ಮಡಿಕೇರಿ, ಏ. 8: ವಾರದ ರಜೆ ಬಂತೆಂದರೆ ಮಡಿಕೇರಿಯಲ್ಲಿ ಮಡಿಕೇರಿಯವರು ಕಾಣಸಿಗುವದಿಲ್ಲ. ಸಣ್ಣ, ನಗರ, ಚಿಕ್ಕ-ಚಿಕ್ಕ ರಸ್ತೆ, ರಸ್ತೆ ತುಂಬೆಲ್ಲ ವಾಹನಗಳ ಅಬ್ಬರ... ನಡೆದಾಡಲೂ ಹೆದರುವಂತಹ ಸ್ಥಿತಿ. ಹಾಗಾಗಿ ಎಲ್ಲರೂ ಮನೆಯೊಳಗಡೆ ಬಂದ್...! ಪ್ರವಾಸಿಗರದ್ದೆ ದರ್ಬಾರು.

ಶನಿವಾರ ಹಾಗೂ ಭಾನುವಾರ., ಆಧುನಿಕ ತಂತ್ರಜ್ಞಾನದಡಿ ಈ ಹಿಂದೆ ನೋಟುಗಳನ್ನು ಜೊತೆಯಲ್ಲೇ ಒಯ್ಯಬೇಕಾದ ಪರಿಸ್ಥಿತಿ ಇಲ್ಲ. ಆನ್‍ಲೈನ್, ಎಟಿಎಂಗಳ ಮೂಲಕ ಹಣಕಾಸು ವ್ಯವಹಾರ ಮಾಡಿಕೊಳ್ಳ ಬಹುದು. ಆದರೆ ಪುಟ್ಟ ನಗರ ಮಡಿಕೇರಿಯಲ್ಲಿ ಇರುವ ಬ್ಯಾಂಕ್‍ಗಳಲ್ಲಿನ ವ್ಯವಹಾರವೇ ಅಷ್ಟಕಷ್ಟು. ಯಾವದೇ ಕೈಗಾರಿಕೋದ್ಯಮಗಳಿಲ್ಲದ ನಗರದಲ್ಲಿ ಜನಸಾಮಾನ್ಯರ ಹಣ ಎಷ್ಟು ಸಂಗ್ರಹವಾಗುವದು.

ಇಂತಹ ಪುಟ್ಟ ನಗರಿಗೆ ಲೆಕ್ಕವಿಲ್ಲದಷ್ಟು ಮಂದಿ ಪ್ರವಾಸಿಗರು ದಾಂಗುಡಿ ಇಡುತ್ತಿದ್ದು, ವಾರಾಂತ್ಯದಲ್ಲಿ ಬ್ಯಾಂಕ್ ಎಟಿಎಂಗಳಲ್ಲಿ ಹಣವೇ ಇಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿದೆ. ಅದರಲ್ಲೂ ಇದೀಗ ಚುನಾವಣಾ ನೀತಿ ಸಂಹಿತೆ ಕೂಡ ಜಾರಿಯಲ್ಲಿದ್ದು, ದುಡ್ಡಿದ್ದವರೂ ಕೂಡ ಠೇವಣಿ ಇಡುವ ಪರಿಸ್ಥಿತಿಯಲ್ಲಿಲ್ಲ. ಹಾಗಾಗಿ ಎಟಿಎಂಗಳಲ್ಲಿ ಹಣವಿಲ್ಲದೆ ಪ್ರವಾಸಿಗರೊಡಗೂಡಿ ಸ್ಥಳೀಯರೂ ಕೂಡ ಹಣಕ್ಕಾಗಿ ‘ಕ್ಯೂ’ ನಿಲ್ಲುವಂತಹ ಪರಿಸ್ಥಿತಿ ಸಾಮಾನ್ಯವಾಗಿದೆ.

-ಸಂತೋಷ್