ಕುಶಾಲನಗರ, ಏ 13: ಯುವಬ್ರಿಗೇಡ್ ನೇತೃತ್ವದಲ್ಲಿ ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಮತ್ತು ವಿವಿಧ ಸಂಘಸಂಸ್ಥೆಗಳ ಸಹಯೋಗದೊಂದಿಗೆ 3 ದಿನಗಳ ಕಾಲ ಜಿಲ್ಲೆಯ ಕಾವೇರಿ ನದಿ ಸ್ವಚ್ಛತಾ ಕಾರ್ಯ ಕೈಗೊಂಡ ತಂಡ ಜಿಲ್ಲೆಯಿಂದ ಶುಕ್ರವಾರ ಹಾಸನ ಕಡೆಗೆ ನಿರ್ಗಮಿಸಿದೆ. ಜಿಲ್ಲೆಯ ಬಲಮುರಿ, ನೆಲ್ಲಿಹುದಿಕೇರಿ ಮತ್ತು ಕುಶಾಲನಗರ ವ್ಯಾಪ್ತಿಯಲ್ಲಿ ಜೀವನದಿಯಿಂದ ಟನ್‍ಗಟ್ಟಲೆ ತ್ಯಾಜ್ಯಗಳನ್ನು ತೆರವುಗೊಳಿಸಲಾಗಿದ್ದು ಜನತೆ ನದಿ ಸಂರಕ್ಷಣೆಗೆ ಕೈಜೋಡಿಸಬೇಕಾಗಿದೆ ಎಂದು ಯುವಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಕರೆ ನೀಡಿದ್ದಾರೆ. ಕೊಪ್ಪ ಕಾವೇರಿ ಸೇತುವೆ ಬಳಿ ಕೈಗೊಂಡ ಸ್ವಚ್ಛತಾ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ಸಸಿ ನೆಡಲು ಕುಶಾಲನಗರಕ್ಕೆ ಆಗಮಿಸಿದ ಸಂದರ್ಭ ನದಿ ಕಲುಷಿತ ಗೊಂಡಿರುವದನ್ನು ಗಮನಿಸಿ ಸಾಂಕೇತಿಕ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮತ್ತೆ ರಾಜ್ಯದ 5 ಕಡೆ ಕಾವೇರಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಗಿದೆ. ನದಿ ಒಡಲಿನಲ್ಲಿ ಧಾರ್ಮಿಕ ತ್ಯಾಜ್ಯಗಳೇ ಹೆಚ್ಚಾಗಿ ಕಂಡು ಬಂದಿದ್ದು ಇವುಗಳನ್ನು ನದಿಗೆ ಹಾಕುವ ಕೆಲಸಕ್ಕೆ ಕಡಿವಾಣ ಹಾಕಬೇಕಾಗಿದೆ ಎಂದರು.
ಕುಡಿಯುವ ನೀರಿಗಾಗಿ ಕಾವೇರಿಯನ್ನೇ ದಕ್ಷಿಣ ಭಾರತದ ಕೆಲವು ರಾಜ್ಯಗಳು ಅವಲಂಬಿಸಿದ್ದು ಯಾರೂ ಕೂಡ ಕಾವೇರಿಯನ್ನು ಕಲುಷಿತಗೊಳಿಸದಂತೆ ಮನವಿ ಮಾಡಿದರು.
ಬೆಳಿಗ್ಗೆ 6.30 ಕ್ಕೆ ಆರಂಭವಾದ ಸ್ವಚ್ಛತಾ ಕಾರ್ಯದಲ್ಲಿ ಬ್ರಿಗೇಡ್‍ನ 100 ಕ್ಕೂ ಅಧಿಕ ಕಾರ್ಯಕರ್ತರು, ಸ್ಥಳೀಯ ಸಂಘಟನೆಗಳ ಪ್ರಮುಖರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 30 ಕ್ಕೂ ಅಧಿಕ ಮಹಿಳಾ ಪ್ರತಿನಿಧಿಗಳು, ಸದಸ್ಯರು ಪಾಲ್ಗೊಂಡು ನದಿಯಲ್ಲಿದ್ದ ತ್ಯಾಜ್ಯ ವಸ್ತುಗಳನ್ನು ಹೊರತೆಗೆಯುವಲ್ಲಿ ಕೈಜೋಡಿಸಿದರು. ನದಿಯಿಂದ ಹೊರತೆಗೆದು ಸಂಗ್ರಹಗೊಂಡ 5 ಟ್ರ್ಯಾಕ್ಟರ್‍ಗೂ ಅಧಿಕ ಪ್ರಮಾಣದ ತ್ಯಾಜ್ಯವನ್ನು ಕುಶಾಲನಗರ ಪಟ್ಟಣ ಪಂಚಾಯಿತಿ ಟ್ರ್ಯಾಕ್ಟರ್‍ಗಳ ಮೂಲಕ ಭುವನಗಿರಿಗೆ ಸಾಗಿಸಿ ವಿಲೇವಾರಿಗೊಳಿಸಲಾಯಿತು.
