ಮಡಿಕೇರಿ, ಏ.13 : ದುಬಾರೆ ಸೇರಿದಂತೆ ಕೊಡಗಿನ ವಿವಿಧೆಡೆ ನಡೆಯುತ್ತಿದ್ದ ರಿವರ್ ರ್ಯಾಫ್ಟಿಂಗ್‍ಗೆ ಹೇರಿರುವ ನಿಷೇಧವನ್ನು ಜಿಲ್ಲಾಡಳಿತ ಶೀಘ್ರ ತೆರವುಗೊಳಿಸಬೇಕೆಂದು ರಿವರ್ ರ್ಯಾಫ್ಟಿಂಗ್ ಮಾಲೀಕರ ಸಂಘದ ಪದಾಧಿಕಾರಿಗಳು ಹಾಗೂ ನೌಕರರು ಒತ್ತಾಯಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಉಪಾಧ್ಯಕ್ಷÀ ಸಿ.ಎಲ್.ವಿಶ್ವ ದುಬಾರೆಯಲ್ಲಿ ನಡೆದ ಪ್ರವಾಸಿಗನೊಬ್ಬನ ಸಾವಿನ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸುರಕ್ಷತೆಯ ಕಾರಣ ನೀಡಿ ರಿವರ್ ರ್ಯಾಫ್ಟಿಂಗ್‍ಗೆ ನಿಷೇಧ ಹೇರಿದೆ. ಯಾರೋ ಮಾಡಿದ ತಪ್ಪಿಗೆ ಇದೀಗ ಉಳಿದ ಮಾಲೀಕರು ಹಾಗೂ ನೌಕರರು ಸಂಕಷ್ಟವನ್ನು ಎದುರಿಸುತ್ತಿದ್ದು, ತಕ್ಷಣ ನಿಷೇಧ ತೆರವಿಗೆ ಜಿಲ್ಲಾಧಿಕಾರಿಗಳು ಮುಂದಾಗ ಬೇಕೆಂದು ಮನವಿ ಮಾಡಿದರು. ಡೋಂಗಿ ಪರಿಸರವಾದಿಗಳು ಬಾಯಿ ಚಪಲಕ್ಕಾಗಿ “ರ್ಯಾಫ್ಟಿಂಗ್ ಮಾಫಿಯಾ” ಎನ್ನುವ ಪದವನ್ನು ಬಳಸುತ್ತಿದ್ದಾರೆ. ಆದರೆ ನದಿ ತೀರದಲ್ಲಿ ಹೊಟ್ಟೆ ಪಾಡಿಗಾಗಿ ಬ್ಯಾಂಕ್‍ನಲ್ಲಿ ಸಾಲ ಪಡೆದು ಜಾತ್ಯತೀತ ಮತ್ತು ಪಕ್ಷಾತೀತ ವಾಗಿ ರ್ಯಾಫ್ಟಿಂಗ್ ನಡೆಸಲಾಗುತ್ತಿದೆ ಎಂದು ವಿಶ್ವ ಸ್ಪಷ್ಟಪಡಿಸಿದರು.

ದೇಶ ವಿದೇಶಗಳಲ್ಲಿ ಜನಪ್ರಿಯ ವಾಗಿದ್ದ ಕೊಡಗಿನ ರಿವರ್ ರ್ಯಾಫ್ಟಿಂಗ್ ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಗೆ ಸಹಕಾರಿಯಾಗಿತ್ತು. ಆದರೆ ಇತ್ತೀಚೆಗೆ ರ್ಯಾಫ್ಟಿಂಗ್‍ನ್ನು ನಿಷೇಧಿಸಿರುವದರಿಂದ ಪ್ರವಾಸಿಗರ ಸಂಖ್ಯೆ ಕುಂಠಿತ ಗೊಂಡಿದ್ದು, ಹೋಂಸ್ಟೇ, ರೆಸಾರ್ಟ್ ಸೇರಿದಂತೆ ಪ್ರವಾಸೋದ್ಯಮದ ವ್ಯವಹಾರ ಸಂಪೂರ್ಣವಾಗಿ ನೆಲಕಚ್ಚಿದೆ. ರ್ಯಾಫ್ಟಿಂಗ್ ಮಾಲೀಕರುಗಳು ಬ್ಯಾಂಕ್ ಸಾಲ ತೀರಿಸಲಾಗದೆ ಸಂಕಷ್ಟದಲ್ಲಿದ್ದರೆ, ನೌಕರರು ಉದ್ಯೋಗವಿಲ್ಲದೆ ಕುಟುಂಬ ನಿರ್ವಹಣೆಗೆ ಪರದಾಡುತ್ತಿದ್ದಾರೆ ಎಂದು

(ಮೊದಲ ಪುಟದಿಂದ) ಅಸಹಾಯಕತೆ ವ್ಯಕ್ತಪಡಿಸಿದರು. ತಾ.16 ರಂದು ಜಿಲ್ಲಾಧಿಕಾರಿಗಳು ರ್ಯಾಫ್ಟಿಂಗ್‍ಗೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸುವ ವಿಚಾರ ತಿಳಿದು ಬಂದಿದ್ದು, ತಾ.28 ರಿಂದ ರ್ಯಾಫ್ಟಿಂಗ್ ನಡೆಸಲು ಅವಕಾಶ ದೊರೆಯಲಿದೆ ಎನ್ನುವ ವಿಶ್ವಾಸವಿದೆ ಎಂದು ವಿಶ್ವ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಪಿ.ಸಿ.ವಸಂತ, ತಳೂರು ಚೇತನ್, ಕೆ.ಆರ್.ಸತೀಶ್, ಟಿ.ವಿ.ರಾಜೇಶ್ ಹಾಗೂ ಜೆ.ಕೆ.ದೀಪು ಉಪಸ್ಥಿತರಿದ್ದರು.