 ಗಂಟೆ ವೇಳೆಗೆ ಬೆಕ್ಕೆಸೊಡ್ಲೂರಿನ ಕಡೆಗೆ ಪಯಣ ಬೆಳೆಸಿದರು.
ಬೆಕ್ಕೆಸೊಡ್ಲೂರಿನ ತಾಣಚ್ಚೀರ ರೋಹಿಣಿ ಅವರಿಗೆ ಸೇರಿದ ಕೊಟ್ಟಿಗೆಗೆ ನಿನ್ನೆ ರಾತ್ರಿ 11 ಗಂಟೆ ವೇಳೆಗೆ ನುಗ್ಗಿದ ಹುಲಿ ಕಟ್ಟಿ ಹಾಕಿದ್ದ ಹಾಲು ಕರೆಯುವ ಹಸು ಮತ್ತು ಕರುವಿನ ಮೇಲೆ ಧಾಳಿ ನಡೆಸಿದೆ. 9 ತಿಂಗಳ ಕರುವಿನ ಮೇಲೆ ಧಾಳಿ ನಡೆಸಿದ ಹುಲಿ ಕರುವನ್ನು ಕೊಂದು ಹಾಕಿದೆ. ಬಳಿಕ ಹಸುವಿನ ಮೇಲೆ ಧಾಳಿ ನಡೆಸಿ ಕುತ್ತಿಗೆಗೆ ಗಾಯಗೊಳಿಸಿದೆ. ಮನೆಯಿಂದ 50 ಅಡಿ ದೂರ ದಲ್ಲಿರುವ ಕೊಟ್ಟಿಗೆಯಲ್ಲಿ ಶಬ್ಧ ವಾದುದನ್ನು ಕೇಳಿ ಮನೆಯಿಂದ ಹೊರ ಬಂದ ರೋಹಿಣಿ ಮತ್ತು ಅವರ ಮಗನ ಮೇಲೂ ಹುಲಿ ಧಾಳಿ ನಡೆಸಲು ಯತ್ನಿಸಿತು ಎನ್ನಲಾಗಿದೆ. ಹೆದರಿ ಮನೆ ಒಳಗೆ ಹೋಗಿ ಬಾಗಿಲು ಹಾಕಿಕೊಂಡು ಕಿಟಕಿಯಿಂದ ಕೂಗಾಡಿದಾಗ ಹುಲಿ ಕೊಟ್ಟಿಗೆಯಿಂದ ಕಾಲು ಕಿತ್ತು ಕಾಫಿ ತೋಟದಲ್ಲಿ ಮರೆಯಾಗಿದೆ.
ಸ್ಥಳಕ್ಕೆ ತಿತಿಮತಿ ಎಸಿಎಫ್ ಶ್ರೀಪತಿ, ನಾಗರಹೊಳೆ ಎಸಿಎಫ್ ಪೌಲ್ ಅಂಟೋನಿ, ಆರ್ಎಫ್ಒಗಳಾದ ಕಿರಣ್ ಕುಮಾರ್, ಗಂಗಾಧರ್ ಭೇಟಿ ನೀಡಿ ಪರಿಶೀಲಿಸಿದರು. ಕೊಟ್ಟಗೇರಿ ಯಲ್ಲಿ ಕಂಡು ಬಂದ ಹುಲಿ ಇದೇ ಆಗಿರಬಹುದು ಎಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ.
ದ. ಕೊಡಗಿನ ವಿವಿಧ ಭಾಗದಲ್ಲಿ ಕಳೆದ ಎರಡು ತಿಂಗಳಿನಿಂದ ಹುಲಿ ಹಾವಳಿ ಮಿತಿಮೀರಿದ್ದು 15ಕ್ಕೂ ಹೆಚ್ಚು ಜಾನುವಾರುಗಳು ಬಲಿಯಾ ಗಿರುವದನ್ನು ಮನಗಂಡ ಅರಣ್ಯ ಇಲಾಖೆಯು ವ್ಯಾಘ್ರನ ಸೆರೆಗೆ ಪ್ರಯತ್ನ ನಡೆಸಿದೆ.ಮುಂಜಾನೆ 5 ಗಂಟೆಗೆ ಕೊಟ್ಟಗೇರಿಯ ಮಾಪಂಗಡ ಮುದ್ದಯ್ಯ ಅವರ ಮನೆ ಸಮೀಪವಿರುವ ದೇವರಕಾಡು ಅರಣ್ಯ ಹಾಗೂ ಸಮೀಪದ ಕುರುಚಲು ಕಾಡು ಹಾಗೂ ಕಾಫಿ ತೋಟಗಳಲ್ಲಿ ಇಲಾಖೆಯ ಸಿಬ್ಬಂದಿಗಳು 4 ಆನೆಗಳ ಸಹಾಯದಿಂದ ಕೂಬಿಂಗ್ನೊಂದಿಗೆ ಹುಲಿಯ ಸೆರೆಗೆ ಪ್ರಯತ್ನ ನಡೆಸಿದರು.
