ಮಡಿಕೇರಿ, ಏ.12: ಕೊಡಗು ಗೌಡ ಯುವ ವೇದಿಕೆ ಆಶ್ರಯದಲ್ಲಿ ನಡೆಯತ್ತಿರುವ 19ನೇ ವರ್ಷದ ಗೌಡ ಕುಟುಂಬಗಳ ನಡುವಿನ ಕ್ರಿಕೆಟ್ ಹಬ್ಬದ ಆತಿಥ್ಯವನ್ನು ಚೆರಿಯಮನೆ ಕುಟುಂಬಸ್ಥರು ವಹಿಸಿಕೊಂಡಿದ್ದು, ತಾ. 15ರಂದು ಆರಂಭಗೊಳ್ಳಲಿದೆ. ಈ ಬಾರಿ ದಾಖಲೆಯ 224 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯುವ ವೇದಿಕೆ ಕಾರ್ಯದರ್ಶಿ ಕಟ್ಟೆಮನೆ ರೋಶನ್ ಹಾಗೂ ಇತರರು, ತಾ.13ರಂದು (ಇಂದು) ಮೈದಾನ ಪೂಜೆ ಸಲ್ಲಿಸುವ ಮೂಲಕ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಪಂದ್ಯಾವಳಿಗೆ ಸಿದ್ಧತೆ ನಡೆಯಲಿದ್ದು, ತಾ.15ರಿಂದ ಮೇ 5ರವರೆಗೆ ಪಂದ್ಯಾವಳಿ ನಡೆಯಲಿದೆ ಎಂದು ಹೇಳಿದರು.ಜಿಲ್ಲಾ ಕ್ರೀಡಾಂಗಣದಲ್ಲಿ ಎರಡು ಮೈದಾನಗಳನ್ನು ಸಜ್ಜುಗೊಳಿಸುವದರೊಂದಿಗೆ ಪ್ರತಿನಿತ್ಯ 13 ಪಂದ್ಯಗಳನ್ನು ನಡೆಸಲಾಗುತ್ತಿದ್ದು, ಪ್ರತಿ ಪಂದ್ಯವು 8 ಓವರ್‍ಗಳದ್ದಾಗಿರುತ್ತದೆ. ಮೇ 3ರಿಂದ ಒಂದೇ ಮೈದಾನದಲ್ಲಿ ಪಂದ್ಯ ನಡೆಯಲಿದ್ದು, ಅಂದು ಪ್ರೀ ಕ್ವಾರ್ಟರ್ ಹಂತದ ಪಂದ್ಯಗಳು, ಮೇ 4ರಂದು ಕ್ವಾರ್ಟರ್ ಹಾಗೂ ಸೆಮಿಫೈನಲ್ ಹಾಗೂ ಮೇ 5ರಂದು 10 ಓವರ್‍ಗಳ ಫೈನಲ್ ಪಂದ್ಯ ಜರುಗಲಿದೆ ಎಂದು ವಿವರಿಸಿದರು.

