ಮಡಿಕೇರಿ, ಏ. 14 : ಕೊಡವ ಜನಾಂಗದ ಹೊಸ ವರ್ಷಾಚರಣೆ ಎಡಮ್ಯಾರ್ 1ನ್ನು ಕೊಡವ ಮಕ್ಕಡ ಕೂಟ ಮತ್ತು ಮಿನ್ನಂಡ ಕುಟುಂಬದ ಸಂಯುಕ್ತ ಆಶ್ರಯದಲ್ಲಿ ಮಡಿಕೇರಿ ಸಮೀಪದ ಕೆ ಬಾಡಗ ಗ್ರಾಮದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಗುರು ಕಾರಣರನ್ನು ಪ್ರಾರ್ಥಿಸಿ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜ್ಜಿರ ಅಯ್ಯಪ್ಪ ಗದ್ದೆ ಉಳುವದರ ಮೂಲಕ ಎಡಮ್ಯಾರ್ ನಮ್ಮೆ ಕೊಡವರ ಹೊಸ ವರ್ಷಾಚರಣೆಗೆ ಚಾಲನೆ ನೀಡಿದರು.
ಕೊಡವರ ಸಂಪ್ರದಾಯದಂತೆ ಎತ್ತುಗಳನ್ನು ತೊಳೆದು, ನೆಲ್ಲಕ್ಕಿ ಬಾಡೆಯಲ್ಲಿ ನಂದಾದೀಪ ಹಚ್ಚಿ, ಗುರುಕಾರೋಣರಿಗೆ ಅಕ್ಕಿ ಹಾಕಲಾಯಿತು. ನಂತರ ಗದ್ದೆಗೆ ತೆರಳಿ ಪ್ರಾರ್ಥಿಸಿ, ಗದ್ದೆಯಲ್ಲಿ ಶಾಸ್ತ್ರಕ್ಕೆ ಉಳಲು ಎತ್ತು ಕಟ್ಟುವ ಮೂಲಕ ಹೊಸ ವರ್ಷವನ್ನು ಆಚರಿಸಲಾಯಿತು.
ಕುಟುಂಬದ ಪಟ್ಟೆದಾರ ಮಿನ್ನಂಡ ರಾಮಪ್ಪ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಭಗಂಡೇಶ್ವರ ಹಾಗೂ ತಲಕಾವೇರಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ ಹಾಗೂ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರುಗಳು ಮಾತನಾಡಿ, ತಮ್ಮ ಹಿರಿಯರ ಕಾಲದಲ್ಲಿ ನಡೆಯುತ್ತಿದ್ದ ನಾಟಿ ಹಾಗೂ ಗದ್ದೆ ಕೆಲಸ ನೆನಪಿಸಿಕೊಂಡರು. ಇಂದು ಕಾಲ ಬದಲಾಗಿದೆ. ಗದ್ದೆ ಹಾಗೂ ಭೂಮಿಯನ್ನು ಪಾಳು ಬೀಡಲಾಗಿದ್ದು, ಅಕ್ಕಿಯನ್ನು ಹೊರಗಿನಿಂದ ಖರೀದಿಸುವಂತಾಗಿರುವದರ ಬಗ್ಗೆ ವಿಷಾದ ವ್ಯಕ್ತ ಪಡಿಸಿದರು.
ಹೊರಗಿನಿಂದ ಅಕ್ಕಿ ಖರೀದಿಸುವ ಬದಲು, ನಮ್ಮ ಗದ್ದೆಯಲ್ಲಿಯೇ ಉಳುಮೆ ಮಾಡಿ, ಅಕ್ಕಿ ತೆಗೆಯುವಂತೆ ಆಗಬೇಕು ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ವಿಚಾರ ಮಂಡನೆ ಮಾಡಿದ ಅಲ್ಲಾರಂಡ ವಿಠಲ ನಂಜಪ್ಪ, ಸಂಸ್ಕøತಿ, ಆಚಾರ ವಿಚಾರ ಎಂದಿಗೂ ನಿಂತ ನೀರಲ್ಲ. ಅದು ಹರಿಯುವ ಹೊಳೆಯಂತೆ ಎಂದರು.
ಮಿನ್ನಂಡ ರಾಮಪ್ಪ ಮಾತನಾಡಿ, ಸರಕಾರ ನಮ್ಮ ರೈತರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುವ ಕಾರ್ಯವನ್ನು ಮಾಡಬೇಕು ಎಂದರು.
ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಮಾತನಾಡಿ, ಕೊಡವ ಪದ್ಧತಿ, ಪರಂಪರೆ, ಆಚಾರ ವಿಚಾರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಳೆದ 6 ವರ್ಷಗಳಿಂದ ಕೊಡವ ಮಕ್ಕಡ ಕೂಟವು ಕೊಡಗಿನ ಹಲವು ಗ್ರಾಮಗಳಲ್ಲಿ ಏ. 14ರಂದು ಎಡಮ್ಯಾರ್ 1ನ್ನು ಆಚರಿಸಿಕೊಂಡು ಬರುತಿದ್ದು, ಮರೆಯಾಗುತ್ತಿರುವ ಉಳುಮೆ ಪದ್ಧತಿಯನ್ನು ಉಳಿಸಿ ಬೆಳೆಸಲು ಪ್ರೋತ್ಸಾಹಿಸುವದಾಗಿ ಹೇಳಿದರು.
ಪೊನ್ನಂಪೇಟೆಯ ಚೆಪ್ಪುಡಿರ ರಾಕೇಶ್ ದೇವಯ್ಯ ಮತ್ತಿತರರು ವೇದಿಕೆಯಲ್ಲಿ ಇದ್ದರು.
ತಾನಿಯಾ ಹಾಗೂ ತಂಡದವರು ಪ್ರಾರ್ಥಿಸಿ, ಮಿನ್ನಂಡ ಝಾನ್ಸಿ ಮಾದಪ್ಪ ಸ್ವಾಗತಿಸಿ, ಬಾಳೆಯಡ ದಿವ್ಯ ಮಂದಪ್ಪ ಕಾರ್ಯಕ್ರಮ ನಿರೂಪಿಸಿ, ಲಾಲಾ ತಿಮ್ಮಯ್ಯ ವಂದಿಸಿದರು.