ಗೋಣಿಕೊಪ್ಪಲು, ಏ. 13: ಸತತ ಏಳು ದಿನಗಳ ಕಾಲ ಹಗಲು, ರಾತ್ರಿ ಎನ್ನದೆ ಹುಲಿ ಸೆರೆಗೆ ಕಾರ್ಯಾಚರಣೆ ನಡೆಸಿದ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ, ತಾ. 13 ರಿಂದ ರಾತ್ರಿಯ ವೇಳೆಯಲ್ಲಿ ಹುಲಿ ಸೆರೆಗೆ ಕಾರ್ಯತಂತ್ರ ರೂಪಿಸಿದ್ದು, ಹಿರಿಯ ಅಧಿಕಾರಿಗಳು ರಾತ್ರಿಯ ವೇಳೆಯಲ್ಲಿ ಹುಲಿ ಸೆರೆಗೆ ಕೊನೆಗೂ ಅನುಮತಿ ನೀಡಿದ್ದಾರೆ.

ಬಾಳೆಲೆ ಸಮೀಪದ ಕೊಟ್ಟಗೇರಿಯ ಮಾಪಂಗಡ ಸಜನ್ ದೇವಯ್ಯ ತೋಟದಲ್ಲಿ ಬೀಡು ಬಿಟ್ಟದ್ದ ಅರಣ್ಯ ಸಿಬ್ಬಂದಿಗಳು ಹಗಲು ವೇಳೆಯ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದು, ಇನ್ನು ಮುಂದೆ ರಾತ್ರಿ ವೇಳೆಯಲ್ಲಿ ಕಾರ್ಯಾಚರಣೆಗೆ ಮುಂದಾಗಲಿದ್ದಾರೆ. ಹುಲಿಯ ಸೆರೆಗೆ ತಂತ್ರಗಾರಿಕೆ ಬದಲಾಯಿಸಿರುವ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿ ಗದ್ದೆ ಬಯಲು ಸಮೀಪದಲ್ಲಿಯೇ ಮೂರು ಅಟ್ಟಣಿಗೆಗಳನ್ನು ಅಳವಡಿಸಿದ್ದು ಇದರ ಸಹಾಯದಿಂದ ಹುಲಿಯ ಚಲನ ವಲನಗಳ ಬಗ್ಗೆ ನಿಗಾ ಇಡಲು ತೀರ್ಮಾನಿಸಿದ್ದಾರೆ. ವಿವಿಧ ಭಾಗದಲ್ಲಿ ಅಳವಡಿಸಿದ್ದ ಕ್ಯಾಮರಾಗಳನ್ನು ಸ್ಥಳಾಂತರ ಮಾಡಿದ್ದು, ಹುಲಿಯ ಮಾರ್ಗದಲ್ಲಿ ಹೆಚ್ಚಿನ ಕ್ಯಾಮರಾ ಅಳವಡಿಸಿದ್ದಾರೆ.

ಹಿರಿಯ ಅಧಿಕಾರಿಗಳು ಸತತ ಏಳು ದಿನಗಳ ಕಾಲ ಹುಲಿ ಸೆರೆಗೆ ಹಲವು ಪ್ರಯತ್ನಗಳನ್ನು ಮಾಡಿದರಾದರೂ, ಹುಲಿ ಸೆರೆ ಆಗಲಿಲ್ಲ. ಇದರಿಂದ ರಾತ್ರಿ ವೇಳೆಯಲ್ಲಿ ಹುಲಿಯ ಸಂಚಾರ ದೃಢಪಟ್ಟಿರುವದರಿಂದ ಹುಲಿ ಸೆರೆಗೆ ಉನ್ನತ ಅಧಿಕಾರಿಗಳು ವಿಶೇಷ ಅನುಮತಿಯನ್ನು ನೀಡಿದ್ದಾರೆ. ಈ ಅನುಮತಿಯನ್ನು ಮಂಜೂರು ಮಾಡಿಸಲು ಎಸಿಎಫ್ ಶ್ರೀಪತಿ ಹಾಗೂ ಡಿಎಫ್‍ಓ ಮರಿಯಾ ಕ್ರಿಸ್ತರಾಜ್ ವಿಶೇಷ ಶ್ರಮ ವಹಿಸಿದ್ದರು. ಸುಮಾರು 300 ಮೀ. ಸುತ್ತಳತೆಯಲ್ಲಿ ನೂರಾರು ಸಿಬ್ಬಂದಿಗಳು ರಾತ್ರಿಯಲ್ಲಿ ಕಾರ್ಯಾಚರಣೆ ನಡೆಸಲಿದ್ದಾರೆ. ಇವರೊಂದಿಗೆ ಅರಣ್ಯ ಹಿರಿಯ ಅಧಿಕಾರಿಗಳಾದ ಡಿಎಫ್‍ಓ ಕ್ರಿಸ್ತರಾಜ್, ಎಸಿಎಫ್ ಶ್ರೀಪತಿ ಹಾಗೂ ಆರ್‍ಎಫ್‍ಓ ಗಂಗಾಧರ್ ಎಸಿಎಫ್ ಪೌಲ್ ಆ್ಯಂಟೋನಿ ಖುದ್ದು ಕಾರ್ಯಾಚರಣೆಯಲ್ಲಿ ಭಾಗವಹಿಸಲಿದ್ದಾರೆ.

ರಾತ್ರಿ ವೇಳೆಯಲ್ಲಿ ಹೆಚ್ಚಾಗಿ ಹುಲಿ ಸಂಚಾರದ ಸುಳಿವು ದೃಢಪಟ್ಟಿದ್ದು ಈ ಬಗ್ಗೆ ರಾತ್ರಿ ಪಾಳೆಯದಲ್ಲಿ ಹುಲಿ ಸೆರೆಗೆ ಹಿರಿಯ ಅಧಿಕಾರಿಗಳಿಂದ ವಿಶೇಷ ಅನುಮತಿ ಪಡೆಯಲಾಗಿದೆ. ಏಳು ದಿನಗಳಿಂದ ನಡೆಸಿದ ಕಾರ್ಯಾಚರಣೆಯಲ್ಲಿ ನಿರೀಕ್ಷಿತ ಫಲಿತಾಂಶ ದೊರಕಲಿಲ್ಲ. ಇದೀಗ ರಾತ್ರಿ ಕಾರ್ಯಾಚರಣೆ ನಡೆಯುವದರಿಂದ ಹುಲಿ ಸೆರೆಯಾಗುವ ಸಾಧ್ಯತೆ ಹೆಚ್ಚಾಗಿವೆ. ಹುಲಿಯು ರಾತ್ರಿ ಸುಮಾರು 8 ಗಂಟೆ ಬಳಿಕ ಬೆಳಗಿನ ಜಾವ 5 ಗಂಟೆಯೊಳಗೆ ಸಂಚರಿಸಲಿದ್ದು, ಬಳಿಕ ಕಣ್ಮರೆಯಾಗುತ್ತಿದೆ ಎಂದು ಅಧಿಕಾರಿ ಮರಿಯ ಕ್ರಿಸ್ತರಾಜ್ ಸುಳಿವು ನೀಡಿದ್ದಾರೆ.

- ಹೆಚ್.ಕೆ. ಜಗದೀಶ್