ಮಡಿಕೇರಿ, ಏ. 13: ಮೊನ್ನೆ ರಾತ್ರಿ ಗುಡುಗು - ಸಿಡಿಲು ಸಹಿತ ಅಬ್ಬರಿಸಿದ ಮಳೆಯಿಂದಾಗಿ ಜಿಲ್ಲೆಯ ಗಡಿ ಗ್ರಾಮದಲ್ಲಿರುವ ಮನೆಯೊಂದಕ್ಕೆ ಹಾನಿ ಉಂಟಾಗಿದೆ. ಮನೆಯ ಗೃಹೋಪಕರಣಗಳು ನಷ್ಟಗೊಂಡು, ಬಾಲಕಿಯೊಬ್ಬಳ ಕಾಲಿಗೆ ಸಿಡಿಲಿನಿಂದ ಗಾಯವುಂಟಾಗಿದೆ ಎಂದು ತಿಳಿದು ಬಂದಿದೆ. ಪೆರಾಜೆ ಗ್ರಾಮದ ತೋಕುಳ್ಳಿ ಲಲಿತ ಎಂಬವರ ಪುತ್ರಿ ಶೋಭಾ ಎಂಬಾಕೆಯ ಕಾಲಿಗೆ ಪೆಟ್ಟಾಗಿದೆ. ಮನೆಯ ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟು ಹೋಗಿವೆ ಎಂದು ಕಂದಾಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಸಿಡಿಲಿನ ಹೊಡೆತಕ್ಕೆ ಮನೆಯ ಗೋಡೆಯೂ ಭಾಗಶಃ ಹಾನಿಗೊಂಡಿದೆ.ಕಳೆದ ಎರಡು ದಿನಗಳಿಂದ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಗ್ರಾಮೀಣ ಪ್ರದೇಶಗಳ ಅಲ್ಲಲ್ಲಿ ಗುಡುಗು - ಮಿಂಚು ಸಹಿತ ಮಳೆಯಾಗಿದೆ. ಮಡಿಕೇರಿ ಹೊರವಲಯದಲ್ಲಿ ಭಾರೀ ಮರವೊಂದು ಬಿದ್ದು ವಿದ್ಯುತ್ ಕಂಬ ಸಹಿತ ತಂತಿಗಳು ಧರೆಗುರುಳಿದರೆ, ಅನೇಕ ಕಡೆ ವಿದ್ಯುತ್ ಕಡಿತಗೊಂಡಿತ್ತು. ಬೇರೆ ಅನಾಹುತಗಳು ತಿಳಿದು ಬಂದಿಲ್ಲ.

ಜಿಲ್ಲಾ ಕೇಂದ್ರ ಮಡಿಕೇರಿ ಸುತ್ತಮುತ್ತ 1.39 ಇಂಚು ಮಳೆಯಾದರೆ, ಅಮ್ಮತ್ತಿ, ಸುಂಟಿಕೊಪ್ಪ ಮುಂತಾದೆಡೆ ಸರಾಸರಿ 1.75 ಇಂಚು ಮಳೆ ದಾಖಲಾಗಿದೆ. ನಾಪೋಕ್ಲು ವ್ಯಾಪ್ತಿಯಲ್ಲಿ 1 ಇಂಚು, ಭಾಗಮಂಡಲಕ್ಕೆ 1.02 ಇಂಚು, ಸಂಪಾಜೆ 0.60, ಕುಶಾಲನಗರ 0.32 ಇಂಚು, ವೀರಾಜಪೇಟೆ 0.60 ಇಂಚು ಮಳೆ ದಾಖಲಾಗಿದೆ. ದಕ್ಷಿಣ ಕೊಡಗಿನ ಶ್ರೀಮಂಗಲ, ಹುದಿಕೇರಿ, ಬಾಳೆಲೆ ವ್ಯಾಪ್ತಿಯಲ್ಲಿ ಮಳೆ ಭುವಿಯನ್ನು ತೇವಗೊಳಿಸಿದೆ. ಇನ್ನು ಕೆಲವೆಡೆ ಮಳೆಯ ಹಾನಿಗಳೊಂದಿಗೆ ಗುಡುಗು ಕಾಣಿಸಿಕೊಂಡಿದ್ದು, ಇನ್ನು ಕೆಲವೆಡೆ ಮಧ್ಯರಾತ್ರಿ ಮಳೆ ಸುರಿದ ಬಗ್ಗೆ ವರದಿಯಾಗಿದೆ.

