ಶ್ರೀಮಂಗಲ, ಏ. 13: ಕಾಫಿ ಮತ್ತು ಕರಿಮೆಣಸು ದರ ಕುಸಿತದೊಂದಿಗೆ, ಗಣನೀಯವಾಗಿ ಉತ್ಪ್ಪಾದನೆಯು ಕುಂಠಿತವಾಗಿದ್ದು, ಬೆಳೆಗಾರರು ತೀವ್ರ ಸಂಕಷ್ಟದ ಸ್ಥಿತಿಯಲ್ಲಿರುವ ಸಂದರ್ಭ ಬ್ಯಾಂಕ್‍ಗಳು ಸಾಲ ವಸೂಲಾತಿಗೆ ಬಲತ್ಕಾರ ಹಾಗೂ ಕಿರುಕುಳ ನೀಡದಂತೆ ಸೂಕ್ತ ಕ್ರಮಕೈಗೊಳ್ಳುವಂತೆ ಜಿಲ್ಲಾ ಮಟ್ಟದ ಬ್ಯಾಂಕರ್ಸ್ ಸಮಿತಿಯ (ಡಿಎಲ್‍ಬಿಸಿ) ಅಧ್ಯಕ್ಷರಾದ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲು ಜಿಲ್ಲಾ ಬೆಳೆಗಾರರ ಒಕ್ಕೂಟದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಗೋಣಿಕೊಪ್ಪ ಸಿಲ್ವರ್ಸ್‍ಸ್ಕೈ ಹೊಟೇಲ್ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.(ಮೊದಲ ಪುಟದಿಂದ)ಕಳೆದ ಒಂದು ದಶಕದಲ್ಲಿಯೇ ಅತ್ಯಂತ ಕಡಿಮೆ ದರಕ್ಕೆ ಕರಿಮೆಣಸು ಮಾರುಕಟ್ಟೆ ಕುಸಿದಿದೆ. ಇನ್ನೊಂದು ಕಡೆ ಕಾಫಿ ಧಾರಣೆ ಸಹ 2 ದಶಕದ ಹಿಂದಿನ ದರಕ್ಕಿಂತ ಕಡಿಮೆ ದರ ಇದೆ. ಇದರೊಂದಿಗೆ ಕಾಫಿ ಹಾಗೂ ಕರಿಮೆಣಸು ಉತ್ಪಾದನೆಯಲ್ಲೂ ಕುಸಿತ ಉಂಟಾಗಿದೆ. ಉತ್ಪಾದನ ವೆಚ್ಚ ಶೇ. 300ರಷ್ಟು ಕಳೆದ ಒಂದು ದಶಕದಿಂದ ಹೆಚ್ಚಳವಾಗಿದ್ದರೂ, ಅದಕ್ಕೆ ಪೂರಕವಾಗಿ ಈ ಬೆಳೆಗಳ ಮಾರುಕಟ್ಟೆ ಏರಿಕೆ ಕಂಡಿಲ್ಲ. ಇಂತಹ ಸಂಕಷ್ಟದ ಸ್ಥಿತಿಯಲ್ಲಿ ಬ್ಯಾಂಕ್‍ನವರು ರೈತರ ಸಾಲ ವಸೂಲಾತಿಗೆ ಮುಂದಾಗುತ್ತಿರುವದು ಸರಿಯಲ್ಲ. ರೈತರ ಸಂಕಷ್ಟದ ಸ್ಥಿತಿಯನ್ನು ಅರಿತು ಬ್ಯಾಂಕ್‍ನವರು ಸ್ಪಂಧಿಸಬೇಕಾಗಿದೆ ಎಂದು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಹಲವು ಬ್ಯಾಂಕ್‍ನವರು ಸಾಲ ವಸೂಲಾತಿಗೆ ನ್ಯಾಯಾಲಯದಲ್ಲಿ ದಾವೆ, ವಕೀಲರ ಮೂಲಕ ಕಾನೂನು ಕ್ರಮ ಕೈಗೊಳ್ಳುವ ನೊಟೀಸು ಜಾರಿ ಮಾಡುವ ಮೂಲಕ ಬಲಾತ್ಕಾರದ ವಸೂಲಾತಿಗೆ ಮುಂದಾಗುತ್ತಿರುವ ಪ್ರಕರಣ ನಡೆಯುತ್ತಿದೆ. ಇದಲ್ಲದೆ, ಎನ್‍ಪಿಎ ಸಾಲ ಹೊಂದಿರುವ ಬೆಳೆಗಾರರು ತಮ್ಮ ಜೀವನ ನಿರ್ವಾಹಣೆಗೆ ಬ್ಯಾಂಕ್ ಖಾತೆಯಲ್ಲಿ ಇಟ್ಟಿರುವ ಅಲ್ಪ-ಸ್ವಲ್ಪ ಹಣವನ್ನು ಯಾವದೇ ಪೂರ್ವ ಮಾಹಿತಿ ಇಲ್ಲದೆ ಏಕಾಏಕಿ ಸಾಲಕ್ಕೆ ಜಮೆ ಮಾಡಲಾಗು ತ್ತದೆ. ಇದರಿಂದ ಬೆಳೆಗಾರರು ತಮ್ಮ ಖಾತೆಗಳಲ್ಲಿ ಹಣ ಇರಿಸಿಕೊಳ್ಳದೇ ಇರುವದಕ್ಕೆ ಬ್ಯಾಂಕ್‍ಗಳೇ ಪ್ರೇರಣೆ ನೀಡಿದಂತಾಗುತ್ತದೆ ಎಂದು ಅಸಮಾಧಾದಾನ ವ್ಯಕ್ತವಾಯಿತು.

ಎನ್‍ಪಿಎ ಸಾಲದ ಬೆಳೆಗಾರರು ಓಟಿಎಸ್ ಮೂಲಕ ಸಾಲ ಚುಕ್ತಾ ಮಾಡಿದ್ದರೂ ಸಹ ಅವರಿಗೆ ಅದೇ ಬ್ಯಾಂಕ್ ಶಾಖೆಯಲ್ಲಿ ಅಥವಾ ಬೇರೆ ಬ್ಯಾಂಕ್‍ನಲ್ಲಿ ಹೊಸ ಸಾಲ ಪಡೆಯುವಾಗ ಅವರಿಗೆ ಸಾಲ ನೀಡಲು ಭದ್ರತೆ ನೀಡಿದವರಿಗೂ ಓಟಿಎಸ್ ರಿಯಾಯಿತಿಯನ್ನು ಮರುಪಾವತಿಸುವಂತೆ ಒತ್ತಾಯಿಸಲಾಗುತ್ತದೆ. ಬ್ಯಾಂಕ್‍ಗಳು ಈ ರೀತಿಯ ಕಿರುಕುಳ ನೀತಿ ಅನುಸರಿಸುವದನ್ನು ತಕ್ಷಣ ನಿಲ್ಲಿಸುವಂತೆ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ, ಬಲತ್ಕಾರದ ಸಾಲ ವಸೂಲಾತಿಗೆ ಮುಂದಾಗದಂತೆ ನಿರ್ದೇಶನ ನೀಡಲು ಮನವಿ ಸಲ್ಲಿಸಲು ನಿರ್ಧರಿಸಲಾಯಿತು. ಅಂತಹ ಬ್ಯಾಂಕ್‍ಗಳ ಎದುರು ಬೆಳೆಗಾರರನ್ನು ಸಂಘಟಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಯಿತು.

