ಎಡಮ್ಯಾರ್ ಒಂದ್ ಕೊಡವರ ಸಾಂಪ್ರದಾಯಿಕ ಆಚರಣೆಯ ಒಂದು ಭಾಗ. ಕೃಷಿ ಪ್ರಧಾನವಾದ ಕೊಡಗಿನಲ್ಲಿ ತಲತಲಾಂತರದಿಂದಲೂ ಹಲವಾರು ಆಚರಣೆಗಳಿಗೆ ವಿಶೇಷವಾದ ಮಾನ್ಯತೆ ನೀಡುತ್ತಾ ಬರಲಾಗುತ್ತಿದೆ. ಅದರಂತೆ ಕೊಡವ ಕ್ಯಾಲೆಂಡರಿನ ಪ್ರಕಾರ ವರ್ಷದ ಮೊದಲ ದಿನವೇ ಈ ಎಡಮ್ಯಾರ್ ಒಂದ್.

ಎಡಮ್ಯಾರ್, ಕಾದ್ಯಾರ್, ಆದರೆ, ಕಕ್ಕಡ, ಚಿನ್ಯಾರ್, ಕನ್ಯಾರ್, ತೊಲ್ಯಾರ್, ಬಿರ್ಚಾರ್, ದಲ್ಮಾರ್, ಮಲ್ಯಾರ್, ಕುಂಬ್ಯಾರ್ ಮೀನ್ನಾರ್ ಎಂಬ ಕೊಡವ ಕ್ಯಾಲೆಂಡರಿನ ತಿಂಗಳ ಲೆಕ್ಕಾಚಾರವಿದ್ದು, ಇಂಗ್ಲಿಷ್ ಕ್ಯಾಲೆಂಡರಿನ ಏಪ್ರಿಲ್ 14 ರಂದು ಬರುವ ಎಡಮ್ಯಾರ್ ಒಂದರಂದು ವರ್ಷಂಪ್ರತಿ ರೈತರು ಬೆಳಿಗ್ಗೆ ಎದ್ದು ತನ್ನ ಉಳುವ ಜೋಡಿ ಎತ್ತುಗಳೊಂದಿಗೆ ಗದ್ದೆಗೆ ತೆರಳುವರು ಪೂರ್ವಕ್ಕೆ ಮುಖಮಾಡಿ ನಿಂತು ಭೂಮಿ ತಾಯಿಗೆ, ಸೂರ್ಯನಿಗೆ ಹಾಗೂ ಜೋಡಿ ಎತ್ತುಗಳಿಗೆ ಅಕ್ಕಿ ಹಾಕಿ ಪೂಜೆ ಸಲ್ಲಿಸಿ ಕೃಷಿ ಕಾರ್ಯಗಳು ಸಾಂಗವಾಗಿ ನಡೆಯಲೆಂದು ಬೇಡಿಕೊಂಡು ಜೋಡಿ ಎತ್ತುಗಳಿಗೆ ನೇಗಿಲನ್ನೆಲ್ಲ ಜೋಡಿಸಿ ಮೂರು ಸುತ್ತು ಉಳುವುದೇ ಈ ಸಂಪ್ರದಾಯದ ವಿಶೇಷ. ಒಂದೆಡೆ ತೆಂಗಿನಕಾಯಿಯನ್ನು ಒಡೆದು ಶುಭಕಾರ್ಯವನ್ನು ಮಾಡಿದರೆ ಮತ್ತೊಂದೆಡೆ ಭೂಮಿ ತಾಯಿಗೆ ಹಾಲು ಹುಯ್ಯುವರು. ಜೊತೆಗೆ ಉಳುಮೆ ಮಾಡಿದ ಒಂದು ಹಿಡಿ ಮಣ್ಣನ್ನು ಭತ್ತ ಸಂಗ್ರಹದ ಪತ್ತಾಯಕ್ಕೆ ಹಾಕುವ ಸಂಪ್ರದಾಯವಿದೆ ಎಂದು ಹಿರಿಯರು ಹೇಳುತ್ತಾರೆ.