ಗಾಯಾಳುಗಳು ಚೇತರಿಕೆ

ವಾರದ ಹಿಂದೆ ಗುಡುಗು ಮಿಂಚು ಸಹಿತ ಮಳೆ ಸುರಿದ ವೇಳೆ, ದೇವರಕೊಲ್ಲಿ

(ಮೊದಲ ಪುಟದಿಂದ) ತೋಟದಲ್ಲಿ ಕೆಲಸ ಮಾಡುತ್ತಿದ್ದ ಗಾಳಿಬೀಡು ಮೂಲದ ಮನುಕುಮಾರ್ ಹಾಗೂ ಅಸ್ಸಾಂ ಮೂಲದ ಸಲಾಂ ಎಂಬಿಬ್ಬರು, ಸಿಡಿಲಿನ ಹೊಡೆತಕ್ಕೆ ಸಿಲುಕಿ ತೀವ್ರ ಗಾಯಗೊಂಡಿದ್ದು, ಮನುಕುಮಾರ್ ಹಾಗೂ ಭಾಗಶಃ ಘಾಸಿಗೊಂಡಿದ್ದ ಸಲಾಂ ಇಬ್ಬರಿಗೆ ಪ್ರಥಮ ಚಿಕಿತ್ಸೆ ಬಳಿಕ ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿ, ಇದೀಗ ಸಲಾಂ ಗುಣಮುಖರಾಗಿದ್ದು, ಮನುಕುಮಾರ್ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಡಿಕೇರಿ ತಹಶೀಲ್ದಾರ್ ಶಾರದಾಂಭ ಅವರು ಖಚಿತಪಡಿಸಿದ್ದಾರೆ.

ಅಲ್ಲದೆ ಈ ಗಾಯಾಳುಗಳ ಬಗ್ಗೆ ಮತ್ತು ಪೆರಾಜೆಯ ಶೋಭಾಗೆ ಘಾಸಿಯುಂಟಾದ ಕುರಿತು ಕಂದಾಯ ಇಲಾಖೆಯಿಂದ ಸರಕಾರಕ್ಕೆ ವರದಿ ಸಲ್ಲಿಸಿದ್ದು, ಗಾಯಾಳುಗಳ ಚಿಕಿತ್ಸಾ ವೆಚ್ಚ ಭರಿಸಲು ಕ್ರಮ ಕೈಗೊಳ್ಳಲಾಗುವದು ಎಂದು ಮಾಹಿತಿ ನೀಡಿದ್ದಾರೆ.

ಸುಂಟಿಕೊಪ್ಪ: ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಈ ವರ್ಷದ ಪ್ರಥಮ ವರ್ಷಧಾರೆಯ ಆರ್ಭಟದಿಂದ ಹಲವೆಡೆ ಮರಗಳು ಮನೆಗೆ ಬಿದ್ದು ಜಖಂಗೊಂಡಿದ್ದು, ಗಾಳಿ, ಮಳೆಗೆ ಪಂಚಾಯಿತಿ ಕಛೇರಿಯ ಹೆಂಚುಗಳು ಹಾರಿಹೋಗಿವೆ.