ಪ್ರತಿಭಟನೆ ಎಚ್ಚರಿಕೆ

ಜಿಲ್ಲೆಯಲ್ಲಿ ತಮ್ಮ ಕೃಷಿ ಚಟುವಟಿಕೆಗಳಿಗೆ ಉಪಯೋಗಿ ಸುತ್ತಿರುವ ಪಿಕ್ ಅಪ್ ವಾಹನ ಹೊಂದಿರುವ ಬೆಳೆಗಾರರಿಗೆ ಜಿಲ್ಲೆಯ ವಾಣಿಜ್ಯ ತೆರಿಗೆ ಇಲಾಖೆ ವತಿಯಿಂದ ಕರ್ನಾಟಕ ವೃತ್ತಿ ತೆರಿಗೆ ಕಾಯಿದೆ 1976ರ ಪ್ರಕರಣ 7(3)ರ ಅಡಿಯಲ್ಲಿ ವಾಣಿಜ್ಯ ತೆರಿಗೆ ಪಾವತಿಸಲು ನೊಟೀಸು ಜಾರಿ ಮಾಡಲಾಗುತ್ತಿದೆ. ಬೆಳೆಗಾರರು ಹಳದಿ ನಂಬರ್ ಪ್ಲೇಟ್‍ಗಳನ್ನು ಹೊಂದಿರುವ ಪಿಕ್‍ಅಪ್ ಇತರ ಗೂಡ್ಸ್ ವಾಹನ, ಯುಟಿಲಿಟಿ ವಾಹನಗಳನ್ನು ತಮ್ಮ ಸ್ವಂತ ಕೃಷಿ ಸಾಮಾಗ್ರಿ ತರಲು, ಗೊಬ್ಬರ ಹಾಗೂ ಪಸಲನ್ನು ಮಾರಾಟಕ್ಕೆ ಸಾಗಿಸಲು ಬಳಸುತ್ತಿದ್ದಾರೆ. ಅವುಗಳನ್ನು ಬಾಡಿಗೆಗೆ ಓಡಿಸುತ್ತಿಲ್ಲ. ಹೀಗಿರುವಾಗ ಇಂತಹ ವಾಹನ ಹೊಂದಿರುವ ಬೆಳೆಗಾರರಿಗೆ ತೆರಿಗೆ ಕಟ್ಟುವಂತೆ ನೊಟೀಸು ಜಾರಿ ಮಾಡಿರುವದನ್ನು ಸಭೆಯಲ್ಲಿ ಖಂಡಿಸಲಾಯಿತು. ಯಾವದೇ ಬೆಳೆಗಾರರು ಈ ತೆರಿಗೆಯನ್ನು ಪಾವತಿಸುವ ಅವಶ್ಯಕತೆ ಇಲ್ಲ. ವಾಣಿಜ್ಯ ಇಲಾಖೆ ತಕ್ಷಣದಿಂದಲೇ ಈ ತೆರಿಗೆ ಪಾವತಿಗೆ ನೀಡುತ್ತಿರುವ ನೊಟೀಸುಗಳನ್ನು ನಿಲ್ಲಿಸದಿದ್ದರೆ ಸಂಬಂಧಿಸಿದ ಇಲಾಖೆಯ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ನಿರ್ಧರಿಸಲಾಯಿತು.

ಈ ಸಂದರ್ಭ ಒಕ್ಕೂಟದ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಜಂಟಿ ಕಾರ್ಯದರ್ಶಿ ಬಾಚಂಗಡ ದಾದ ದೇವಯ್ಯ, ತಾಂತ್ರಿಕ ಸಲಹೆಗಾರ ಚೆಪ್ಪುಡೀರ ಶೆರಿ ಸುಬ್ಬಯ್ಯ, ಖಜಾಂಚಿ ಮಾಣೀರ ವಿಜಯ ನಂಜಪ್ಪ, ಪ್ರಮುಖರಾದ ಅರವiಣಮಾಡ ಸತೀಶ್ ದೇವಯ್ಯ, ಕೆ.ಎನ್.ಸಂದೀಪ್, ಐಚೆಟ್ಟಿರ ರಂಜಿ ಕುಟ್ಟಯ್ಯ, ಐಚೆಟ್ಟಿರ ಸುಬ್ಬಯ್ಯ, ಇಟ್ಟಿರ ವಿಷ್ಣು, ಬೊಳ್ಳೆರ ಪೊನ್ನಪ್ಪ ಮತ್ತಿತರರು ಮಾತನಾಡಿದರು.