ಮರದ ಮೇಲೆ 11 ಸಿಬ್ಬಂದಿಗಳು ಹುಲಿಯ ಸಂಚಾರದ ಬಗ್ಗೆ ನಿಗಾ ವಹಿಸಿದ್ದರು. ಸುತ್ತಮುತ್ತಲಿನ 17 ಕ್ಯಾಮರಾಗಳನ್ನು ಅಳವಡಿಸಿದ್ದ ಅರಣ್ಯ ಅಧಿಕಾರಿಗಳು ಹುಲಿಯ ಚಲನ ವಲನದ ಬಗ್ಗೆ ಕ್ಯಾಮರಾದಿಂದ ಸೆರೆಸಿಕ್ಕ ಹುಲಿಯ ಓಡಾಟವನ್ನು ಗಮನಿಸಿ ಈ ಭಾಗದಲ್ಲಿ ಬೆಳಗ್ಗಿನಿಂದಲೇ ಮತ್ತಿಗೋಡುವಿನ ಆನೆ ಕ್ಯಾಂಪ್ನಲ್ಲಿದ್ದ ಸಾಕಾನೆಗಳಾದ ಅಭಿಮನ್ಯು, ಕೃಷ್ಣ, ದ್ರೋಣ ಹಾಗೂ ಭೀಮನ ಸಹಾಯ ಪಡೆದು ತೋಟ ಹಾಗೂ ಕಾಡಿನಲ್ಲಿ ಸಂಚಾರ ನಡೆಸಿ ಹುಲಿ ಸೆರೆಗೆ ಪ್ರಯತ್ನ ಮಾಡಿದರು. ಅರಣ್ಯ ಇಲಾಖಾ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಗ್ರಾಮದ ಸಾರ್ವಜನಿಕರು ಹುಲಿ ಹಿಡಿಯುವ ಕಾರ್ಯಾ ಚರಣೆಯಲ್ಲಿ ಮುಂದಾಗಿದ್ದರು. ಹುಲಿಯ ಜಾಡು ಮಾತ್ರ ಅಧಿಕಾರಿಗಳಿಗೆ ಸಿಗಲೇ ಇಲ್ಲ.
ಕೊಟ್ಟಗೇರಿಯ ಮಾಪಂಗಡ ಮುದ್ದಯ್ಯ ಅವರ ಕೊಟ್ಟಿಗೆಯಲ್ಲಿದ್ದ 3 ಹಸುಗಳನ್ನು ಕೆಲವು ದಿನಗಳ ಹಿಂದೆ ಹುಲಿಯು ತಿಂದು ಹಾಕಿತ್ತು. ನಂತರ ಅರಣ್ಯ ಇಲಾಖೆಯ ಸಿಬ್ಬಂದಿಗಳು ಈ ಭಾಗದಲ್ಲಿ ಹುಲಿ ಸೆರೆಗೆ ಬೋನ್ ಇಟ್ಟು ಪ್ರಯತ್ನ ನಡೆಸಿದ್ದರು. ಆದರೆ ಹುಲಿ ಬೋನಿನತ್ತ ಸುಳಿಯುತ್ತಿರಲಿಲ್ಲ. ರೈತ ಸಂಘ ಹಾಗೂ ಜೆಡಿಎಸ್ ಮುಖಂಡರು ಹುಲಿ ಸೆರೆಗೆ ಅರಣ್ಯ ಇಲಾಖಾ ಅಧಿಕಾರಿಗಳ ಮೇಲೆ ಆಕ್ರೋಶಗೊಂಡು ಪ್ರತಿಭಟನೆ ನಡೆಸಿದ್ದರು.