ನಾಕೂರು ಶಿರಂಗಾಲ ಗ್ರಾಮದ ಮಳ್ಳೂರು ಗ್ರಾಮದ ನಿವಾಸಿ ಹಾಗೂ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಂಕರನಾರಾಯಣ ಅವರ ಮನೆಯ 21 ಕರ್ನಾಲ್ ಶೀಟ್ ಹಾರಿ ಹೋಗಿದ್ದು, ನಷ್ಟವಾಗಿದೆ. ನಾಕೂರುವಿನ ವಿ.ಆರ್.ಗೋಪಾ¯ನ್ ಅವರ ಮನೆಯ 8 ಶೀಟುಗಳು ಗಾಳಿಯ ರಭಸಕ್ಕೆ ಹಾರಿಹೋಗಿವೆ. ಕಂದಾಯ ಇಲಾಖೆಯ ಗ್ರಾಮಲೆಕ್ಕಿಗರಾದ ನಾಗೇಶ್‍ರಾವ್ ಸ್ಥಳ ಪರಿಶೀಲಿಸಿ ವರದಿಯನ್ನು ಕಂದಾಯ ಪರಿವೀಕ್ಷಕÀ ಶಿವಪ್ಪ ಅವರಿಗೆ ನೀಡಿದ್ದಾರೆ.

ಸುಂಟಿಕೊಪ್ಪದ ಮಧುರಮ್ಮ ಬಡಾವಣೆ, ಜನತಾ ಕಾಲೋನಿ, ಪಂಪ್‍ಹೌಸ್ ಮನೆಗಳಿಗೆ ನೀರು ನುಗ್ಗಿದ್ದು, ಹಲವಾರು ಮನೆಗಳ ಹೆಂಚು, ಶೀಟ್‍ಗಳು ಹಾರಿಹೋಗಿವೆ. ನಾಕೂರು ಶಿರಂಗಾಲಕ್ಕೆ 1.80 ಇಂಚು, ಸುಂಟಿಕೊಪ್ಪಕ್ಕೆ 1.60ಇಂಚು, ಹರದೂರು 1.80 ಇಂಚು ಹೊಸತೋಟಕ್ಕೆ 0.80 ಸೆಂಟು, ಐಗೂರಿಗೆ 0.60ಸೆಂಟು, ಎಮ್ಮೆಗುಂಡಿಗೆ 1.80 ಇಂಚು ಮಳೆಯಾದ ವರದಿಯಾಗಿದೆ. ಹರದೂರು ಸೇತುವೆ ಬಳಿಯ ವಿದ್ಯುತ್ ಕಂಬ ಧರೆಗೆ ಉರುಳಿ ಬಿದ್ದಿದ್ದು ಸುಂಟಿಕೊಪ್ಪ, ಹೊಸಕೋಟೆ, ಕೊಡಗರಹಳ್ಳಿ, ಗರಗಂದೂರು, ನಾಕೂರು,ಹೊಸತೋಟ ವ್ಯಾಪ್ತಿಯಲ್ಲಿ ಭಾರೀ ಮಳೆ ಗಾಳಿಗೆ ಮರಗಳು ಮುರಿದು ಬಿದ್ದಿವೆ. ಈ ವಿಭಾಗದಲ್ಲಿ ಈ ವರ್ಷ ಬಂದ ಆಶಾದಾಯಕ ಮಳೆಯಿಂದ ಬೆಳೆಗಾರರು ಸಂತಸಗೊಂಡಿದ್ದಾರೆ. ವಿದ್ಯುತ್ ತಂತಿ ಹಾಗೂ ಕಂಬಗಳು ಅಲ್ಲಲ್ಲಿ ಮುರಿದು ಬಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಕೂಡಿಗೆ : ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದ ಸಮೀಪದ ಸೀತಾ ಕಾಲೋನಿ ಹಾಡಿಯಲ್ಲಿ ವಾಸವಿರುವ ರಾಜ, ನಾಗ ಎಂಬವರ ಮನೆಯ ಮೇಲೆ ಮರ ಬಿದ್ದಿದೆ. ವಿದ್ಯುತ್ ಕಂಬ ಮುರಿದು ಬಿದ್ದು ಮನೆಯ ಹೆಂಚುಗಳು ಪುಡಿ ಪುಡಿಯಾಗಿದೆ.