ಕುಶಾಲನಗರ, ಏ. 12: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಶಾಲನಗರ ವಲಯ 9 ವರ್ಷಗಳನ್ನು ಪೂರೈಸಿ 10ನೇ ವರ್ಷಕ್ಕೆ ಪಾದಾರ್ಪಣೆ ಮಾಡುವದರೊಂದಿಗೆ ಹಲವು ಯೋಜನೆಗಳ ಮೂಲಕ ಇದುವರೆಗೆ ಸಾವಿರಾರು ಸಂಖ್ಯೆಯ ಮಹಿಳೆಯರನ್ನು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಬಲರನ್ನಾಗಿಸುವಲ್ಲಿ ಯಶಸ್ಸು ಕಂಡಿದೆ ಎಂದು ವಲಯ ಮೇಲ್ವಿಚಾರಕ ಕೆ. ಹರೀಶ್ ತಿಳಿಸಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಅಮ್ಮನವರ ಆಶೀರ್ವಾದದೊಂದಿಗೆ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಹಲವು ಸಾಮಾಜಿಕ ಯೋಜನೆ ಯಶಸ್ವಿಯಾಗಿ ಜಾರಿಗೊಂಡಿರುವದು ಇದಕ್ಕೆ ಕಾರಣ ಎಂದಿದ್ದಾರೆ. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ಮಹಿಳೆಯರನ್ನು ಒಗ್ಗೂಡಿಸಿ ಸಬಲರನ್ನಾಗಿಸಿ ಸಮಾಜದ ಮುಖ್ಯ ವಾಹಿನಿಗೆ ಕರೆ ತರುವಲ್ಲಿ ಯೋಜನೆಗಳು ಸಫಲವಾಗಿದೆ ಎಂದು ತಿಳಿಸಿದ್ದಾರೆ.
ಯೋಜನೆಯ ಕುಶಾಲನಗರ ವಲಯದಲ್ಲಿ 340 ಪ್ರಗತಿಬಂಧು ಸ್ವಸಹಾಯ ಸಂಘಗಳಿದ್ದು ಅದರಲ್ಲಿ 3700 ಮಂದಿ ಸದಸ್ಯರುಗಳಿದ್ದಾರೆ. ಪ್ರಸ್ತುತ ವರ್ಷದಲ್ಲಿ ಯೋಜನೆ ಮೂಲಕ ಒದಗಿಸಿರುವ ರೂ. 12 ಕೋಟಿ ಯಷ್ಟು ಪ್ರಗತಿನಿಧಿಯನ್ನು ಹೈನುಗಾರಿಕೆ, ಮನೆ ನಿರ್ಮಾಣ, ಸ್ವ ಉದ್ಯೋಗ, ಕೃಷಿ ಚಟುವಟಿಕೆ ಹಾಗೂ ಇನ್ನಿತರ ಉದ್ದೇಶಗಳಿಗೆ ಬಳಕೆ ಮಾಡಿಕೊಂಡು ತಂಡದ ಸದಸ್ಯರುಗಳು ಅಭಿವೃದ್ಧಿ ಹೊಂದುವದರೊಂದಿಗೆ ಸಾಲವನ್ನು ಶೇ. 100 ಮರುಪಾವತಿಯನ್ನು ಮಾಡುತ್ತಿದ್ದಾರೆ. ಯೋಜನೆಯ ವತಿಯಿಂದ ಕೃಷಿ ಚಟುವಟಿಕೆಗಳಿಗೆ, ಯಂತ್ರೋಪಕರಣಗಳ ಖರೀದಿ, ಶೌಚಾಲಯ ನಿರ್ಮಾಣ, ಸೌರ ವಿದ್ಯುತ್ ಅಳವಡಿಕೆಗೆ 75000 ರೂ.ಗಳ ಅನುದಾನವನ್ನು ನೀಡಲಾಗಿದೆ. ನಿರ್ಗತಿಕರಿಗೆ ಮಾಸಾಶನ, ಸುಜ್ಞಾನ ಶಿಷ್ಯ ವೇತನ ನೀಡಲಾಗುತ್ತಿದೆ. ಸದಸ್ಯರುಗಳಿಗೆ ಜೀವನ ಮಧುರ ಪಾಲಿಸಿ, ರಾಷ್ಟ್ರೀಯ ಪಿಂಚಣಿ ಯೋಜನೆ, ಸಂಪೂರ್ಣ ಸುರಕ್ಷ, ಸೆಲ್ಕೊ ಸೋಲಾರ್ ಅಳವಡಿಕೆ, ಗ್ರೀನ್ ವೇ ಕುಕ್ ಸ್ಟವ್ ವಿತರಣೆ, ನಿರಂತರ ಪತ್ರಿಕೆ ವಿತರಣೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
ಇದರೊಂದಿಗೆ ಗುಡ್ಡೆಹೊಸೂರು ಕಾರ್ಯ ಕ್ಷೇತ್ರದಲ್ಲಿ ಕೃಷಿ ವಿಚಾರ ಸಂಕಿರಣ, ಅತ್ತೂರು, ನಂಜರಾಯಪಟ್ಟಣ ಹಾಗೂ ನೆಲ್ಲಿಹುದಿಕೇರಿ ಕಾರ್ಯ ಕ್ಷೇತ್ರದಲ್ಲಿ ಸಸಿ ನೆಡುವ ಕಾರ್ಯಕ್ರಮ, ನೆಲ್ಲಿಹುದಿಕೇರಿಯಲ್ಲಿ ಶ್ರೀ ಸತ್ಯನಾರಾಯಣ ಸ್ವಾಮಿ ಧಾರ್ಮಿಕ ಕಾರ್ಯಕ್ರಮ, ಕುಶಾಲನಗರದ ಇಂದಿರಾ ಬಡಾವಣೆ, ಮಾದಪಟ್ಟಣ ಇನ್ನಿತರ ಕಾರ್ಯ ಕ್ಷೇತ್ರದಲ್ಲಿ ಶಾಲಾ ಕೈ ತೋಟ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಹಾಗೂ 22 ಧಾರ್ಮಿಕ ಕೇಂದ್ರಗಳಲ್ಲಿ ಸ್ವಚ್ಛತೆ ಕಾರ್ಯಕ್ರಮವನ್ನು ಕೈಗೊಳ್ಳಲಾಗಿದೆ. ಜನ ಸಾಮಾನ್ಯರ ಆರೋಗ್ಯದ ದೃಷ್ಟಿಯಿಂದ ಕುಶಾಲನಗರದಲ್ಲಿ 2 ದಿನಗಳ ಕಾಲ ಸಿರಿ ಧಾನ್ಯ ಮೇಳ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಎಂದು ಮಾಹಿತಿ ಒದಗಿಸಿದರು.
- ಸಿಂಚು