ಸೋಮವಾರಪೇಟೆ, ಏ. 12: ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದ ಆಶ್ರಯದಲ್ಲಿ ತಾ. 17 ರಂದು ಮಡಿಕೇರಿಯ ಕಾವೇರಿ ಹಾಲ್‍ನಲ್ಲಿ ‘ಬಿಸು ಪರ್ಬ’ ಸಂತೋಷ ಕೂಟ ಸಮಾರಂಭ ಏರ್ಪಡಿಸಲಾಗಿದೆ. ತುಳು ಭಾಷೆ ಮಾತನಾಡುವ ಎಲ್ಲಾ 14 ಭಾಷಿಕ ಜನಾಂಗದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಾಲೂಕು ಘಟಕದ ಅಧ್ಯಕ್ಷ ಕೆ.ಪಿ. ದಿನೇಶ್ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಳು ಭಾಷಿಕ ಸಮುದಾಯದವರು ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು ಪ್ರತಿಯೊಂದು ಭಾಷಿಕ ಜನಾಂಗದ ಆಚಾರ-ವಿಚಾರ, ಸಂಸ್ಕøತಿ, ಪರಂಪರೆಯನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ತಾ. 17 ರ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಪ್ರಾರಂಭಗೊಳ್ಳಲಿದ್ದು, ಬಿಸು ಹಬ್ಬದ ಪ್ರಾಮುಖ್ಯತೆ ಮತ್ತು ಮಹತ್ವದ ಕುರಿತು ಮಂಗಳೂರಿನ ದಯಾನಂದ್ ಕತ್ತಲ್‍ಸರ್ ಮಾತನಾಡಲಿದ್ದಾರೆ. ಇದೇ ಸಂದರ್ಭ ತುಳು ಭಾಷೆಗೆ ಸಂಬಂಧಪಟ್ಟ ಜಾನಪದ ಪ್ರಾಕಾರಗಳು, ನೃತ್ಯ, ವಿವಿಧ ಸಾಂಸೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ಮಧ್ಯಾಹ್ನ 2 ಗಂಟೆಗೆ ಉಮೇಶ್ ಮಿಜಾರ್ ತಂಡದಿಂದ ‘ತೆಲಿಕೆದ ಗೋಜಿಲ್’ ಎಂಬ ಹಾಸ್ಯಮಯ ನಾಟಕ ಪ್ರದರ್ಶನ ನಡೆಯಲಿದೆ. ಅಪ್ಪೇ ಟೀಚರ್ ಖ್ಯಾತಿಯ ನಟ ಬಜೆಗುಂಡಿಯ ಸುನಿಲ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ತುಳು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ತುಳು ಭಾಷಿಕ ಜನಾಂಗದ ಪ್ರಮುಖರಾದ ಬಿ.ಎಂ. ದಾಮೋದರ್, ಸಂತೋಷ್ ರೈ, ಉಮೇಶ್, ವಿಠ್ಠಲ್, ವಿಶ್ವನಾಥ್, ಇಂದಿರಾ ಮೋಣಪ್ಪ ಉಪಸ್ಥಿತರಿದ್ದರು.
ಸಂತೋಷ ಕೂಟ: ಶನಿವಾರಸಂತೆ ಪಟ್ಟಣದ ರಾಮಮಂದಿರದ ಸಭಾಂಗಣದಲ್ಲಿ ಶನಿವಾರಸಂತೆ ಹಾಗೂ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ತುಳುವೆರ ಜನಪದ ಕೂಟದ ತುಳು ಭಾಷಿಗ ವಿವಿಧ ಸಮುದಾಯದವರ ಸಭೆ ನಡೆಯಿತು.
ಸಭೆಯಲ್ಲಿ ತಾ. 17 ರಂದು ನಡೆಯುವ ಬಿಸು ಪರ್ಬ ಸಂತೋಷ ಕೂಟ ಕಾರ್ಯಕ್ರಮದ ಬಗ್ಗೆ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಎಸ್.ಎನ್. ರಘು ಮಾಹಿತಿಯಿತ್ತರು.
ಸಭೆಯ ಅಧ್ಯಕ್ಷತೆಯನ್ನು ಹೋಬಳಿ ಘಟಕದ ಅಧ್ಯಕ್ಷ ದಯಾನಂದ್ ವಹಿಸಿದ್ದರು. ಹೋಬಳಿ ಘಟಕದ ಪದಾಧಿಕಾರಿಗಳಾದ ಎಸ್.ಎಂ. ರಂಜನ್, ಭಾಸ್ಕರ್, ಶಿವಾನಂದ್, ಪ್ರಕಾಶ್ಚಂದ್ರ, ಶೇಷಪ್ಪ, ಮಂಜುನಾಥ್, ರಾಜಶೇಖರ್, ಪ್ರವೀಣ್, ದಿನೇಶ್, ಲೋಕೇಶ್, ಶೋಭಾ, ಯಶೋದಾ, ಉಷಾ, ಭಾಗ್ಯ ಮತ್ತಿತರರು ಉಪಸ್ಥಿತರಿದ್ದರು.