ಸೋಮವಾರಪೇಟೆ, ಏ. 13: ಇಲ್ಲಿನ ಚೌಡೇಶ್ವರಿ ಬ್ಲಾಕ್‍ನ ಚೌಡೇಶ್ವರಿ ದೇವಿಯ ಪೂಜಾ ಮಹೋತ್ಸವವು ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು. ದೇವಾಲಯದಲ್ಲಿ ಮಹೋತ್ಸವದ ಅಂಗವಾಗಿ ವಿವಿಧ ಪೂಜಾ ಕೈಂಕರ್ಯಗಳು ನಡೆಯಿತು. ಪಟ್ಟಣದ ವಿವಿಧ ಬಡಾವಣೆಗಳ ಭಕ್ತಾದಿಗಳು ಪೂಜೆಯಲ್ಲಿ ಪಾಲ್ಗೊಂಡರು. ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿತ್ತು. ಪೂಜಾ ಮಹೋತ್ಸವ ಸಮಿತಿ ಅಧ್ಯಕ್ಷ ಬಿ.ಎನ್. ಮಧು, ಕಾರ್ಯ ದರ್ಶಿ ಹೇಮಂತ್ ಕುಮಾರ್, ಅರ್ಚಕ ದೇವರಾಜು ಮತ್ತಿತರರು ಉತ್ಸವದ ಯಶಸ್ಸಿಗೆ ಶ್ರಮಿಸಿದರು.

ಗಾಂಧಿ ನಗರದ ದೊಡ್ಡ ಮಾರಿಯಮ್ಮ: ಚೌಡ್ಲು ಗ್ರಾಮದ ಗಾಂಧಿನಗರದಲ್ಲಿರುವ ಶ್ರೀದೊಡ್ಡ ಮಾರಿಯಮ್ಮ ದೇವಾಲಯದಲ್ಲಿ ಮೂರು ದಿನಗಳ ಕಾಲ ವಿಶೇಷ ಪೂಜೆ ನಡೆಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ತಾಯಿ ದೊಡ್ಡ ಮಾರಮ್ಮನವರ ವಿಗ್ರಹವನ್ನು ವಿದ್ಯುತ್ ಅಲಂಕೃತ ಮಂಟಪದಲ್ಲಿ ಮೆರವಣಿಗೆ ನಡೆಸಿದ ನಂತರ ದೇವಾಲಯದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.

ಗ್ರಾಮದ ಮಹಿಳೆಯರು ಕಲಶ ಹೊತ್ತು ದೇವಿಗೆ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು. ಈ ಸಂದರ್ಭ ಪೂಜೆಯಲ್ಲಿ ಪಾಲ್ಗೊಂಡ ಭಕ್ತಾದಿಗಳಿಗೆ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು. ದೇವಾಲಯ ಸಮಿತಿ ಅಧ್ಯಕ್ಷ ದುರ್ಗೇಶ್ (ಚಿಕ್ಕಣ್ಣ) ಸಮಿತಿಯ ಪದಾಧಿಕಾರಿಗಳಾದ ಹೆಚ್. ಮಂಜುನಾಥ್, ಎಸ್.ಎಸ್. ಸುಬ್ರಮಣಿ, ರಾಮಣ್ಣ, ನರಸಿಂಹ, ಗಂಗಾಧರ್, ಕಾಳಯ್ಯ, ಶ್ವೇತ ಕುಮಾರ್ ಮತ್ತಿತರರು ಪೂಜಾ ಮಹೋತ್ಸವದಲ್ಲಿ ಭಾಗವಹಿಸಿದ್ದರು.

ಮುತ್ತಪ್ಪ ಸ್ವಾಮಿ ದೇವಾಲಯ: ಇಲ್ಲಿನ ಮುತ್ತಪ್ಪಸ್ವಾಮಿ ಮತ್ತು ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ 10ನೇ ವರ್ಷದ ಪ್ರತಿಷ್ಠಾಪನಾ ಮಹೋತ್ಸವ ನಡೆಯಿತು. ದೇವಾಲ ಯದಲ್ಲಿ ಗಣಪತಿ ಹೋಮ ದೊಂದಿಗೆ ಆರಂಭವಾದ ಪೂಜಾ ಕೈಂಕರ್ಯಗಳು ನಂತರ ಬ್ರಹ್ಮಕಳಾಶಭಿಷೇಕ, ಭುವನೇಶ್ವರಿ ದೇವಿಯ ಮುಖಮಂಟಪದ ಕಳಶಾಭಿಷೇಕ, ಉಚ್ಚ ಪೂಜೆ ನಡೆಯಿತು. ಕನ್ನಿಮೂಲ ಗಣಪತಿ, ಭುವನೇಶ್ವರಿ ದೇವಿ, ಅಯ್ಯಪ್ಪಸ್ವಾಮಿ ಹಾಗೂ ನಾಗದೇವತೆಗಳಿಗೆ ಅಭಿಷೇಕ ಹಾಗೂ ವಿಶೇಷ ಪೂಜೆಯನ್ನು ಕಾಳೇಘಾಟ್ ತಂತ್ರಿಗಳಾದ ನಾರಾಯಣ ನಂಬೂದರಿ ನೇತೃತ್ವದಲ್ಲಿ ಸಲ್ಲಿಸಲಾಯಿತು. ಅಯ್ಯಪ್ಪ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಮಣಿಕಂಠನ್ ನಂಬೂದರಿ, ಸೋಮವಾರಪೇಟೆಯ ಅರ್ಚಕ ರಾದ ಜಗದೀಶ್ ಉಡುಪ ಅವರು ಗಳು ಪೂಜೆ ನೆರವೇರಿಸಿದರು. ಇದರೊಂದಿಗೆ ಮುತ್ತಪ್ಪ ಸ್ವಾಮಿ, ತಿರುವಪ್ಪಸ್ವಾಮಿ ಮತ್ತು ಪರಿವಾರ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಪ್ರತಿಷ್ಠಾಪನ ಮಹೋತ್ಸವದ ಉಸ್ತುವಾರಿ ಯನ್ನು ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ. ವಿನೋದ್, ಕಾರ್ಯದರ್ಶಿ ಪ್ರಸನ್ನ ನಾಯರ್, ಗೌರವಾಧ್ಯಕ್ಷ ಎನ್.ಜಿ. ಜನಾರ್ಧನ್ ಮತ್ತಿತರ ಪದಾಧಿಕಾರಿಗಳು ವಹಿಸಿದ್ದರು.