ಚೆರಿಯಮನೆ ಕ್ರಿಕೆಟ್ ಕಪ್‍ನ ಉದ್ಘಾಟನಾ ಸಮಾರಂಭ ತಾ.15ರ ಪೂರ್ವಾಹ್ನ 10ಗಂಟೆಗೆ ನಡೆಯಲಿದ್ದು, ಆದಿಚುಂಚನಗಿರಿ ಮಹಾಸಂಸ್ಥಾನದ ಕೊಡಗು-ಹಾಸನ ಜಿಲ್ಲೆಗಳ ಮಠಾಧಿಪತಿ ಶ್ರೀ ಶಂಭುನಾಥ ಮಹಾಸ್ವಾಮೀಜಿ ಅವರು ಕ್ರೀಡಾಜ್ಯೋತಿ ಬೆಳಗಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಸಮಾರಂಭವನ್ನು ಕೇಂದ್ರ ಸಾಂಖ್ಯಿಕ ಯೋಜನಾ ಖಾತೆ ಸಚಿವ ದೇವರಗುಂಡ ಸದಾನಂದ ಗೌಡ ಅವರು ಉದ್ಘಾಟಿಸಲಿದ್ದು, ಕ್ರೀಡಾಕೂಟವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ ಉದ್ಘಾಟಿಸಲಿದ್ದಾರೆ. ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ನಿವೃತ್ತ ಪ್ರಾಂಶುಪಾಲ ಹಾಗೂ ಚೆರಿಯಮನೆ ಕ್ರಿಕೆಟ್ ಕಪ್ ಕ್ರೀಡಾಸಮಿತಿ ಅಧ್ಯಕ್ಷ ಚೆರಿಯಮನೆ ಡಾ|| ರಾಮಚಂದ್ರ ಅವರು ಆಶಯ ನುಡಿಗಳನ್ನಾಡಲಿದ್ದು, ಜಿ.ಪಂ. ಸದಸ್ಯ ಬಿ.ಎ.ಹರೀಶ್, ಶಾಸಕರಾದ ಕೆ.ಜಿ.ಬೋಪಯ್ಯ,

(ಮೊದಲ ಪುಟದಿಂದ) ಅಪ್ಪಚ್ಚುರಂಜನ್, ಸುನಿಲ್ ಸುಬ್ರಮಣಿ, ಸಂಸದ ಪ್ರತಾಪ್‍ಸಿಂಹ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಕಬಡ್ಡಿ ಆಕರ್ಷಣೆ

ಅದೇ ರೀತಿ ಕ್ರಿಕೆಟ್ ಪಂದ್ಯಾಟದ ಜೊತೆಗೆ ಕುಟುಂಬವಾರು ಪುರುಷರ ಕಬಡ್ಡಿ ಮತ್ತು ಮಹಿಳೆಯರ ಮುಕ್ತ ಕಬಡ್ಡಿ ಪಂದ್ಯಾಟಗಳನ್ನೂ ಆಯೋಜಿಸಲಾಗುತ್ತಿದ್ದು, ತಾ. 22ರಂದು ಈ ಪಂದ್ಯ ನಡೆಯಲಿದೆ. ಈ ಪಂದ್ಯಾವಳಿಗೆ ಈಗಾಗಲೇ ಹೆಸರುಗಳನ್ನು ನೋಂದಾಯಿಸ ಲಾಗುತ್ತಿದ್ದು, ಮೊದಲು ಬರುವ 32 ತಂಡಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಅಲ್ಲದೆ ಮಹಿಳೆಯರ ಮುಕ್ತ ಕಬಡ್ಡಿಗೆ 8 ತಂಡಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ತಿಳಿಸಿದರು. ಕಬಡ್ಡಿ ಪಂದ್ಯಾಟಕ್ಕೆ ಹೆಸರು ನೋಂದಾಯಿಸುವ ತಂಡಗಳು ದುಗ್ಗಳ ಕಪಿಲ್ ಅವರನ್ನು (9731009841) ಸಂಪರ್ಕಿಸುವಂತೆಯೂ ರೋಶನ್ ಮನವಿ ಮಾಡಿದರು.

ಮಹಿಳೆಯರಿಗಾಗಿ ಕುಟುಂಬವಾರು ಥ್ರೋಬಾಲ್ ಪಂದ್ಯಾಟವನ್ನು ತಾ.22ರಂದು ನಡೆಸಲಾಗುತ್ತಿದ್ದು, ಭಾಗವಹಿಸ ಲಿಚ್ಛಿಸುವ ತಂಡಗಳು ಅದೇ ದಿನ ಬೆಳಿಗ್ಗೆ 9.30ರ ಒಳಗಾಗಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದ ಅವರು, ಕ್ರಿಕೆಟ್ ಪಂದ್ಯಾಟದ ಜೊತೆಗೆ ವಿವಿಧ ಸಾಮಾಜಿಕ ಸೇವಾ ಕಾರ್ಯಕ್ರಮ ಗಳಾದ ರಕ್ತದಾನ ಶಿಬಿರ, ನೇತ್ರ ತಪಾಸಣಾ ಶಿಬಿರ, ಮಧುಮೇಹ ತಪಾಸಣಾ ಶಿಬಿರವನ್ನು ಆಯೋಜಿ ಸಲಾಗುವದು ಎಂದರು.

