ಸೋಮವಾರಪೇಟೆ, ಏ. 7: ಕ್ರಿಮಿನಲ್ ಮೊಕದ್ದಮೆಯೊಂದಕ್ಕೆ ಸಂಬಂಧಿಸಿದಂತೆ ಆರೋಪಿಗೆ ಜಾಮೀನು ನೀಡಿದ, ಜಾಮೀನುದಾರರನ್ನು ಗುರುತಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರಪೇಟೆ ನ್ಯಾಯಾಲಯದ ವಕೀಲರೋರ್ವರ ವಿರುದ್ಧ ಮೊಕದ್ದಮೆ ದಾಖಲಾಗಿರುವದನ್ನು ಖಂಡಿಸಿ ಇಲ್ಲಿನ ವಕೀಲರು ನಡೆಸುತ್ತಿರುವ ಕಲಾಪ ಬಹಿಷ್ಕಾರ ಮೂರು ದಿನ ಪೂರೈಸಿದೆ.

ಶನಿವಾರಸಂತೆಯಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಆರೋಪಿ ಪ್ರದೀಪ್ ಎಂಬಾತನಿಗೆ ಕಳೆದ 25.11.2014ರಲ್ಲಿ ವೇದಮೂರ್ತಿ ಎಂಬವರು ಶನಿವಾರಸಂತೆ ಸಮೀಪದ ದೊಡ್ಡಕೊಳತ್ತೂರು ಗ್ರಾಮದ ಜಯಲಿಂಗಪ್ಪ ಎಂಬವರಿಗೆ ಸೇರಿದ ಆರ್‍ಟಿಸಿಯನ್ನು ಸೋಮವಾರಪೇಟೆ ನ್ಯಾಯಾಲಯಕ್ಕೆ ನೀಡಿ ತಾನೇ ಜಯಲಿಂಗಪ್ಪ ಎಂದು ತಿಳಿಸಿ ಆರೋಪಿಗೆ ಜಾಮೀನು ಕೊಡಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪರ ಸೋಮವಾರಪೇಟೆಯ ವಕೀಲ ಮನೋಹರ್ ವಕಾಲತ್ತು ವಹಿಸಿದ್ದರು.

ಜಾಮೀನು ನೀಡುವ ಸಂದರ್ಭ ನ್ಯಾಯಾಲಯದ ನಿಯಮದಂತೆ ಜಾಮೀನುದಾರರನ್ನು ಗುರುತಿಸುವ ಕಾರ್ಯ ವಕೀಲರಿಂದ ಆಗಬೇಕಿದ್ದು, ಅದರಂತೆ ಮನೋಹರ್ ಜಾಮೀನುದಾರ ವ್ಯಕ್ತಿಯನ್ನು ಗುರುತಿಸಿದ್ದಾರೆ. ಇತ್ತೀಚೆಗೆ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ ಬಗ್ಗೆ ತಿಳಿದುಬಂದಿದ್ದು, ಈ ಹಿನ್ನೆಲೆ ವೇದಮೂರ್ತಿ ಅವರೊಂದಿಗೆ ವಕೀಲ ಮನೋಹರ್ ಅವರನ್ನೂ ಆರೋಪಿಯನ್ನಾಗಿಸಿ ಪೊಲೀಸರು ಮೊಕದ್ದಮೆ ದಾಖಲಿಸಿದ್ದು, ಇದನ್ನು ಖಂಡಿಸಿ ಕಳೆದ ತಾ. 5ರಂದು ಕಲಾಪ ಬಹಿಷ್ಕರಿಸಿದ್ದ ವಕೀಲರು ನಿನ್ನೆ ಹಾಗೂ ಇಂದು ಸಹ ಕಲಾಪಕ್ಕೆ ಹಾಜರಾಗಲಿಲ್ಲ.

ತಾ. 9ರಂದು ಸೋಮವಾರ ಮತ್ತೆ ಸಭೆ ನಡೆಸಿ ಈ ವಿಚಾರದ ಬಗ್ಗೆ ಚರ್ಚಿಸಲಾಗುತ್ತದೆ. ನಂvರ ತೀರ್ಮಾನಿಸಲಾಗುತ್ತದೆ ಎಂದು ವಕೀಲರ ಸಂಘದ ಉಪಾಧ್ಯಕ್ಷ ಕಾಟ್ನಮನೆ ವಿಠಲ್ ಗೌಡ ತಿಳಿಸಿದ್ದಾರೆ.