ಮಡಿಕೇರಿ, ಏ. 8: ಕೊಡಗು ಜಿಲ್ಲೆಯಲ್ಲಿ ಧಾರ್ಮಿಕವಾಗಿ, ಸಂಪ್ರದಾಯಬದ್ಧವಾಗಿ ಅದರದ್ದೇ ಆದ ಕೆಲವು ಆಚರಣೆಗಳು ಇವೆ. ಇಂತಹ ವಿಚಾರಗಳಿಗೆ ಸಂಬಂಧಿಸಿದಂತೆ ಚುನಾವಣೆ ಅಥವಾ ಮತ್ತಿತರ ಯಾವದೇ ಕಾರಣಗಳನ್ನು ಮುಂದೊಡ್ಡಿ ಅಡಚಣೆ ಮಾಡಬಾರದು ಎಂದು ಅಖಿಲ ಕೊಡವ ಸಮಾಜ ಆಗ್ರಹಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಸಮಾಜದ ಅಧ್ಯಕ್ಷ ಮಾತಂಡ ಎಂ. ಮೊಣ್ಣಪ್ಪ ಅವರು ಜಿಲ್ಲೆಯಲ್ಲಿ ಮದ್ಯ ಬಳಕೆಗೆ ಪ್ರಸ್ತುತ ಶುಭ ಕಾರ್ಯ ಮತ್ತಿತರ ವಿಚಾರಕ್ಕೆ ಅಡ್ಡಿಪಡಿಸುತ್ತಿರುವದನ್ನು ಖಂಡಿಸಿದ್ದಾರೆ.

ಜಿಲ್ಲೆಯಲ್ಲಿ ಮದ್ಯ ಬಳಕೆ ಈ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ಬಗ್ಗೆ ಯಾವದೇ ರಾಜಕೀಯ ಪಕ್ಷಗಳು ಕೂಡ ಪರಸ್ಪರ ದೋಷಾರೋಪಣೆ ಮಾಡುವದಿಲ್ಲ. ಇದು ಎಲ್ಲರಿಗೂ ತಿಳಿದ ವಿಚಾರ. ಜಿಲ್ಲೆಯಲ್ಲಿನ ಶುಭ ಸಮಾರಂಭಗಳಿಂದ ನೀತಿ ಸಂಹಿತಿಗೆ ಧಕ್ಕೆಯಾದ ಯಾವ ನಿದರ್ಶನಗಳೂ ಇಲ್ಲ. ಆದರೂ ಚುನಾವಣೆ ಬಂದಾಗ ಇದಕ್ಕೆ ಅಡ್ಡಿಮಾಡುವದು ಸರಿಯಲ್ಲ. ಯಾವದೇ ಅಕ್ರಮಗಳು ನಡೆಯದೆ ಜನರು ತಮ್ಮ ದೈನಂದಿನ ಜೀವನ ಸಾಗಿಸುತ್ತಿದ್ದಾರೆ. ಅಧಿಕಾರಿಗಳು ಸಾಮಥ್ರ್ಯವಿದ್ದರೆ ಶುಭ ಕಾರ್ಯಗಳಿಗೆ ಅಡ್ಡಿಪಡಿಸುವ ಬದಲು ನಿರಂತರವಾಗಿ ಸುಮಾರು 40 ದಿನಗಳ ಕಾಲ ಎಲ್ಲಾ ಮದ್ಯದಂಗಡಿಗಳನ್ನು ಬಂದ್ ಮಾಡಿ ಮದ್ಯ ವಹಿವಾಟನ್ನೇ ನಿಲ್ಲಿಸಲಿ ಎಂದಿರುವ ಅವರು ಜಿಲ್ಲಾಡಳಿತದ ಅಧಿಕಾರಿಗಳು ಈ ಕುರಿತು ವಿಶೇಷ ಗಮನ ಹರಿಸಬೇಕೆಂದು ಒತ್ತಾಯಿಸಿದ್ದಾರೆ.