ಶನಿವಾರಸಂತೆ, ಏ. 8: ದ್ವಿಚಕ್ರ ವಾಹನದಲ್ಲಿ ಅಪಘಾತಕ್ಕೀಡಾದ ಗಾಯಾಳುಗಳಿಗೆ ವೈದ್ಯರಿಲ್ಲದ ಕಾರಣ ಚಿಕಿತ್ಸೆ ನಿರಾಕರಿಸಿದ ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳ ವರ್ತನೆ ಖಂಡಿಸಿ ಸಮೀಪದ ಒಡೆಯನಪುರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಒಡೆಯನಪುರ ಗ್ರಾಮದ ಮಂಜುನಾಥ್ (29) ಮತ್ತು ಪ್ರತಾಪ್ (20) ಗಾಯಾಳುಗಳು. ಇವರಿಬ್ಬರು ದ್ವಿಚಕ್ರ ವಾಹನದಲ್ಲಿ ಬರುತ್ತಿರುವಾಗ ನಾಯಿಯೊಂದು ಅಡ್ಡ ಬಂದು ಕೆಳಗುರುಳಿ ಗಂಭೀರವಾಗಿ ಗಾಯಗೊಂಡರು. ತಕ್ಷಣ ಗ್ರಾಮಸ್ಥರು ಗಾಯಾಳುಗಳನ್ನು ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆ ತಂದರು. ಕೇಂದ್ರದಲ್ಲಿ ವೈದ್ಯರಿಲ್ಲದ ಕಾರಣ ಸಿಬ್ಬಂದಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸಿದರು. ರೊಚ್ಚಿಗೆದ್ದ ಗ್ರಾಮಸ್ಥರು ಗಾಯಾಳುಗಳೊಂದಿಗೆ ಸಿಬ್ಬಂದಿ ವಿರುದ್ಧ ದಿಕ್ಕಾರ ಕೂಗುತ್ತಾ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಭೇಟಿ ನೀಡಿದ ತಾಲೂಕು ಪಂಚಾಯಿತಿ ಸದಸ್ಯ ಬಿ.ಎಸ್. ಅನಂತ್ಕುಮಾರ್ ಆರೋಗ್ಯ ಕೇಂದ್ರದಲ್ಲಿ ಮೂವರು ವೈದ್ಯರ ಗೈರು ಹಾಜರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಸೋಮವಾರ ಈ ಬಗ್ಗೆ ಮಾಹಿತಿ ಪಡೆಯುವದಾಗಿ ತಿಳಿಸಿ ಪ್ರತಿಭಟನೆ ಹಿಂತೆಗೆಯುವಂತೆ ಪ್ರತಿಭಟನಾಕಾರರ ಮನವೊಲಿಸಿದರು. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿ.ಜೆ. ಹರೀಶ್, ಪ್ರದೀಪ್, ನಾಗೇಶ್, ಧರ್ಮ, ವಿಜಯ್ ಪ್ರತಿಭಟನೆಯ ನೇತೃತ್ವ ವಹಿಸಿದ್ದು, 30 ಮಂದಿ ಪಾಲ್ಗೊಂಡಿದ್ದರು. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.