ಮಡಿಕೇರಿ, ಏ.12: ಕೊಡವ ಕುಟುಂಬಗಳ ನಡುವೆ ನಡೆಯಲಿರುವ 22ನೇ ವರ್ಷದ ‘ಕುಲ್ಲೇಟಿರ ಹಾಕಿ ನಮ್ಮೆ-2018’ಕ್ಕೆ ತಾ. 15 ರಂದು ನಾಪೋಕ್ಲುವಿನಲ್ಲಿ ಚಾಲನೆ ದೊರೆಯಲಿದ್ದು, ದಾಖಲೆಯ 333 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.ಸುದ್ದಿಗೊಷ್ಠಿಯಲ್ಲಿ ಕುಲ್ಲೇಟಿರ ಹಾಕಿ ನಮ್ಮೆಯ ‘ಟೈಸ್’ ಬಿಡುಗಡೆ ಮಾಡಿದ ಬಳಿಕ, ಉತ್ಸವ ಸಮಿತಿ ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ ಮಾತನಾಡಿ, ತಾ. 15ರಿಂದ ಮೇ 20ರವರೆಗೆ ನಾಪೋಕ್ಲು ಪ್ರೌಢ ಶಾಲೆÉÉಯ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕೊಡವ ಹಾಕಿ ಅಕಾಡೆಮಿ, ಹಾಕಿ ಕೂರ್ಗ್ ಮತ್ತು ಹಾಕಿ ಇಂಡಿಯಾ ಹಾಗೂ ಕುಲ್ಲೇಟಿರ ಕುಟುಂಬದ ಸಹಯೋಗದೊಂದಿಗೆ ಪಂದ್ಯಾವಳಿ ನಡೆಯಲಿದೆಯೆಂದು ತಿಳಿಸಿದರು.ತಾ.15ರಂದು ಬೆಳಿಗ್ಗೆ 10.30 ಗಂಟೆಗೆ ಕುಲ್ಲೇಟಿರ ಕುಟುಂಬದ ಪಟ್ಟೆದಾರ ಕುಲ್ಲೇಟಿರ ಎಸ್. ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ಹಾಕಿ ಹಬ್ಬಕ್ಕೆ ಚಾಲನೆ ನೀಡಲಾಗುವದು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಅಡಿಷನಲ್ ಅಡ್ವೊಕೇಟ್ ಜನರಲ್ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ, ನ್ಯಾಷನಲ್ ಹಾಕಿ ಅಕಾಡೆಮಿಯ ಸಿಇಒ ಹಾಗೂ ಮಾಜಿ ಒಲಂಪಿಯನ್ ಮೊಳ್ಳೇರ ಪಿ.ಗಣೇಶ್, ಕೊಡವ ಹಾಕಿ ಅಕಾಡೆಮಿಯ ಸಂಸ್ಥಾಪಕ ಪಾಂಡಂಡ ಎಸ್. ಕುಟ್ಟಪ್ಪ, ಸಂಸದ ಪ್ರತಾಪ ಸಿಂಹ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್, ಶಾಸಕರುಗಳಾದ ಎಂ.ಪಿ. ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯರುಗಳಾದ ವೀಣಾಅಚ್ಚಯ್ಯ, ಸುನಿಲ್ ಸುಬ್ರಮಣಿ, ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್, ಬೆಂಗಳೂರು ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಕದ್ದಣಿಯಂಡ ಹರೀಶ್ ಬೋಪಣ್ಣ, ಮಾಜಿ ಒಲಂಪಿಯನ್ ಎ.ಬಿ. ಸುಬ್ಬಯ್ಯ, ಭಾರತೀಯ ಕ್ರೀಡಾ ಪ್ರಾಧಿಕಾರದ ಪ್ರಾದೇಶಿಕ ನಿರ್ದೇಶಕ ಎಂ. ಶ್ಯಾಂ ಸುಂದರ್, ನಿರ್ದೇಶಕ ಕೆ. ರಾಮಚಂದ್ರನ್, ಹಾಕಿ ಕೂರ್ಗ್‍ನ ಅಧ್ಯಕ್ಷ ಪೈಕೇರ ಕಾಳಯ್ಯ, ಜಿಲ್ಲಾ ಪಂಚಾಯ್ತಿ

