ಮಡಿಕೇರಿ, ಏ.13 : ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವದರಿಂದ ತಾ.18ರಂದು ಬಾಳೆಲೆಯಲ್ಲಿ ನಡೆಸಲುದ್ದೇಶಿಸಿದ್ದ ಕೊಡವ ಭಾಷಿಕರ ಸಾಹಿತ್ಯ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಏ.19ರಂದು ನಡೆಯಬೇಕಿದ್ದ ಅಕಾಡೆಮಿಯ ಸರ್ವ ಸದಸ್ಯರ ಸಭೆಯನ್ನೂ ಮುಂದೂಡಲಾಗಿದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಂ.ಕೆ. ಪೊನ್ನಪ್ಪ ಅವರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನೀತಿ ಸಂಹಿತೆ ಜಾರಿಯಲ್ಲಿರುವದರಿಂದ ಯಾವದೇ ಸಭೆ ಸಮಾರಂಭಗಳನ್ನು ನಡೆಸಬಾರದು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕರು ಆದೇಶಿಸಿರುವದರಿಂದ ಅನಿವಾರ್ಯವಾಗಿ ಈ ಕಾರ್ಯಕ್ರಮಗಳನ್ನು ಮುಂದೂಡಿರುವದಾಗಿ ತಿಳಿಸಿದರು.

ಅಕಾಡೆಮಿಯ ರಿಜಿಸ್ಟ್ರಾರ್ ಉಮರಬ್ಬ ಮಾತನಾಡಿ, ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ತಾ.17ರಂದು ಆಯೋಜಿಸಲಾಗಿದ್ದ ಅರೆಭಾಷೆ ಯಕ್ಷಗಾನ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭ ಹಾಗೂ ಅಂದು ನಡೆಯಬೇಕಿದ್ದ ಅಕಾಡೆಮಿಯ ಸರ್ವ ಸದಸ್ಯರ ಸಭೆಯನ್ನೂ ಕೂಡಾ ಇಲಾಖಾ ನಿರ್ದೇಶಕರ ಆದೇಶ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಕಾಡೆಮಿಯ ಸದಸ್ಯರು ಹಾಗೂ ಶಿಬಿರಾರ್ಥಿಗಳಿಗೆ ಮಾಹಿತಿ ನೀಡಲಾಗಿತ್ತಾದರೂ, ಇದೀಗ ಅನಿವಾರ್ಯವಾಗಿ ಕಾರ್ಯಕ್ರಮ ಮುಂದೂಡಲೇಬೇಕಾಗಿದ್ದು, ದಿನಾಂಕವನ್ನು ಬಳಿಕ ತಿಳಿಸಲಾಗುವದು ಎಂದರು.