ಮಡಿಕೇರಿ, ಏ.12 : ಚೆಯ್ಯಂಡಾಣೆಯ ನರಿಯಂದಡ ಪ್ರೌಢಶಾಲೆಯನ್ನು ಯಾವದೇ ಮಠದ ಅಧೀನಕ್ಕೆ ಒಳಪಡಿಸದೆ ಕೊಡವ ಸಮಾಜಕ್ಕೆ ವಹಿಸಿಕೊಡುವ ಬಗ್ಗೆ ಶಾಲಾ ಆಡಳಿತ ಮಂಡಳಿ ನಿರ್ಣಯ ಕೈಗೊಂಡರೆ ಅದಕ್ಕೆ ಪೂರಕ ಸ್ಪಂದನವನ್ನು ಕೊಡವ ಸಮಾಜ ನೀಡಲಿದೆ ಎಂದು ಕೊಡವ ಸಮಾಜ ಒಕ್ಕೂಟ ಸ್ಪಷ್ಟಪಡಿಸಿದೆ.

ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣುಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ವೀರಾಜಪೇಟೆಯ ಬಾಳುಗೋಡಿನಲ್ಲಿ ಒಕ್ಕೂಟದ ಮಾಸಿಕ ಸಭೆ ನಡೆಯಿತು. ಚೆಯ್ಯಂಡಾಣೆ ಕೊಡವ ಸಮಾಜದ ಅಧ್ಯಕ್ಷರು ಹಾಗೂ ನರಿಯಂದಡ ಪ್ರೌಢಶಾಲೆಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಚೇನಂಡ ಸುರೇಶ್ ನಾಣಯ್ಯ ಶಾಲೆಯನ್ನು ಮಠದ ಅಧೀನಕ್ಕೆ ಒಳಪಡಿಸುವ ಬಗ್ಗೆ ನಡೆದಿರುವ ಚರ್ಚೆಯ ಕುರಿತು ಪ್ರಸ್ತಾಪಿಸಿದರು.ಹಿರಿಯ ದಾನಿಗಳು ನೀಡಿದ ನರಿಯಂದಡ ಪ್ರೌಢಶಾಲೆಯ ಆಸ್ತಿ ಯನ್ನು ಯಾವದೇ ಕಾರಣಕ್ಕೂ ಮಠಕ್ಕೆ ನೀಡಬಾರದು, (ಮೊದಲ ಪುಟದಿಂದ) ಬದಲಿಗೆ ಕೊಡವ ಸಮಾಜದ ಅಧೀನಕ್ಕೆ ಒಳಪಡಿಸುವ ನಿರ್ಧಾರ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಬೇಕು. ಕೊಡವ ಸಮಾಜಕ್ಕೆ ನೀಡಲು ಶಾಲಾ ಆಡಳಿತ ಮಂಡಳಿ ನಿರ್ಣಯ ಕೈಗೊಂಡಲ್ಲಿ ಪೂರಕ ವಾತಾವರಣವನ್ನು ಸೃಷ್ಟಿಸಿ ಶಾಲೆಯ ಉಸ್ತುವಾರಿಯನ್ನು ವಹಿಸಿಕೊಳ್ಳಲು ಸಿದ್ಧವಿರುವದಾಗಿ ಸಭೆಯಲ್ಲಿ ಹಾಜರಿದ್ದ ಎಲ್ಲಾ 31 ಕೊಡವ ಸಮಾಜಗಳ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಪ್ರಮುಖರು ಸ್ಪಷ್ಟಪಡಿಸಿದರು.

ಈ ಕುರಿತು ಚುನಾವಣೆ ಕಳೆದ ನಂತರ ಸ್ಪಷ್ಟ ನಿರ್ಧಾರ ಕೈಗೊಳ್ಳುವ ಬಗ್ಗೆ ಸಭೆ ನಿರ್ಣಯ ಕೈಗೊಂಡಿತು. ವಾರ್ಷಿಕ ಮಹಾಸಭೆಯನ್ನು 2018 ಜೂನ್ ತಿಂಗಳಿನಲ್ಲಿ ನಡೆಸಲು ತೀರ್ಮಾನಿಸಲಾಯಿತು. ಸಮಾಜಕ್ಕೆ ಆಗಮಿಸುವ ರಸ್ತೆ ಹಾಗೂ ಮೋರಿ ಕಾಮಗಾರಿಯನ್ನು ಕೈಗೊಂಡ ಪ್ರಮುಖರಿಗೆ ಸಭೆ ಕೃತಜ್ಞತೆ ಸಲ್ಲಿಸಿತು. ಚೇಂದಂಡ ಸುಮಿಸುಬ್ಬಯ್ಯ ಪ್ರಾರ್ಥಿಸಿದರು.

ಒಕ್ಕೂಟದ ಗೌರವ ಅಧ್ಯಕ್ಷ ಮಾತಂಡ ಮೊಣ್ಣಪ್ಪ, ಉಪಾಧ್ಯಕ್ಷ ಮಲಚ್ಚೀರ ಬೋಸ್ ಚಿಟ್ಟಿಯಪ್ಪ, ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಮಂಡೇಡ ರವಿಉತ್ತಪ್ಪ, ಮಾಜಿ ಅಧ್ಯಕ್ಷ ಮಲ್ಲೇಂಗಡ ದಾದಾ ಬೆಳ್ಳಿಯಪ್ಪ, ಕಾರ್ಯದರ್ಶಿ ಶಂಕರಿ ಪೂವಯ್ಯ, ಜಂಟಿ ಕಾರ್ಯದರ್ಶಿ ಕೋದಂಡ ಸನ್ನು ಉತ್ತಪ್ಪ ಮತ್ತಿತರ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು.

ಚೆರಿಯಪಂಡ ಇಮ್ಮಿ ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಧುವರರ ಅನ್ವೇಷಣೆ, ಕೌನ್ಸಿಲಿಂಗ್ ಕಾರ್ಯಕ್ರಮ, ಆಟ್‍ಪಾಟ್ ಪಡಿಪು ಕಾರ್ಯಕ್ರಮ, ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ ಸೇರಿದಂತೆ ಒಕ್ಕೂಟದ ಅಭ್ಯುದಯಕ್ಕೆ ಅಗತ್ಯವಾದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಣಯ ಕೈಗೊಳ್ಳಲಾಯಿತು. ಚೇಂದಂಡ ಸುಮಿಸುಬ್ಬಯ್ಯ ಪ್ರಾರ್ಥಿಸಿದರು.