(ಮೊದಲ ಪುಟದಿಂದ) ಸದಸ್ಯ ಪಿ.ಕೆ. ಮುರಳಿ, ನಾಪೋಕ್ಲು ಗ್ರಾ.ಪಂ. ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ಕುಲ್ಲೇಟಿರ ಹಾಕಿ ನಮ್ಮೆಯ ಅಧ್ಯಕ್ಷ ಕೆ.ಪಿ. ಮಂದಣ್ಣ ಹಾಗೂ ಕುಲ್ಲೇಟಿರ ಕುಟುಂಬಸ್ಥರು ಉದ್ಘಾಟನಾ ಸಮಾರಂಭದಲ್ಲಿ ಹಾಜರಿರುವರೆಂದು ಅಜಿತ್ ನಾಣಯ್ಯ ತಿಳಿಸಿದರು. ಇದೇ ಸಂದರ್ಭ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ರಚಿಸಿರುವ ಪಡೆಬೀರ ಕುಲ್ಲೇಟಿ ಪೊನ್ನಣ್ಣ ಪುಸ್ತಕ ಬಿಡುಗಡೆ ಮತ್ತು ಕೊಡವ ಹಾಡಿನ ಧ್ವನಿ ಸುರಳಿಯನ್ನು ಬಿಡುಗಡೆಗೊಳಿಸಲಾಗುವದೆಂದು ತಿಳಿಸಿದರು. ವಿಶೇಷವಾಗಿ ಬೊಳಕಾಟ್, ಉಮ್ಮತ್ತಾಟ್ ಸೇರಿದಂತೆ ಕೊಡವ ಸಾಂಪ್ರದಾಯಿಕ ನೃತ್ಯಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಕುಲ್ಲೇಟಿರ ಹಾಕಿ ನಮ್ಮೆ ಆಯೋಜನೆಯ ಸಂದರ್ಭ ತಂಡಗಳ ಸಂಖ್ಯೆಯನ್ನು 333 ಎಂದು ನಿರೀಕ್ಷಿಸಲಾಗಿತ್ತು. ಕಾಕತಾಳೀಯವೆಂಬಂತೆ ಇಷ್ಟೇ ತಂಡಗಳು ನೋಂದಾಯಿಸಲ್ಪಟ್ಟಿದ್ದು, ತಂಡಗಳ ಸಂಖ್ಯೆ ಹೆಚ್ಚಿರುವ ಕಾರಣ ಪಂದ್ಯಾವಳಿಯ ದಿನವನ್ನು ಮೇ20ರವರೆಗೆ ವಿಸ್ತರಿಸಲಾಗಿದೆ ಎಂದರು. ಇದರಿಂದ ಕೊಡವ ಹಾಕಿ ನಮ್ಮೆಯ ಇತಿಹಾಸದಲ್ಲೇ ಕುಲ್ಲೇಟಿರ ಹಾಕಿ ಉತ್ಸವ ಸುದೀರ್ಘ ನಮ್ಮೆಯಾಗಿ ದಾಖಲಾಗಲಿದೆಯೆಂದು ತಿಳಿಸಿದರು.

ಪಂದ್ಯಾವಳಿಗಾಗಿ ಮೂರು ಮೈದಾನಗಳನ್ನು ಸಜ್ಜುಗೊಳಿಸಲಾಗಿದ್ದು, ಎರಡು ಮೈದಾನಗಳಲ್ಲಿ ಪಂದ್ಯಗಳು ನಡೆಯಲಿವೆ. ಮಳೆ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಮೂರನೇ ಮೈದಾನವನ್ನು ಬಳಸಿಕೊಳ್ಳಲಾಗುತ್ತದೆಂದು ಅಜಿತ್ ನಾಣಯ್ಯ ಮಾಹಿತಿ ನೀಡಿದರು. ಚುನಾವಣಾ ನೀತಿ ಸಂಹಿತಿ ಹಿನ್ನೆಲೆಯಲ್ಲಿ ಮೆರವಣಿಗೆ ಮತ್ತು ಕುಶಾಲ ತೋಪು ಸಿಡಿಸುವ ಕಾರ್ಯಕ್ರಮ ಇರುವದಿಲ್ಲವೆಂದು ಸ್ಪಷ್ಟಪಡಿಸಿದರು.

