ವೀರಾಜಪೇಟೆ, ಏ.8: ವೀರಾಜಪೇಟೆ ಬಳಿಯ ನರಿಯಂದಡ ಪ್ರೌಢಶಾಲೆಯ ಅತಂತ್ರ ಆಡಳಿತದ ವಿರುದ್ಧ ರೊಚ್ಚಿಗೆದ್ದ ವಿದ್ಯಾರ್ಥಿಗಳ ಪೋಷಕರು, ಗ್ರಾಮಸ್ಥರು ನಿನ್ನೆ ಸಂಜೆ ಕಚೇರಿಯ ಸಭಾಂಗಣದಲ್ಲಿ ಆಡಳಿತ ಮಂಡಳಿಯ ಸಭೆ ನಡೆಯುತ್ತಿದ್ದ ಸಮಯದಲ್ಲಿ ಶಾಲಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಶಾಲಾ ಆಡಳಿತ ಮಂಡಳಿಯ ಈಚೆಗಿನ ಮಹಾಸಭೆಯಲ್ಲಿ ದುಸ್ಥಿತಿಯಲ್ಲಿರುವ ಈ ಪ್ರೌಢಶಾಲೆಯನ್ನು ಆದಿ ಚುಂಚನಗಿರಿ ಮಠಕ್ಕೆ ಷರತ್ತು ಬದ್ಧವಾಗಿ ವಹಿಸಲು ತೀರ್ಮಾನಿಸಿ, ಮಠಾಧೀಶರ ಸಮ್ಮುಖದಲ್ಲಿ ಹಸ್ತಾಂತರಿಸುವ ಮಾತುಕತೆ ನಡೆದಿದ್ದರೂ ಈ ತನಕ ಈ ಕಾರ್ಯ ನಡೆದಿಲ್ಲ. ಶಾಲಾ ಆಡಳಿತ ಮಂಡಳಿ ಈ ಸಂಬಂಧದಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ದರಿಂದ ಶಾಲಾ ಮಕ್ಕಳ ಮುಂದಿನ ಭವಿಷ್ಯಕ್ಕೆ ಧಕ್ಕೆಯಾಗಲಿದೆ. ಈ ನಿಟ್ಟಿನಲ್ಲಿ ಶಾಲಾ ಆಡಳಿತ ಮಂಡಳಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವದನ್ನು ಗ್ರಾಮಸ್ಥರು ವಿರೋಧಿಸಿದ್ದಾರೆ. ಈಗಿನ ಆಡಳಿತ ಮಂಡಳಿಯಿಂದ ವ್ಯವಸ್ಥಿತ ರೀತಿಯಲ್ಲಿ ಶಾಲೆ ಮುನ್ನಡೆಯುತ್ತಿಲ್ಲ. ಇದನ್ನು ಮಠಕ್ಕೆ ವಹಿಸಿದರೆ ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳ ಭವಿಷ್ಯ ಉತ್ತಮ ವಾಗಲಿದೆ ಎಂಬದು ಪೋಷಕರು ಹಾಗೂ ಗ್ರಾಮಸ್ಥರ ಅಭಿಪ್ರಾಯ ವಾಗಿದೆ. ಪ್ರಸ್ತುತ ಪ್ರಾಥಮಿಕ ಶಾಲೆಯಲ್ಲಿ 50 ಮಂದಿ, ಪ್ರೌಢಶಾಲೆಯಲ್ಲಿ 90 ಮಂದಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಈ ಶಾಲೆಯಲ್ಲಿ ಮಕ್ಕಳ ನೋಂದಣಿ ಸಂಖ್ಯೆ ಕುಸಿಯುತ್ತಾ ಬಂದಿದೆ. ಆಡಳಿತ ಮಂಡಳಿಯ ಕಾರ್ಯದರ್ಶಿ ಶಾಲೆಗೆ ದಾನಿಗಳೊಬ್ಬರು ನೀಡಿದ ರೂ10,000 ಹಣವನ್ನು ದುರುಪಯೋಗ ಮಾಡಿಕೊಂಡಿರುವ ಕುರಿತು ಗ್ರಾಮಸ್ಥರು ಹಾಗೂ ಪೋಷಕರು ಪ್ರತಿಭಟನೆಯ ಸಮಯದಲ್ಲಿ ಅರೋಪಿಸಿದರು.
ನರಿಯಂದಡ ಪ್ರೌಢಶಾಲೆಗೆ 60 ವರ್ಷಗಳ ಹಿಂದೆಯೇ ದಾನವಾಗಿ ಬಂದಿರುವ 15 ಎಕರೆ ಜಾಗದ ಪೈಕಿ ಏಳೂವರೆ ಎಕರೆ ಜಾಗವನ್ನು ಶಾಲೆಯೊಂದಿಗೆ ಮಠಕ್ಕೆ ಹಸ್ತಾಂತರಿಸುವಂತೆ ಸಭೆ ತೀರ್ಮಾನಿಸಿರುವದನ್ನು ಆಡಳಿತ ಮಂಡಳಿ ಪ್ರತಿಭಟನೆಕಾರರ ಮುಂದೆ ಒಪ್ಪಿಕೊಂಡಿತು.
