ಶನಿವಾರಸಂತೆ, ಏ. 8: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅರ್ಥ ವ್ಯವಸ್ಥೆಯೇ ಸರಿಯಿಲ್ಲದ ಕಾರಣ ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಜನಸಾಮಾನ್ಯ ಬದುಕಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಿ.ಎ. ಜೀವಿಜಯ ಅಭಿಪ್ರಾಯಪಟ್ಟರು.

ಸಮೀಪದ ಹಂಡ್ಲಿ ಗ್ರಾಮದ ಸಮುದಾಯ ಭವನದ ಆವರಣದಲ್ಲಿ ನಡೆದ ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರ ಹಾಗೂ ಅಭಿಮಾನಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಸ್ತುತ ವ್ಯವಸ್ಥೆಯಲ್ಲಿ ಚುನಾವಣಾ ತಂತ್ರಗಳೇ ವಿಭಿನ್ನವಾಗಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣಾ ಸಂದರ್ಭ ಪತ್ರಿಕೋದ್ಯಮದವರು, ಟಿವಿ, ಮಾಧ್ಯಮದವರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ದೇಶದ ಭವಿಷ್ಯ ರೂಪಿಸಬೇಕಿದೆ ಎಂದರು.

ಬಿಜೆಪಿ ಹಾಗೂ ಕಾಂಗ್ರೆಸ್ ಸಮಾಜ ಮತ್ತು ಧರ್ಮವನ್ನು ಒಡೆಯುವ ಕೆಲಸ ಮಾಡುತ್ತಿವೆ. ರಾಜ್ಯದಲ್ಲಿ ಕುಮಾರಸ್ವಾಮಿ ಪರ್ವ ಆರಂಭವಾಗಿದ್ದು, ಜನತೆ ಪ್ರಾದೇಶಿಕ ಪಕ್ಷದತ್ತ ಒಲವು ತೋರುತ್ತಿದ್ದಾರೆ. ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಮೂಲಕ ಜೆಡಿಎಸ್ ಕೇಂದ್ರ ರಾಜಕಾರಣದಲ್ಲೂ ಬದಲಾವಣೆ ತರಲು ಸಜ್ಜಾಗುತ್ತಿದೆ ಎಂದು ಜೀವಿಜಯ ಭವಿಷ್ಯ ನುಡಿದರು.

ಜೆಡಿಎಸ್ ಜಿಲ್ಲಾ ಘಟಕದ ಉಪಾಧ್ಯಕ್ಷೆ ಎಚ್.ಬಿ. ಜಯಮ್ಮ ಮಾತನಾಡಿ, ಜನಸಾಮಾನ್ಯರ, ಗ್ರಾಮೀಣ ಪ್ರದೇಶದ ಹಾಗೂ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಹಾಗೂ ನುಡಿದಂತೆ ನಡೆಯುವ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಾತ್ರ ರಾಜ್ಯ ಸುಭೀಕ್ಷವಾಗುತ್ತದೆ ಎಂದರು. ಜೆಡಿಎಸ್ ಮಡಿಕೇರಿ ಕ್ಷೇತ್ರ ಸಮಿತಿ ಅಧ್ಯಕ್ಷ ಎಚ್.ಆರ್. ಸುರೇಶ್, ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ರಾಜೇಶ್, ರಾಜ್ಯ ಮುಖಂಡ ಎಚ್.ಪಿ. ಶೇಷಾದ್ರಿ ಮಾತನಾಡಿದರು. ಈ ಸಂದರ್ಭ ಬಿಜೆಪಿ, ಕಾಂಗ್ರೆಸ್ ಪಕ್ಷ ತೊರೆದ 20 ಮಂದಿ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಯಾದರು. ಪ್ರಮುಖರಾದ ಆದಿಲ್ ಪಾಶ, ಡಿ.ಪಿ. ಬೋಜಪ್ಪ, ಚೆನ್ನಬಸಪ್ಪ, ಮುತ್ತೇಗೌಡ, ದೇವರಾಜ್, ಎನ್.ಕೆ. ಅಪ್ಪಸ್ವಾಮಿ, ನಾಝೀಮ್ ಪಾಶ, ಜಯಚಂದ್ರ, ರಮೇಶ್, ಪಾಪಣ್ಣ, ಜಗದೀಶ್, ಶೇಖರ್, ಪುಟ್ಟಪ್ಪ, ಸುರೇಶ್, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.