ಪ್ರದರ್ಶನ ಪಂದ್ಯ

ತಾ.15 ರಂದು ಕುಲ್ಲೇಟಿರ ಕಪ್ ಹಾಕಿ ಉತ್ಸವದ ಉದ್ಘಾಟನೆಯ ಸಂದರ್ಭ ಮಾಜಿ ಒಲಂಪಿಕ್ ಆಟಗಾರರ ತಂಡ ಮತ್ತು ಕೊಡಗಿನ ಅಂತರ್ರಾಷ್ಟ್ರೀಯ ಹಾಕಿ ಆಟಗಾರರ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಲಿದೆ.

ಮಾಜಿ ಒಲಂಪಿಕ್ ಆಟಗಾರರ ತಂಡದಲ್ಲಿ ದೀಪಕ್ ಠಾಕೂರ್, ಪ್ರಭುಜೋತ್ ಸಿಂಗ್, ರಾಜ್ ಪಾಲ್ ಸಿಂಗ್, ವಿಕ್ರಮ ಪಿಳ್ಳೈ, ಯುವರಾಜ್ ವಾಲ್ಮೀಕಿ, ದೇವೇಂದ್ರ್ ವಾಲ್ಮೀಕಿ, ಅಡ್ರಿನ್ ಡಿಸೋಜ, ದಿವೇಶ್ ಚೌಹಾಣ್ ಸೇರಿದಂತೆ ಹಲ ಖ್ಯಾತನಾಮ ಆಟಗಾರರು ಆಡಲಿದ್ದಾರೆ. ಕೊಡಗಿನ ಅಂತರ್ರಾಷ್ಟ್ರೀಯ ಹಾಕಿ ತಂಡದಲ್ಲಿ ನಿತಿನ್ ತಿಮ್ಮಯ್ಯ, ಎಸ್.ಕೆ. ಉತ್ತಪ್ಪ, ನಿಖಿನ್ ತಿಮ್ಮಯ್ಯ, ರಘುನಾಥ್, ಪ್ರಧಾನ್ ಸೋಮಣ್ಣ, ಕೆ.ಪಿ. ಸೋಮಯ್ಯ, ಕೆ.ಟಿ. ಕಾರ್ಯಪ್ಪ, ಚೆಪ್ಪುಡಿರ ಸೋಮಣ್ಣ, ಪುಲಿಯಂಡ ತಿಮ್ಮಣ್ಣ, ಎ.ಬಿ. ಚೀಯಣ್ಣ, ವಿ.ಎಸ್. ವಿನಯ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಫ್ಲಡ್ ಲೈಟ್ ಲೀಗ್

ಪ್ರಮುಖ ಪಂದ್ಯಾವಳಿಯ ಜೊತೆಯಲ್ಲೇ ಕುಲ್ಲೇಟಿರ ಕುಟುಂಬಸ್ಥರು ಮತ್ತು ಬಿ-360 ಕಂಪೆನಿಯ ಸಂಯುಕ್ತಾಶ್ರಯದಲ್ಲಿ ಫ್ಲಡ್ ಲೈಟ್ ಹಾಕಿ ಲೀಗ್ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಇನ್ನಷ್ಟೇ ದಿನವನ್ನು ನಿಗದಿಪಡಿಸಬೇಕಾಗಿದೆ. ಈ ಲೀಗ್ ಪಂದ್ಯಾವಳಿಯಲ್ಲಿ ಪ್ರತಿಷ್ಠಿತ ಇಂಡಿಯನ್ ಆಯಿಲ್ ತಂಡ, ಆರ್‍ಸಿಎಫ್ ಕಾಪತಾಳ, ಸೌತ್ ಸೆಂಟ್ರಲ್ ರೈಲ್ವೆ, ಮುಂಬೈ ಇಲೆವೆನ್ ಮತ್ತು ಕರ್ನಾಟಕ ಇಲೆವೆನ್ ತಂಡಗಳು ಪಾಲ್ಗೊಳ್ಳಲಿರುವದಾಗಿ ವಿವರಗಳನ್ನಿತ್ತರು.

ಸುದ್ದಿಗೋಷ್ಠಿಯಲ್ಲಿ ಕುಲ್ಲೇಟಿರ ಕಪ್ ಹಾಕಿ ಉತ್ಸವ ಆಯೋಜಕ ಸಮಿತಿಯ ಕುಲ್ಲೇಟಿರ ಮಂದಣ್ಣ, ಕುಲ್ಲೇಟಿರ ಶ್ಯಾಂ ಮೊಣ್ಣಪ್ಪ ಹಾಗೂ ಕುಲ್ಲೇಟಿರ ಕಿರಣ್ ಉಪಸ್ಥಿತರಿದ್ದರು.