ಚಿತ್ರ ವರದಿ: ವಾಸು ಸಿದ್ದಾಪುರ, ಏ. 8: ಸಿದ್ದಾಪುರದಲ್ಲಿ ಆಯೋಜಿಸಿದ್ದ ವಾಹನ ರ್ಯಾಲಿ ಕ್ರೀಡಾಭಿಮಾನಿಗಳ ಮೈನವಿರೇಳಿಸಿತು. ಸಿದ್ದಾಪುರದ ಟೀಮ್ 53 ಮೋಟರ್ಸ್ ವತಿಯಿಂದ ಸಿದ್ದಾಪುರದ ಕಾವೇರಿ ಸೇತುವೆ ಬಳಿಯ, ಸಿ.ಕೆ. ಚುಮ್ಮಿ ಪೂವಯ್ಯನವರ ಗದ್ದೆಯಲ್ಲಿ ನಡೆದ ಆಟೋಕ್ರಾಸ್ ರ್ಯಾಲಿಯಲ್ಲಿ ವಿವಿದ ವರ್ಗದ ಕಾರ್ ರೇಸ್ ಕ್ರೀಡಾಭಿಮಾನಿಗಳನ್ನು ರೋಮಾಂಚನಗೊಳಿಸಿತು.
ಕಾರುಗಳು, ಜೀಪುಗಳು ಧೂಳೆಬ್ಬಿಸಿ ಓಡಿದವು, ಗದ್ದೆಯಲ್ಲಿ ಮಾಡಿದ್ದ ಅಂಕು ಡೊಂಕುವಿನ ಹಾದಿಯಲ್ಲಿ ಗೆಲುವಿನ ಗುರಿ ತಲಪಲು ರ್ಯಾಲಿ ಪಟುಗಳು ಸದ್ದಿನೊಂದಿಗೆ ಘರ್ಜಿಸುತ್ತಾ ವೇಗದ ಚಾಲನೆಯಲ್ಲಿ ಧೂಳನ್ನು ಲೆಕ್ಕಿಸದೆ ಮುನ್ನುಗುತ್ತಿದ್ದರು. ಜಿಲ್ಲೆ, ರಾಜ್ಯ ಹಾಗೂ ಹೊರ ರಾಜ್ಯಗಳಿಂದ ರ್ಯಾಲಿ ಪಟುಗಳು ಪಾಲ್ಗೊಂಡಿದ್ದರು. ನಾ ಮುಂದು ತಾ ಮುಂದು ಎಂದು ಜೀವವನ್ನು ಲೆಕ್ಕಿಸದೆ ಮುನ್ನುಗುತ್ತಿದ್ದ ದೃಶ್ಯ ಕಂಡುಬಂತು. ನೂರಾರು ಮಂದಿ ರ್ಯಾಲಿ ಅಭಿಮಾನಿಗಳು ರ್ಯಾಲಿ ಪಟುಗಳಿಗೆ ಸ್ಫೂರ್ತಿ ನೀಡಿ ಉತ್ತೇಜಿಸಿದರು. ಅಲ್ಲದೇ ವಾಹನ ಚಾಲಿಸುವ ಸಂದರ್ಭ ಪ್ರೇಕ್ಷಕರು ಕಿರುಚಿ ಶಿಳ್ಳೆ ಹೊಡೆದು ಹುರಿದುಂಬಿಸುತ್ತಿದ್ದ ದೃಶ್ಯ ಕಂಡುಬಂದಿತ್ತು.
ರ್ಯಾಲಿಪಟುಗಳು ತಮ್ಮ ವಾಹನದ ತಾಂತ್ರಿಕ ಗುಣಮಟ್ಟವನ್ನು ಹೆಚ್ಚಿಸಿಕೊಂಡು ತಮಗೆ ಬೇಕಾದ ಶೈಲಿಯಲ್ಲಿ ವಿನ್ಯಾಸಗೊಳಿಸಿದ್ದರು. ಚಾಲಕರು ಎಬ್ಬಿಸಿದ ಧೂಳಿನಲ್ಲಿ ಪ್ರೇಕ್ಷಕರು ಕೂಡ ಧೂಳುಮಯವಾಗಿದ್ದರು. ಕೆಲವು ರ್ಯಾಲಿಪಟುಗಳು ವೇಗದಿಂದ ಚಾಲನೆ ಮಾಡುವ ಸಂದರ್ಭ ಕಾರುಗಳು ಇನ್ನೇನು ಮಗುಚಿ ಕೊಳ್ಳುವಂತಹ ಸನ್ನಿವೇಶಗಳು ಎದುರಾಗಿ ಪ್ರೇಕ್ಷಕರ ಮೈ ಝಲ್ಲೆನ್ನುವಂತೆ ಸಾಗಿದವು.ಇಂದಿನ ರ್ಯಾಲಿಯಲ್ಲಿ 150 ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ವಿವಿಧ ವರ್ಗಗಳಾಗಿದ್ದು ಲೇಡಿಸ್ ಕ್ಲಾಸ್, ಓಪನ್ ಇಂಡಿಯ, ಓಪನ್ ಜಿಪ್ಸಿ ಇನ್ನಿತರ ವರ್ಗದಲ್ಲಿ ಅವಕಾಶ ಕಲ್ಪಿಸಲಾಯಿತು. ಮಹಿಳಾ ರ್ಯಾಲಿ ಪಟು ಏಲೀಜ ಜಿಪ್ಸಿಯನ್ನು ವೇಗವಾಗಿ ಚಾಲನೆ ಮಾಡುವದರ ಮೂಲಕ ಪ್ರೇಕ್ಷಕರ ಗಮನ ಸೆಳೆದರು, ರ್ಯಾಲಿಪಟು ಒಬ್ಬರು ವೇಗವಾಗಿ ಚಾಲಿಸುತ್ತಿದ್ದ ಕಾರಿನ ಚಕ್ರವೊಂದು ಕಳಚಿಕೊಂಡಿತ್ತಾದರೂ ಅದೃಷ್ಟವಶಾತ್ ಯಾವದೇ ಅನಾಹುತ ಸಂಭವಿಸಿಲ್ಲ. ರ್ಯಾಲಿ ವೀಕ್ಷಿಸಲು ಜಿಲ್ಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಪಾಲ್ಗೊಂಡಿದ್ದರು.