ವೀರಾಜಪೇಟೆ, ಏ. 8 :ಐದು ವರ್ಷಗಳ ಹಿಂದೆ ಹುದಿಕೇರಿಯಲ್ಲಿ ನಡೆದ ಅರಮಣಮಾಡ ರಾಜ ಎಂಬವರ ಪತ್ನಿ ತುಳಸಿಯ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಎಂ.ರಾಬಿನ್ ಹಾಗೂ ಬಿ.ಸತೀಶ್ ಎಂಬಿಬ್ಬರು ದೋಷ ಮುಕ್ತರೆಂದು ತೀರ್ಪು ನೀಡಿ ಇಲ್ಲಿನ ಎರಡನೇ ಅಪರ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಮೋಹನ್ ಪ್ರಭು ಪ್ರಕರಣದಿಂದ ಬಿಡುಗಡೆಗೊಳಿಸಿದ್ದಾರೆ.

ತಾ. 4.11.2013 ರಂದು ಹುದಿಕೇರಿ, ಬೆಳ್ಳೂರು ಗ್ರಾಮದ ರಾಬಿನ್ ಹಾಗೂ ಸತೀಶ್ ಸೇರಿ ತುಳಸಿಯನ್ನು ಕೊಲೆ ಮಾಡಿದ್ದರೆಂದು ಶ್ರೀಮಂಗಲ ಪೊಲೀಸರು ಮೊಕದ್ದಮೆ ದಾಖಲಿಸಿ ಇಬ್ಬರನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದರು. ಈ ಸಂಬಂಧ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಇದೀಗ ಸೂಕ್ತ ಸಾಕ್ಷ್ಯವಿಲ್ಲದ್ದರಿಂದ ಇಬ್ಬರನ್ನು ಆರೋಪ ಮುಕ್ತಗೊಳಿಸಲಾಗಿದೆ. ಆರೋಪಿಗಳ ಪರ ಎನ್.ಜಿ.ಕಾಮತ್ ವಾದಿಸಿದ್ದರು.