ಶಾಲಾ ಕಚೇರಿಗೆ ಮುತ್ತಿಗೆ ಹಾಕುವ ಸಮಯದಲ್ಲಿ ಮಡಿಕೇರಿ ಸರ್ಕಲ್ ಇನ್ಸ್‍ಪೆಕ್ಟರ್ ಸಿದ್ಧಯ್ಯ ಹಾಗೂ ನಾಪೋಕ್ಲು ಸಬ್‍ಇನ್ಸ್‍ಪೆಕ್ಟರ್ ನಂಜುಂಡಪ್ಪ ಪ್ರತಿಭಟನೆಕಾರರನ್ನು ಸಮಾಧಾನಪಡಿಸಿದರು. ಶಾಲಾ ಕಚೇರಿಗೆ ಮುತ್ತಿಗೆ ಸಂದರ್ಭದಲ್ಲಿ ಕಚೇರಿ ಒಳಗಿದ್ದ ಆಡಳಿತ ಮಂಡಳಿಯ ಅಧ್ಯಕ್ಷರು ಪ್ರತಿಭಟನೆಯನ್ನು ಲೆಕ್ಕಿಸದೆ ಪ್ರತಿಕ್ರಿಯೆ ವ್ಯಕ್ತಪಡಿಸದೆ ಹೊರ ನಡೆದರು. ಈ ಬಗ್ಗೆಯೂ ಪ್ರತಿಭಟನೆಕಾರರು ಅಸಮಾಧಾನ ವ್ಯಕ್ತಪಡಿಸಿ ಪ್ರತಿಭಟನೆ ಮುಂದುವರೆಸಲು ಮುಂದಾದಾಗ ಪೊಲೀಸ್ ಅಧಿಕಾರಿಗಳು, ತಾ. 9 ರಂದು (ಇಂದು) ಪೊಲೀಸರ ಸಮ್ಮುಖದಲ್ಲಿ ಸಭೆ ಕರೆಯಲು ಆಡಳಿತ ಮಂಡಳಿಗೆ ಸಮಯ ನಿಗದಿಪಡಿಸಿರುವದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಆಡಳಿತ ಮಂಡಳಿಯ ಉಪಾಧ್ಯಕ್ಷ ಭೀಮಯ್ಯ ಹಾಗೂ ಗಿರೀಶ್ ಶಾಲೆಯನ್ನು ಮಠಕ್ಕೆ ಹಸ್ತಾಂತರಿಸುವ ಕಾರ್ಯ ಚುರುಕುಗೊಳಿಸಲಾಗುವದು. ಇದು ಸಾಧ್ಯವಾಗದಿದ್ದರೆ ವ್ಯವಸ್ಥಿತವಾಗಿ ಶಾಲೆಯನ್ನು ಮುನ್ನಡೆಸಲು ನಾವುಗಳು ಬದ್ಧರಾಗಿದ್ದೇವೆ ಎಂದರು.
ಪ್ರತಿಭಟನಾಕಾರರು, ಗ್ರಾಮಸ್ಥರ ಪರವಾಗಿ ಮಾತನಾಡಿದ ಪ್ರಮುಖರಾದ ಸುಮಂತ್ ಅವರು ಪೋಷಕರಿಗೆ ಮಕ್ಕಳ ವಿದ್ಯಾಭ್ಯಾಸದ ಹಾಗೂ ಅವರ ಭವಿಷ್ಯ ಮುಖ್ಯವಾಗಿದೆ. ಇದನ್ನು ಆಡಳಿತ ಮಂಡಳಿ ಗಮನಿಸಬೇಕು. ಮಕ್ಕಳ ಬಗ್ಗೆ ನಿರ್ಲಕ್ಷ್ಯವನ್ನು ಯಾರೂ ಸಹಿಸುವದಿಲ್ಲ. ತಾ. 9ರಂದು ಆಡಳಿತ ಮಂಡಳಿ ಅಂತಿಮ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಅಹೋ ರಾತ್ರಿ ಧರಣಿ ಮುಷ್ಕರಕ್ಕೆ ಮುಂದಾಗುತ್ತೇವೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಪಿ.ಧನೇಶ್, ಶ್ಯಾಮ್, ಸುಬ್ಬರಾವ್, ಎಂ.ಸುಧೀರ್, ಟಿ. ಅನಂತ್ ಕುಮಾರ್, ಬಿ.ದಿಲೀಪ್, ಅಶೋಕ್, ಸಿ.ದೇವಿಪ್ರಸಾದ್, ರತೀಶ್, ಪ್ರತಾಪ್ ಅಧಿಕ ಸಂಖ್ಯೆಯಲ್ಲಿ ಪೋಷಕರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.