ಮಡಿಕೇರಿ, ಏ. 13: ಪದವಿಪೂರ್ವ ಶಿಕ್ಷಣ ಇಲಾಖೆಯು 2018-19ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಈ ಹಿಂದಿನ ವರ್ಷ ಗಳಿಗಿಂತ ಮುಂಚಿತವಾಗಿ ಅಂದರೆ ಸುಮಾರು 28 ದಿನಗಳ ಮುಂಚಿತ ವಾಗಿ ಆರಂಭಿಸುವಂತೆ ಆದೇಶ ಹೊರಡಿಸಿದೆ. ಆದರೆ ಈ ಕ್ರಮ ಅವೈಜ್ಞಾನಿಕವಾಗಿದೆ ಎಂಬ ಆಕ್ಷೇಪ ಉಪನ್ಯಾಸಕರಿಂದ ವ್ಯಕ್ತಗೊಂಡಿದೆ. ಇದು ಉಪನ್ಯಾಸಕರ ರಜೆಗೂ ಕತ್ತರಿ ಹಾಕುವ ಕ್ರಮವಾಗಿದ್ದು, ಈ ಸುತ್ತೋಲೆಯನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಹಿಂಪಡೆಯಬೇಕು. ತಪ್ಪಿದಲ್ಲಿ ಮೇ 2 ರಂದು ರಾಜ್ಯಾದ್ಯಂತ ಉಪನ್ಯಾಸಕರು ಸಾಮೂಹಿಕವಾಗಿ ಪ್ರತಿಭಟನೆ ನಡೆಸಲಿದ್ದಾರೆ ಎಂಬ ಎಚ್ಚರಿಕೆಯನ್ನು ನೀಡಲಾಗಿದೆ. ಇದರಂತೆ ಕೊಡಗು ಜಿಲ್ಲೆಯಲ್ಲೂ ಮೇ 2 ರಂದು ಪ್ರತಿಭಟನೆ ಉದ್ದೇಶಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾ ಅಧ್ಯಕ್ಷ ಫಿಲಿಫ್ ವಾಸ್ ಹಾಗೂ ಮಾಜಿ ಅಧ್ಯಕ್ಷ ಕೆಂಚಪ್ಪ ಅವರುಗಳು ತಿಳಿಸಿದ್ದಾರೆ.

ರಾಜ್ಯ ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಷ್ಟೆ ಈ ಬಾರಿ ಪಿಯುಸಿ ಪರೀಕ್ಷೆ ಬೇಗ ನಡೆದಿದೆ. ಎಲ್ಲಾ ಕೆಲಸ ಕಾರ್ಯಗಳ ನಡುವೆ ಇದೀಗ ಈ ವರ್ಷ ಬೇಗ ಶೈಕ್ಷಣಿಕ ವರ್ಷ ಪ್ರಾರಂಭಿಸುವದರಿಂದ ಉಪನ್ಯಾಸಕರಿಗೆ ಒಂದು ತಿಂಗಳ ರಜೆ ಕಡಿತವಾಗಲಿದೆ. ಮೇ ತಿಂಗಳಲ್ಲಿ ಬಿಸಿಲಿನ ಬೇಗೆ ಹೆಚ್ಚಿದ್ದು, ಉತ್ತರ ಕರ್ನಾಟಕದಲ್ಲಿ ಕೆಲಸದ ಅವಧಿ ಯನ್ನೂ ಬದಲಾವಣೆ ಮಾಡಲಾಗಿದೆ. ಹೀಗಿರುವಾಗ ಈ ಅವಧಿಯಲ್ಲಿ ಪಾಠ ಮಾಡುವದು ಕಷ್ಟ ಎಂದು ರಾಜ್ಯ ಸಂಘದ ಪದಾಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ. ಕೊಡಗು ಜಿಲ್ಲೆಯ ಮಟ್ಟಿಗೂ ಈ ಕ್ರಮ ಅವೈಜ್ಞಾನಿಕ ವಾಗಲಿದೆ ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಧಾರ್ಮಿಕ ಕಾರ್ಯಕ್ರಮ ಗಳು, ಕ್ರೀಡಾ ಚಟುವಟಿಕೆಗಳು, ಸಮಾರಂಭಗಳು ಹೆಚ್ಚಿದ್ದು, ವಿದ್ಯಾರ್ಥಿಗಳಿಗೂ ಸಮಸ್ಯೆ ಯಾಗಲಿದೆ ಎಂದು ಫಿಲಿಫ್ ವಾಸ್ ಅಭಿಪ್ರಾಯಪಟ್ಟಿದ್ದಾರೆ.