ಸಂಕೇತ್ ಆಗ್ರಹ
ರೈತರ, ಬೆಳೆಗಾರರ ಹಸುಗಳನ್ನು ಬಲಿ ತೆಗೆದುಕೊಳ್ಳುತ್ತಿದ್ದ ಹುಲಿಯನ್ನು ಹಿಡಿಯುವಂತೆ ಅರಣ್ಯ ಇಲಾಖೆಯ ಸಿಬ್ಬಂದಿಗಳ ಮೇಲೆ ಒತ್ತಾಯ ಮಾಡಿದ್ದ ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಇಂದು ಮುಂಜಾನೆ 6 ಗಂಟೆಗೆ ಕೊಟ್ಟಗೇರಿಯಲ್ಲಿ ಹುಲಿ ಸೆರೆಗೆ ಕಾರ್ಯಚರಣೆ ನಡೆಸುತ್ತಿರುವ ಅಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆ ಬಗ್ಗೆ ಚರ್ಚೆ ನಡೆಸಿದರು. ಆಧುನಿಕ ತಂತ್ರಜ್ಞಾನವನ್ನು ಬಳಸುವಂತೆ ಹಸು ಕಳೆದುಕೊಂಡ ರೈತನ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಲು ಮೇಲಾಧಿಕಾರಿಗಳೊಂದಿಗೆ ತುರ್ತು ಮಾತುಕತೆ ನಡೆಸಿ ಇಲ್ಲಿನ ನೈಜ್ಯ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುವಂತೆ ಸ್ಥಳದಲ್ಲಿದ್ದ ತಿತಿಮತಿ ವಲಯ ಅಧಿಕಾರಿ ಶ್ರೀಪತಿ ಹಾಗೂ ಡಿಸಿಎಫ್ ಮರಿಯ ಕ್ರಿಸ್ತರಾಜ್ ಆಗ್ರಹಿಸಿದರು.
ಹುಲಿ ಸಂಚಾರದ ಮಾಹಿತಿ ಸಂಗ್ರಹಿಸಿದ್ದೇವೆ. ಬೋನಿನಲ್ಲಿ ಮೇಕೆಯನ್ನಿಟ್ಟು ಹುಲಿಯನ್ನ ಸೆರೆ ಹಿಡಿಯುವ ಪ್ರಯತ್ನ ಮಾಡಿದ್ದೇವೆ. ಇಲ್ಲಿಯೂ ಕೂಡ ವಿಫಲವಾದ ಕಾರಣ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಮೇಲಾದಿ üಕಾರಿಗಳ ಅನುಮತಿ ಪಡೆದು ಹುಲಿ ಸೆರೆ ಹಿಡಿಯುವ ಕಾರ್ಯಾ ಚರಣೆಗೆ ಮುಂದಾಗಿದ್ದೇವೆ. ಹುಲಿಯನ್ನು ಹಿಡಿಯುವ ಮೂಲಕ ನಾಗರಿಕರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತೇವೆ ಎಂದು ಎಸಿಎಫ್ ಶ್ರೀಪತಿ ಪ್ರತಿಕ್ರಿಯಿಸಿದ್ದಾರೆ.
ಅರಣ್ಯದಿಂದ ಬೇರ್ಪಟ್ಟ ಹುಲಿಯು ಈ ಭಾಗದಲ್ಲಿ ಸಂಚರಿ ಸುತ್ತಿದ್ದು, ಹುಲಿ ಕಾಡು ಹಂದಿಯನ್ನು ಈ ಭಾಗದಲ್ಲಿ ತಿಂದು ಹಾಕಿರುವದು ಬೆಳಕಿಗೆ ಬಂದಿದೆ. ನಂತರ ಸುತ್ತಮುತ್ತಲಿನ ರೈತರ ಕೊಟ್ಟಿಗೆಗೆ ಧಾಳಿ ಮಾಡಿ ಅಲ್ಲಿರುವ ಹಸುವನ್ನು ತಿಂದು ಹಾಕುತ್ತಿದೆ. ಮತ್ತೆ ಇದು ಕಾಡಿನತ್ತ ಸಂಚರಿಸುವದು ಅನುಮಾನವಿದೆ ಎಂದು ನಾಗರಹೊಳೆ ವಾರ್ಡ್ನ ಕುಂಞಂಗಡ ಬೋಸ್ ಮಾದಪ್ಪ ಅಭಿಪ್ರಾಯಪಟ್ಟಿದ್ದಾರೆ.
ಇಲಾಖೆಯ ಸ್ಪಷ್ಟ ಆದೇಶದಂತೆ ಹುಲಿ ಸೆರೆ ಹಿಡಿಯಬೇಕು ಸಂಜೆ 6 ಗಂಟೆಯ ನಂತರ ಹುಲಿಯ ಮೇಲೆ ಚುಚ್ಚುಮದ್ದು ಪ್ರಯೋಗ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಮುಂಜಾನೆ ಯಿಂದಲೇ ಆನೆಯ ಸಹಾಯದಿಂದ ಕಾಡಿನಲ್ಲಿ ಸಂಚಾರ ನಡೆಸಿ ಹುಲಿ ಸೆರೆಗೆ ಪ್ರಯತ್ನ ಮಾಡಿದ್ದೇವೆ ಎಂದು ನಾಗರಹೊಳೆ ಅರಣ್ಯ ವಲಯ ಅರವಳಿಕೆ ತಜ್ಞ, ಡಾ. ಮಜೀದ್ ತಿಳಿಸಿದ್ದಾರೆ.
-ಎನ್.ಎನ್. ದಿನೇಶ್, ಜಗದೀಶ್ ಹೆಚ್.ಕೆ.