ಬ್ರಿಗೇಡ್‍ನ ರಾಜ್ಯ ಸಂಚಾಲಕ ಚಂದ್ರಶೇಖರ್, ಮೈಸೂರು ವಿಭಾಗದ ಸಂಚಾಲಕ ಚಂದ್ರು ನೇತೃತ್ವದಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ ಕಾರ್ಯಕರ್ತರೊಂದಿಗೆ ಕುಶಾಲನಗರ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್, ಕಾವೇರಿ ನದಿ ಸ್ವಚ್ಛತಾ ಆಂದೋಲನಾ ಸಮಿತಿ ಸಂಚಾಲಕ ಎಂ.ಎನ್.ಚಂದ್ರಮೋಹನ್, ಡಿ.ಆರ್. ಸೋಮಶೇಖರ್, ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಗ್ರೀನ್ ಸಿಟಿ ಫೋರಂ ಅಧ್ಯಕ್ಷ ಅಂಬೇಕಲ್ ನವೀನ್, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಪ್ರಮುಖರಾದ ಮೋಂತಿ ಗಣೇಶ್, ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿ ಅಧ್ಯಕ್ಷ ಅಮೃತ್‍ರಾಜ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಶಾಲನಗರ ವಲಯ ಮೇಲ್ವಿಚಾರಕ ಹರೀಶ್, ಸ್ಥಳೀಯ ಪ್ರಮುಖರಾದ ಕೆ.ಕೆ.ದಿನೇಶ್, ಅನೀಶ್, ಕೆ.ಎನ್. ದೇವರಾಜ್, ಉಮಾಶಂಕರ್, ನವನೀತ್, ದರ್ಶನ್, ಲಕ್ಷ್ಮಿನಾರಾಯಣ, ಆಲ್ವಿನ್ ಮತ್ತಿತರ ಪ್ರಮುಖರು ಪಾಲ್ಗೊಂಡಿದ್ದರು. ನೂರಾರು ಕಾರ್ಯಕರ್ತರಿಗೆ ಸ್ಥಳೀಯ ಐಶ್ವರ್ಯ ಪಿಯು ಕಾಲೇಜು ಮತ್ತು ಜ್ಞಾನಗಂಗಾ ವಸತಿ ಶಾಲೆಯ ಮುಖ್ಯಸ್ಥ ಪುಲಿಯಂಡ ರಾಮ್ ದೇವಯ್ಯ ಊಟೋಪಚಾರ ವ್ಯವಸ್ಥೆ ಕಲ್ಪಿಸಿದ್ದರು. ಕುಶಾಲನಗರದ ಚೇಂಬರ್ ಆಫ್ ಕಾಮರ್ಸ್, ಹಿಂದೂಪರ ಸಂಘಟನೆಗಳ, ಕೂಡಿಗೆ ಡೈರಿ ಮೂಲಕ ಕಾರ್ಯಕರ್ತರಿಗೆ ಮಜ್ಜಿಗೆ, ತಂಪು ಪಾನೀಯಗಳ ವಿತರಣೆ ನಡೆಯಿತು. ನದಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ತ್ಯಾಜ್ಯಗಳಿಂದ ತೀವ್ರ ಗಾಯಗಳು ಉಂಟಾದ ಹಿನ್ನೆಲೆಯಲ್ಲಿ ಹಲವು ಕಾರ್ಯಕರ್ತರಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಟಿಟಿ ಚುಚ್ಚುಮದ್ದು ನೀಡುವಲ್ಲಿ ಮಡಿಕೇರಿಯ ಸಮಾಜ ಸೇವಕಿ ಮೋಂತಿ ಗಣೇಶ್ ತೊಡಗಿಸಿಕೊಂಡಿದ್ದರು.
ಇದೇ ಸಂದರ್ಭ ಕೊಡಗು ಪತ್ರಕರ್ತರ ಸಂಘ, ಗ್ರೀನ್ ಸಿಟಿ ಫೋರಂ, ಕಾವೇರಿ ನದಿ ಸ್ವಚ್ಚತಾ ಆಂದೋಲನ ಪ್ರಮುಖರು ಬ್ರಿಗೇಡ್ ಮಾರ್ಗದರ್ಶಕರನ್ನು ಸನ್ಮಾನಿಸಿ ಗೌರವಿಸಿದರು.
ನದಿಯಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದ್ದಂತೆ ಸೇತುವೆ ಮೇಲ್ಭಾಗದಿಂದ ತ್ಯಾಜ್ಯಗಳು ಎಸೆಯುತ್ತಿದ್ದ ಘಟನೆಗಳು ನಡೆದು ಸ್ವಚ್ಛತಾ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾದ ಪ್ರಸಂಗಗಳು ನಡೆದವು. ತ್ಯಾಜ್ಯ ಎಸೆದ ವ್ಯಕ್ತಿಗಳನ್ನು ನದಿಗೆ ಇಳಿಸಿ ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸುವಂತೆ ಮನವಿ ಮಾಡುತ್ತಿದ್ದ ದೃಶ್ಯವೂ ಗೋಚರಿಸಿದವು. ನದಿಯಲ್ಲಿ ನೂರಾರು ದೇವರುಗಳ ಚಿತ್ರಪಟಗಳು, ಮಾಟ ಮಂತ್ರಕ್ಕೆ ಬಳಸಿದ ಕುಡಿಕೆ, ಮಡಿಕೆಗಳು, ಸೀರೆಗಳು, ಬಟ್ಟೆಗಳು, ತಲೆದಿಂಬು, ಬೆಡ್, ಲಗ್ನಪತ್ರಿಕೆ, ಮದ್ಯದ ಬಾಟಲಿಗಳು ಸೇರಿದಂತೆ ಮಾನವ ಬಳಸುವ ಬಹುತೇಕ ವಸ್ತುಗಳ ಪಳೆಯುಳಿಕೆಗಳು ಕಂಡುಬಂದವು. ಕುಶಾಲನಗರ ಪಟ್ಟಣ ಪಂಚಾಯಿತಿಯ ಪೌರಕಾರ್ಮಿಕರ ಪ್ರಮುಖರಾದ ಕುಮಾರ್ ನೇತೃತ್ವದಲ್ಲಿ ಟ್ರ್ಯಾಕ್ಟರ್‍ನಲ್ಲಿ ತ್ಯಾಜ್ಯಗಳನ್ನು ಕಾರ್ಯಕರ್ತರು ತುಂಬಿ ಕಳುಹಿಸಿಕೊಟ್ಟರು. ಸೇತುವೆ ಮೇಲೆ ಅರಿವು ಮೂಡಿಸುವ ಫಲಕಗಳನ್ನು ಅಳವಡಿಸಲಾಯಿತು.
ನಂತರ ನದಿ ತಟದ ಜನತೆಗೆ ಕರಪತ್ರಗಳನ್ನು ವಿತರಿಸುವ ಮೂಲಕ ಬ್ರಿಗೇಡ್ ತಂಡ ಕಾರ್ಯಕರ್ತರು ನದಿ ಸಂರಕ್ಷಣೆ ಬಗ್ಗೆ ಜಾಗೃತಿ ಅರಿವು ಮೂಡಿಸಿದರು.
ಕುಶಾಲನಗರ ಕೊಪ್ಪ ಕಾವೇರಿ ನದಿ ಸೇತುವೆ ಮೇಲ್ಭಾಗದಿಂದ ತ್ಯಾಜ್ಯ ಎಸೆದು ನದಿ ಕಲುಷಿತಗೊಳಿಸುತ್ತಿರುವ ಕ್ರಮವನ್ನು ಶಾಶ್ವತವಾಗಿ ನಿರ್ಬಂಧಿಸುವ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿಯಿಂದ ವಿಶೇಷ ಯೋಜನೆಯೊಂದು ಈಗಾಗಲೆ ತಯಾರಿಯಾಗಿದೆ ಎಂದು ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ಮಾಹಿತಿ ನೀಡಿದ್ದಾರೆ. ಕುಶಾಲನಗರದಲ್ಲಿ ನದಿ ಸ್ವಚ್ಛತೆ ಸಂದರ್ಭ ಸ್ಥಳಕ್ಕೆ ಭೇಟಿ ನೀಡಿದ್ದ ಅವರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದು ಈ ಬಾರಿಯ ಬಜೆಟ್‍ನಲ್ಲಿ ನದಿ ಸಂರಕ್ಷಣೆಗೆ ಹಣ ಮೀಸಲಿರಿಸಲಾಗಿದೆ. ಆಡಳಿತ ಮಂಡಳಿ ಸಭೆಯಲ್ಲಿ ಚರ್ಚೆ ನಡೆದಿದೆ. ಚುನಾವಣೆ ನಂತರ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವದು ಎಂದು ಅವರು ಹೇಳಿದ್ದಾರೆ. -ಸಿಂಚು