ತಾ.18ರಂದು ಬೆಳಿಗ್ಗೆ 9ಗಂಟೆಗೆ ರೋಟರಿ ಮಿಸ್ಟಿ ಹಿಲ್ಸ್ ಹಾಗೂ ಚೆರಿಯಮನೆ ಕುಟುಂಬಸ್ಥರ ಸಹಯೋಗದಲ್ಲಿ ಕೊಡಗು ಯುವ ವೇದಿಕೆ ವತಿಯಿಂದ ನಡೆಯಲಿರುವ ರಕ್ತದಾನ ಶಿಬಿರವನ್ನು ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷ ಅನಿಲ್ ಎಚ್.ಟಿ. ಉದ್ಘಾಟಿಸಲಿದ್ದು, ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಅಧಿಕಾರಿ ಡಾ|| ಕರುಂಬಯ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ನೇತ್ರ ತಪಾಸಣಾ ಶಿಬಿರವನ್ನು ನೇತ್ರ ತಜ್ಞ ಡಾ|| ಚೆರಿಯಮನೆ ಆರ್ ಪ್ರಶಾಂತ್ ಅವರು ಉದ್ಘಾಟಿಸಲಿದ್ದು, ಮಧುಮೇಹ ಶಿಬಿರವನ್ನು ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ|| ನೆರಿಯನ ನವೀನ್‍ಕುಮಾರ್ ಉದ್ಘಾಟಿಸಲಿದ್ದಾರೆ ಎಂದರು.

ತಾ.22ರಂದು ನಡೆಯುವ ಗೌಡ ಕುಟುಂಬಗಳ ಕಬಡ್ಡಿ ಪಂದ್ಯಾವಳಿ ಯನ್ನು ಬೆಳಿಗ್ಗೆ 9 ಗಂಟೆಗೆ ಕರ್ನಾಟಕ ರಾಜ್ಯ ಕಬಡ್ಡಿ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ಹಾಗೂ ಜಿಲ್ಲಾ ಅಸೋಸಿಯೇಷನ್‍ನ ಅಧ್ಯಕ್ಷ ಹೊಸೊಕ್ಲು ಉತ್ತಪ್ಪ, ಥ್ರೋಬಾಲ್ ಪಂದ್ಯಾವಳಿಯನ್ನು ಅಂತರರಾಷ್ಟ್ರೀಯ ಥ್ರೋಬಾಲ್ ಆಟಗಾರ್ತಿ ಚೆರಿಯಮನೆ ಮೇಘಾ ಪ್ರಭಾಕರ್ ಅವರು ಉದ್ಘಾಟಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಯುವ ವೇದಿಕೆ ಉಪಾಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ನಿರ್ದೇಶಕರಾದ ಪುದಿಯನೆರವನ ರಿಶಿತ್ ಮಾದಯ್ಯ, ದಂಬೆಕೋಡಿ ಗಿರೀಶ್ ಹಾಗೂ ಚೆರಿಯಮನೆ ಕ್ರಿಕೆಟ್ ಹಬ್ಬದ ಕ್ರೀಡಾ ಸಮಿತಿ ಅಧ್ಯಕ್ಷ ಚೆರಿಯಮನೆ ಡಾ|| ರಾಮಚಂದ್ರ ಉಪಸ್ಥಿತರಿದ್ದರು.