ಮಡಿಕೇರಿ, ಏ. 13: ಯುವತಿಯೋರ್ವಳನ್ನು ಮದುವೆಯಾಗುವದಾಗಿ ನಂಬಿಸಿ ವಂಚನೆ ಮಾಡಿದ್ದ ಕೇರಳ ಮೂಲದ ಐವರು ಆರೋಪಿಗಳನ್ನು ನಗರ ಪೊಲೀಸರು 15 ವರ್ಷಗಳ ಬಳಿಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
2005ರಲ್ಲಿ ಮಡಿಕೇರಿಯ ತ್ಯಾಗರಾಜನಗರದ ನಿವಾಸಿ, ಉಮ್ಮರ್ ಎಂಬವರ ಪುತ್ರಿ ಮೆಹರುನ್ನೀಸಾ ಎಂಬಾಕೆಯನ್ನು ಕೇರಳ ರಾಜ್ಯದ ಮರ್ಕೆರಾದ ಸೈಯ್ಯದ್ ಅಲವಿ ಎಂಬಾತ ಮದುವೆಯಾಗುವದಾಗಿ ನಂಬಿಸಿದ್ದು, ಇದಕ್ಕೆ ಆತನ ಸಂಬಂಧಿಕರು ಸಹಕಾರ ನೀಡಿದ್ದರೆನ್ನಲಾಗಿದೆ. ಈ ಸಂದರ್ಭ ಯುವತಿಯ ಕುಟುಂಬದಿಂದ ರೂ. 25 ಸಾವಿರ ಹಣ ಹಾಗೂ 10 ಪವನ್ ಚಿನ್ನಾಭರಣವನ್ನು ಸೈಯ್ಯದ್ ಅಲವಿ ಸೇರಿದಂತೆ ಇತರ ನಾಲ್ವರು ಪಡೆದುಕೊಂಡಿದ್ದು, ಬಳಿಕ ಯುವತಿಯನ್ನು ಮದುವೆಯಾಗಲು ನಿರಾಕರಿಸಿ ಪಡೆದಿದ್ದ ಚಿನ್ನಕ್ಕೆ ಪ್ರತಿಯಾಗಿ ನಕಲಿ ಚಿನ್ನ ನೀಡಿ ವಂಚಿಸಿದ್ದರೆಂದು ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದಾದ ಬಳಿಕ ಆರೋಪಿಗಳು ತಲೆಮರೆಸಿ ಕೊಂಡಿದ್ದರು ಇದೀಗ 15 ವರ್ಷಗಳ ಬಳಿಕ ಆರೋಪಿಗಳಾದ ಸೈಯ್ಯದ್ ಅಲವಿ, ಕುಂಞ ಮೊಹಿದೀನ್, ಕುಂಞ ಅಹಮದ್, ಪಾತಾರು ಹಾಗೂ ಅಲಿಯಾ ಅಸನ್‍ಕುಟ್ಟಿ ಎಂಬವರನ್ನು ನಗರ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಎಸ್‍ಪಿ ರಾಜೇಂದ್ರಪ್ರಸಾದ್, ಡಿವೈಎಸ್‍ಪಿ ಸುಂದರ್‍ರಾಜ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ, ಠಾಣಾಧಿಕಾರಿ ಷಣ್ಮುಗಪ್ಪ, ಅಪರಾಧ ವಿಭಾಗದ ಸಿಬ್ಬಂದಿಗಳಾದ ದಿನೇಶ್, ಮಧು ಕಾರ್ಯಾಚರಣೆಯಲ್ಲಿ ಭಾಗಿಗಳಾಗಿದ್ದರು.