ಸೋಮವಾರಪೇಟೆ,ಏ.8: ಗ್ರಾಮೀಣ ಭಾಗದ ಆಚರಣೆಗಳಲ್ಲಿ ಒಂದಾದ ಸಮೀಪದ ಕೂತಿ ನಾಡು ಸಬ್ಬಮ್ಮ ದೇವಿ (ಲಕ್ಷ್ಮೀ ದೇವಿ)ಯ ಸುಗ್ಗಿ ಉತ್ಸವ ಶ್ರದ್ಧಾಭಕ್ತಿಯೊಂದಿಗೆ ಸಂಭ್ರಮ-ಸಡಗರದಿಂದ ನಡೆಯಿತು.ಕೂತಿ ಗ್ರಾಮದ ಸುಗ್ಗಿಕಟ್ಟೆಯಲ್ಲಿ ವಿವಿಧ ಆಚರಣೆಗಳು ನಡೆದವು. ಸಬ್ಬಮ್ಮ ದೇವಿಯ ತವರೂರೆಂದೇ ಕರೆಯಲ್ಪಡುವ ಕೂತಿ ಗ್ರಾಮದ ಸುಗ್ಗಿಕಟ್ಟೆಯ ಮೇಲೆ ಬೆಂಕಿ ಹಾಕಿ, ವಿವಿಧ ಪೂಜಾ ಕಾರ್ಯಗಳನ್ನು ನಡೆಸಿ, ಗ್ರಾಮದ ಸಮೃದ್ಧಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.ನಿನ್ನೆ ನೆಂಟರ ಸುಗ್ಗಿ ಅಂಗವಾಗಿ ತವರಿಗೆ ಬಂದ ಹೆಣ್ಣು ಮಕ್ಕಳು, ಆಳಿಯಂದಿರು, ಬೇರೆ ಬೇರೆ ಊರುಗಳಿಂದ ಬಂದ ನೆಂಟರನ್ನು ಗ್ರಾಮಸ್ಥರು ಪ್ರಸಾದ ಕೊಟ್ಟು ಗೌರವಿಸಿದರು. ಸುಗ್ಗಿಯಲ್ಲಿ ಪಾಲ್ಗೊಂಡವರು ಸಬ್ಬಮ್ಮ ದೇವಿಗೆ ವಿವಿಧ ಹರಕೆಗಳನ್ನು ಮಾಡಿಕೊಂಡರು.
ರಾತ್ರಿ ಸುಗ್ಗಿಕಟ್ಟೆಯಲ್ಲಿ ಗ್ರಾಮದವರು ಸಾಂಕೇತಿಕ ಬೇಟೆಯಲ್ಲಿ ಪಾಲ್ಗೊಂಡರು. ನಂತರ 12 ಬಿಲ್ಲುಗಳನ್ನು ಪೂಜಿಸಲಾಯಿತು. ತವರು ಬಿಲ್ಲೆ, ಪಟ್ಟ ಒಪ್ಪಿಸುವ ಧಾರ್ಮಿಕ ಕಾರ್ಯಗಳು ನಡೆದವು. ನಂತರ ನೆರದಿದ್ದವರು ದೇವಿಯ ಪ್ರಸಾದ ಸ್ವೀಕರಿಸಿದರು. ಸುಗ್ಗಿ ಉತ್ಸವ ಸಮಿತಿ ಅಧ್ಯಕ್ಷ ಕೆ.ಜೆ.ಜಯಪ್ಪ, ಕೂತಿ ಗ್ರಾಮದ ಅಧ್ಯಕ್ಷ ಡಿ.ಎ.ಪರಮೇಶ್, ಪಟೇಲರಾದ ಎಚ್.ಡಿ.ಬಸವರಾಜ್, ಪ್ರಮುಖರಾದ ಎಚ್.ಎಂ.ಮುತ್ತಣ್ಣ, ಕೆ.ಟಿ.ಪರಮೇಶ್ ಮತ್ತಿತರರು ಸುಗ್ಗಿ ಉತ್ಸವದ ಉಸ್ತುವಾರಿ ವಹಿಸಿದ್ದರು.
ತಾ.9ರಂದು (ಇಂದು) ನಗರಳ್ಳಿ ಗ್ರಾಮದ ಸುಗ್ಗಿಕಟ್ಟೆಯಲ್ಲಿ ಸುಗ್ಗಿ ಉತ್ಸವ ನಡೆಯಲಿದೆ. ಕೂತಿ ನಾಡು ವ್ಯಾಪ್ತಿಗೆ ಒಳಪಡುವ ಯಡದಂಟೆ, ಕುಂದಳ್ಳಿ, ನಗರಳ್ಳಿ, ಹೆಮ್ಮನಗದ್ದೆ, ಕನ್ನಳ್ಳಿ, ಬೇಕನಳ್ಳಿ, ಬೆಟ್ಟದಳ್ಳಿ, ಜಕ್ಕನಳ್ಳಿ, ಬೆಟ್ಟದಕೊಪ್ಪ, ಹಳ್ಳಿಯೂರು, ಕೊತ್ತನಳ್ಳಿ, ಇನಕನಳ್ಳಿ, ಬೀಕಳ್ಳಿ, ಬೆಂಕಳ್ಳಿ, ಕುಡಿಗಾಣ, ನಾಡ್ನಳ್ಳಿ, ತಡ್ಡಿಕೊಪ್ಪ ಹಾಗೂ ಸಕಲೇಶಪುರ ತಾಲೂಕಿನ ಓಡಳ್ಳಿ ಗ್ರಾಮದ ನಿವಾಸಿಗಳು ಸುಗ್ಗಿ ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ಬೆಳಿಗ್ಗೆ 9.30ಕ್ಕೆ ಬೃಹತ್ ಕಲ್ಲಿನ ಕಂಬದಲ್ಲಿ 4ಮಂದಿ ದೇವರ ಒಡೆಕಾರರನ್ನು ಬೆತ್ತದ ಉಯ್ಯಾಲೆಯಲ್ಲಿ ತೂಗುವ ಮೂಲಕ ಸುಗ್ಗಿ ಧಾರ್ಮಿಕ ಆಚರಣೆಗಳು ಪ್ರಾರಂಭವಾಗಲಿವೆ.