ಮಡಿಕೇರಿ, ಏ. 7: ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಅವರ ವಿರುದ್ಧ ಸೋಮವಾರಪೇಟೆ ತಾ.ಪಂ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಅವರು ನೀಡಿರುವ ಹೇಳಿಕೆಯನ್ನು ಸುಂಟಿಕೊಪ್ಪ ಬಿಜೆಪಿ ಯುವ ಮೋರ್ಚಾ ತೀವ್ರವಾಗಿ ಖಂಡಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯುವ ಮೋರ್ಚಾದ ಪ್ರಮುಖರು, ಬಿ.ಬಿ. ಭಾರತೀಶ್ ಅವರನ್ನು ರಾಜಕೀಯವಾಗಿ ಮಟ್ಟ ಹಾಕಲು ಕುತಂತ್ರ ನಡೆಯುತ್ತಿದ್ದು, ಇದಕ್ಕೆ ಯುವ ಮೋರ್ಚಾ ಎಂದಿಗೂ ಅವಕಾಶ ನೀಡುವದಿಲ್ಲವೆಂದು ಸ್ಪಷ್ಟಪಡಿಸಿದರು. ಅತ್ಯಂತ ಕಿರಿಯ ವಯಸ್ಸಿನಲ್ಲಿ ರಾಜಕೀಯ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸುತ್ತಾ ಬಂದ ಭಾರತೀಶ್ ಅವರ ವಿರುದ್ಧ ನಿರಂತರವಾಗಿ ಷಡ್ಯಂತ್ರ ನಡೆಯುತ್ತಾ ಬಂದಿದೆ. ಮಣಿ ಉತ್ತಪ್ಪ ಅವರ ಹೇಳಿಕೆಯ ಹಿಂದೆ ಕಾಣದ ಕೈಗಳು ಕೆಲಸ ಮಾಡಿರುವ ಶಂಕೆ ಇದೆಯೆಂದು ಪ್ರಮುಖರು ಆರೋಪಿಸಿದರು.

ರಾಜ್ಯದ ವರಿಷ್ಠರು ಭಾರತೀಶ್ ಅವರ ಉತ್ತಮ ನಡತೆಯನ್ನು ಗಮನಿಸಿ ಜಿಲ್ಲಾಧ್ಯಕ್ಷ ಸ್ಥಾನವನ್ನು ನೀಡಿದ್ದಾರೆ ಎಂದರು.

ಬಿಜೆಪಿ ಅಧ್ಯಕ್ಷರು ಹಾಗೂ ಆರ್‍ಎಸ್‍ಎಸ್ ವಿರುದ್ಧ ಹೇಳಿಕೆ ನೀಡುವಾಗ ಪಕ್ಷಕ್ಕೆ ಮತ್ತು ಧರ್ಮಕ್ಕೆ ಅಪಚಾರವಾಗಿದೆಯೆಂದು ತಿಳಿಯಲಿಲ್ಲವೆ ಎಂದು ಪ್ರಶ್ನಿಸಿದ ಅವರು ಚೆಟ್ಟಳ್ಳಿ ಪೊನ್ನತ್‍ಮೊಟ್ಟೆಯಲ್ಲಿ ಮಧುಸೂದನ್ ಅವರನ್ನು ಸೋಲಿಸುವ ಸಂದರ್ಭ ಪಕ್ಷ ನಿಷ್ಠೆ ಎಲ್ಲಿಗೆ ಹೋಗಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಡಿಸಿಸಿ ಬ್ಯಾಂಕ್ ಚುನಾವಣೆ ಸಂದರ್ಭ ಬಿಜೆಪಿಯ ಕುಮಾರಪ್ಪ ಅವರು ಸೋತಿದ್ದು ಹೇಗೆ. ಹಿಂದೆ ಇದೇ ರೀತಿ ವರ್ತಿಸಿ ಪಕ್ಷದಿಂದ ಉಚ್ಛಾಟನೆಗೊಂಡಿದ್ದನ್ನು ಮರೆತಿದ್ದೀರ? ಹೊಸಕೊಟೆಯಲ್ಲಿ ಪಾಕಿಸ್ತಾನದ ಪರ ಜಯ ಘೋಷ ಹಾಕಿದವರ ವಿರುದ್ಧ ಸುಂಟಿಕೊಪ್ಪ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸುವಾಗ ನೀವುಗಳು ಎಲ್ಲಿಗೆ ಹೋಗಿದ್ದಿರಿ? ಹೀಗೆ ಮಣಿ ಉತ್ತಪ್ಪ ಅವರಿಗೆ ಅನೇಕ ಪ್ರಶ್ನೆಗಳನ್ನು ಕೇಳಿರುವ ಸುಂಟಿಕೊಪ್ಪ ಯುವ ಮೋರ್ಚಾದ ಪ್ರಮುಖರು ಮಣಿ ಉತ್ತಪ್ಪ ಅವರ ವಿರುದ್ಧ ಪಕ್ಷ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ತಾಲೂಕು ಯುವ ಮೋರ್ಚಾ ಮಾಜಿ ಸದಸ್ಯ ಅಶೋಕ್, ಒಬಿಸಿ ಪ್ರಧಾನ ಕಾರ್ಯದರ್ಶಿ ಬಿ.ಎಸ್. ನಾಗೇಶ್ ಪೂಜಾರಿ, ಸುಂಟಿಕೊಪ್ಪ ಯುವ ಮೋರ್ಚಾ ಅಧ್ಯಕ್ಷ ಬಿ.ಕೆ. ರಂಜಿತ್ ಪೂಜಾರಿ, ಚೆಟ್ಟಳ್ಳಿ ಗ್ರಾ.ಪಂ. ಸದಸ್ಯ ಮಧು ಸೂದನ್, ಸೋಮವಾರಪೇಟೆ ಯುವ ಮೋರ್ಚಾ ಸದಸ್ಯ ಬಿ.ಕೆ. ದಿನೇಶ್ ಪೂಜಾರಿ ಉಪಸ್ಥಿತರಿದ್ದರು.