ಮಳೆ ಪ್ರಾರಂಭವಾದೊಡನೆ ಉಳುಮೆ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೊದಲು ರೈತನೇ ತಯಾರಿಸಿದ ಮರದ ನೇಗಿಲ ಪರಿಕರಗಳಿಂದ ಗದ್ದೆಯಲ್ಲಿ ಉತ್ತು ಬಿತ್ತು ನಾಟಿ ಕೆಲಸ ಮುಗಿಯುವ ದಿನಕ್ಕೆ ಮಣ್ಣಲ್ಲಿ ಬೆರೆಯುವ ರೈತ ಸಾಕು ಸಾಕಾಗಿ ಹೋಗುತಿದ್ದನಲ್ಲದೆ ಆತನ ದೇಹವೆಲ್ಲ ನೀರು ಹೀರಿ ಶೀತ ಹಿಡಿದಿರುತ್ತದೆ. ಆ ಸಮಯದಲ್ಲಿ ಕೊಡಗಿನ ಸಂಪ್ರದಾಯದ ಕಕ್ಕಡ ತಿಂಗಳಲ್ಲಿ ಪಾಯಸ, ಹಿಟ್ಟನ್ನು ಮಾಡುವದರ ಜೊತೆಗೆ ಕಕ್ಕಡ ಕೋಳಿ (ನಾಟಿಕೋಳಿ), ತೋಡು-ತೊರೆಗಳಲ್ಲಿ ಸಿಗುವ ಏಡಿ, ಮರ ಕೆಸ (ಮರಕೇಂಬು) ದಿಂದ ಮಾಡಿದ ಪತ್ರೊಡೆ, ಎಳ್ಳಿನಿಂದ ಮಾಡಿದ ವಿಶೇಷ ರೀತಿಯ ಎಳ್ಳಡಿಗೆ, ಕಣಿಲೆ, ಅಣಬೆಗಳನ್ನು ಹಾಗೂ ಭತ್ತದಿಂದ ಮಾಡಿದ ವಿಶೇಷ ರೀತಿಯ ಮದ್ಯ (ಗ್ರಾಮೀಣ ಭಾಷೆಯ ಗೆಜ್ಜೆ) ಈ ಕಕ್ಕಡ (ಆಟಿ) ತಿಂಗಳ ಮಳೆಗಾಲದಲ್ಲಿ ಸವಿಯುವ ಮೂಲಕ ಮೈಯನೆಲ್ಲ ಬೆಚ್ಚಗೆ ಮಾಡಿಕೊಳ್ಳುವ ಸಂಪ್ರದಾಯವಾಗಿದೆ.

ಚಿನ್ಯಾರ್ ತಿಂಗಳಲ್ಲಿ ಬರುವ ಕೈಲ್ ಪೊಳ್ದ್ ಆಚರಣೆ ಕೃಷಿ ಕಾರ್ಯ ಮುಗಿದು ಕಕ್ಕಡ ತಿಂಗಳು ಕಳೆದ ನಂತರ ಕುಟುಂಬದವರೆಲ್ಲ ಒಂದೆಡೆ ಸೇರಿ ಕೈಲ್ ಪೊಳ್ದ್ ಹಬ್ಬವನ್ನು ಆಚರಿಸುವ ಸಂಪ್ರದಾಯದಂತೆ ಆಯುಧಗಳ ಜೊತೆಗೆ ಉಳುಮೆಯ ಪರಿಕರಗಳನ್ನು ಪೂಜಿಸುವ ಸಂಪ್ರದಾಯ. ಬೆಳೆದ ಭತ್ತವನ್ನು ಸಂಪ್ರದಾಯದಂತೆ ಕೊಡಗಿನ ಶ್ರೀ ಇಗ್ಗುತಪ್ಪ ದೇವನೆಲೆಯಲ್ಲಿ ಪೊಲಿ-ಪೊಲಿಯೇ ಬಾ... ಎಂದು ದೇವರನ್ನು ಕರೆಯುತ್ತ ಹೊಸ ಅಕ್ಕಿಯನ್ನು ಮನೆಗೆ ತುಂಬಿಕೊಳ್ಳುವ ಪುತ್ತರಿ ನಮ್ಮೆಯ ಸಂಪ್ರದಾಯವಿದೆ. ಒಂದೊಂದು ಆಚರಣೆಗೂ ಸಂಬಂದವಿದೆ.

ಕೊಡಗಿನಲ್ಲೀಗ ಕೂಡು ಕುಟುಂಬವೆಲ್ಲ ಮರೆಯಾಗಿ ಒಟ್ಟಾಗಿ ದುಡಿವ ಸಂಪ್ರದಾಯ ಮರೆಯಾಗಿ. ಉಳುಮೆ ಕಾರ್ಯವಿಲ್ಲದೆ ಬರಡಾದ ಗದ್ದೆಗಳ ಜೊತೆಗೆ ಇಂತಹ ಸಂಪ್ರದಾಯಗಳೂ ಮರೆಯಾಗುತ್ತಿದೆ. ಈ ಸಂಪ್ರದಾಯಗಳನ್ನು ಉಳಿಸಿ ಬೆಳೆಸಲು ಕೊಡವ ಮಕ್ಕಡ ಕೂಟ ಹಾಗೂ ಸಿಎನ್‍ಸಿ ಸಂಘಟನೆಗಳು ವರ್ಷಂಪ್ರತಿ ಕೊಡಗಿನ ನಾನಾ ಕಡೆ ಕೊಡವ ಸಾಂಪ್ರದಾಯಿಕ ಉಡುಪಿನೊಂದಿಗೆ ನೆಲ್ಲಕ್ಕಿ ನಡುಬಾಡೆಯಲ್ಲಿ ಪೂಜೆ ಸಲ್ಲಿಸಿ ಗದ್ದೆಗಳಿಗೆ ತೆರಳಿ ಪೂಜೆ ಸಲ್ಲಿಸಿ ಉಳುಮೆ ಮಾಡಿ ಎಡಮ್ಯಾರ್ ಒಂದನ್ನು ಸಂಪ್ರದಾಯ ಬದ್ದವಾಗಿ ಆಚರಿಸುತ್ತಾ ಬರುತಿದ್ದಾರೆ.

? ಪುತ್ತರಿರ ಕರುಣ್ ಕಾಳಯ್ಯ