*ಗೋಣಿಕೊಪ್ಪಲು, ಏ. 8 :ಹುಲಿ ಬೇರೆ ಕಡೆಗೆ ಪಲಾಯನಗೈದಿರುವ ದರಿಂದ ಹುಲಿ ಸೆರೆ ಕಾರ್ಯಾಚರಣೆ ಯನ್ನು ಮುಂದೂಡಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಕೊಟ್ಟಗೇರಿಯ ವ್ಯಾಪ್ತಿಯ ಕಾಫಿ ತೋಟದಲ್ಲಿ ಹಲವು ದಿನಗಳಿಂದ ಸುಳಿದಾಡುತ್ತಿದ್ದ ಹುಲಿ ಜಾಡು ಹಿಡಿದು ಶನಿವಾರ ನಸುಕಿನಲ್ಲಿಯೇ ಸೆರೆಗೆ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಅದು ಅಲ್ಲಿಂದಲೂ ತಪ್ಪಿಸಿಕೊಂಡು ಬೇರೆ ಕಡೆಗೆ ಹೊರಟು ಹೋಗಿತ್ತು. ಅರಣ್ಯ ಸಿಬ್ಬಂದಿಗಳು ಹಾಗೂ ತಜ್ಞರು ಸಿಸಿಟಿವಿ ಕ್ಯಾಮರಾದಲ್ಲಿ ದೊರೆತ ಸುಳಿವಿನ ಮೇರೆಗೆ ನಿಗದಿತ ಸ್ಥಳದಿಂದ ಶನಿವಾರ ಕಾರ್ಯಾಚರಣೆ ಕೈಗೊಂಡಿದ್ದರು. 40 ಮಂದಿಯ ತಂಡ ಸುಮಾರು 5 ಗಂಟೆಗಳ ಕಾಲ ತೋಟವನ್ನೆಲ್ಲ ಜಾಲಾಡಿದರೂ ಹುಲಿ ಸುಳಿವು ಲಭಿಸಲಿಲ್ಲ.

ಇದರ ಬೆನ್ನಲ್ಲೆ ಕಾರ್ಯಾಚರಣೆ ನಡೆದ ಸ್ಥಳದಿಂದ 5 ಕಿಮೀ ದೂರದ ಬೆಕ್ಕೆಸೊಡ್ಲೂರು ಗ್ರಾಮದಲ್ಲಿ ಹುಲಿ ದಾಳಿ ನಡೆಸಿ ಕರುವೊಂದನ್ನು ಕೊಂದು ಹಾಕಿತ್ತು. ಹೀಗಾಗಿ ಹುಲಿ ಜಾಗ ಖಾಲಿ ಮಾಡಿರುವದು ಖಚಿತವಾಗಿ ಕಾರ್ಯಾಚರಣೆಯನ್ನು ಶನಿವಾರ 11 ಗಂಟೆಯ ಬಳಿಕ ಸ್ಥಗಿತ ಗೊಳಿಸಲು ತೀರ್ಮಾನಿಸಲಾಯಿತು.

ಕೊಟ್ಟಗೇರಿ ವ್ಯಾಪ್ತಿಯ ಕಾಫಿ ತೋಟದಲ್ಲಿ 19 ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಕಳೆದ ಐದಾರು ತಿಂಗಳಿನಿಂದ ನಿರಂತರವಾಗಿ ಜಾನುವಾರುಗಳ ಮೇಲೆ ಧಾಳಿ ನಡೆಸುತ್ತಿದ್ದರೂ ಸೆರೆಗೆ ಮಾತ್ರ ಸಿಗುತ್ತಿಲ್ಲ. ಎಲ್ಲೆಲ್ಲಿ ಧಾಳಿ ನಡೆಸುತ್ತಿದೆಯೋ ಅಲ್ಲೆಲ್ಲ ಅರಣ್ಯಾಧಿಕಾರಿಗಳು ಬೋನಿಟ್ಟು ಕ್ಯಾಮರಾ ಅಳವಡಿಸಿ ಸೆರೆಗೆ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಚಾಣಾಕ್ಷ ಹುಲಿ ಒಂದೆಡೆ ನಿಲ್ಲದೆ ಪ್ರತಿದಿನವೂ ತನ್ನ ವ್ಯಾಪ್ತಿ ಬದಲಾಯಿಸುತ್ತಿದೆ. ಜಾನುವಾರು ಗಳನ್ನು ಕಳೆದುಕೊಂಡ ರೈತರು ಹುಲಿಸೆರೆಗೆ ಒತ್ತಾಯಿಸಿ ಅರಣ್ಯಾಧಿಕಾರಿ ಗಳ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಇದರಿಂದ ಅರಣ್ಯ ಇಲಾಖೆಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.

ಜಾನುವಾರುಗಳ ಮೇಲೆ ಧಾಳಿ ನಡೆಸುತ್ತಿರುವ ಹುಲಿ ಅವುಗಳ ಮಾಂಸ ತಿನ್ನುತ್ತಿಲ್ಲ. ಸಾಮಾನ್ಯವಾಗಿ ಹುಲಿ ಜಾನುವಾರುಗಳ ಕುತ್ತಿಗೆಗೆ ಕಚ್ಚಿ ಸಾಯಿಸುತ್ತವೆ. ಈ ಹುಲಿ ಹಾಗೆ ಮಾಡುತ್ತಿಲ್ಲ. ಸಿಸಿಟಿವಿ ಕ್ಯಾಮರಾದಲ್ಲಿ ಕಂಡು ಬಂದಿರುವ ಪ್ರಕಾರ ಇದು ಅಂದಾಜು 6 ರಿಂದ 8 ವರ್ಷ ಪ್ರಾಯದ ಕಟ್ಟುಮಸ್ತಾದ ಗಂಡು ಹುಲಿಯಾಗಿದೆ ಎಂದು ಪೊನ್ನಂಪೇಟೆ ಆರ್‍ಎಫ್‍ಒ ಗಂಗಾಧರ್ ಹೇಳಿದ್ದಾರೆ.

-ಎನ್.ಎನ್.ದಿನೇಶ್,

ಚಿತ್ರ: ವಾಸು