ಗೋಣಿಕೊಪ್ಪಲು, ಏ. 14: ತಿಂಗಳ ಮೊದಲೇ ವೀರಾಜಪೇಟೆ ತಾಲೂಕಿನ ಜೆಡಿಎಸ್ ಅಭ್ಯರ್ಥಿ ಹಾಗೂ ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ನಾಮಪತ್ರ ಸಲ್ಲಿಕೆಗೂ ಮೊದಲೇ ಬಿರು ಬಿಸಿಲಿನಲ್ಲಿ ದಕ್ಷಿಣ ಕೊಡಗಿನ ಬಾಳೆಲೆ, ನಿಟ್ಟೂರು, ಕೊಟ್ಟಗೇರಿ, ಇತರ ಭಾಗಗಳಲ್ಲಿ ಮಿಂಚಿನ ಸಂಚಾರ ನಡೆಸಿ ಮನೆ ಮನೆ ಮತ ಪ್ರಚಾರ ಆರಂಭಿಸಿದ್ದಾರೆ. ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗದ ಹಿನ್ನೆಲೆ ಇನ್ನೂ ಕೂಡ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿಲ್ಲ. ಈಗಾಗಲೇ ಜೆಡಿಎಸ್ ಅಭ್ಯರ್ಥಿ ಕ್ಷೇತ್ರದ ವಿವಿಧ ಭಾಗದಲ್ಲಿ ಮುಂಜಾನೆಯಿಂದಲೇ ಮತದಾರರ ಮನೆ ಮನೆಗೂ ಭೇಟಿ ನೀಡಿ ಮತ ಕೇಳುತ್ತಿದ್ದಾರೆ.
ವೀರಾಜಪೇಟೆ ವಿಧಾನಸಭಾ ಕ್ಷೇತ್ರವು ಈ ಬಾರಿಯ ಚುನಾವಣೆಯಲ್ಲಿ ಹೆಚ್ಚಿನ ಗಮನ ಸೆಳೆಯಲಿದ್ದು ಬಿಜೆಪಿ ಹಾಗೂ ಕಾಂಗ್ರೆಸ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ನಂತರ ಚುನಾವಣೆಯ ಕಾವು ರಂಗೇರಲಿದೆ. ಜೆಡಿಎಸ್ ಕ್ಷೇತ್ರದಲ್ಲಿ ಕಾರ್ಯಕರ್ತರ ಮುಖಂಡರ ಹಲವು ಸುತ್ತುಗಳ ಸಭೆಗಳನ್ನು ನಡೆಸಿ ಪ್ರಚಾರದಲ್ಲಿ ಮುಂಚೂಣಿಯಲ್ಲಿದೆ. ಮೊದಲ ಸುತ್ತಿನ ಮನೆ ಮನೆ ಪ್ರಚಾರವನ್ನು ದಕ್ಷಿಣ ಕೊಡಗಿನ ವಿವಿಧ ಭಾಗಗಳಲ್ಲಿ ಆರಂಭಿಸಿರುವ ಅಭ್ಯರ್ಥಿ ಸಂಕೇತ್ ಪೂವಯ್ಯ ನಾಮಪತ್ರ ಸಲ್ಲಿಕೆಗೂ ಮುನ್ನವೇ ಈ ಭಾಗದಲ್ಲಿ ಒಂದು ಸುತ್ತಿನ ಪ್ರಚಾರವನ್ನು ಮುಗಿಸಲು ಓಡಾಟ ಮಾಡುತ್ತಿದ್ದಾರೆ. ಮತದಾರರಲ್ಲಿ ಈ ಬಾರಿ ಕ್ಷೇತ್ರದಲ್ಲಿ ಬದಲಾವಣೆ ತರುವ ಮೂಲಕ ಪ್ರಾದೇಶಿಕ ಪಕ್ಷ ಜೆಡಿಎಸ್ ಗೆಲುವಿಗೆ ಸಹಕರಿಸುವಂತೆ ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ. ಮುಂಜಾನೆ ಪಕ್ಷದ, ವಿವಿಧ ಜನಾಂಗದ ಮುಖಂಡರ ಮನೆಗಳಿಗೆ ಭೇಟಿ ನೀಡುತ್ತಿರುವ ಸಂಕೇತ್, ಬೆಂಬಲ ಪಡೆದುಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಪ್ರಚಾರದ ವೇಳೆಯಲ್ಲಿ ಬಾಳೆಲೆ ಹೋಬಳಿ ಅಧ್ಯಕ್ಷ ಅಡ್ಡೆಂಗಡ ಸುಬ್ಬಯ್ಯ, ಕಾರ್ಯಾಧ್ಯಕ್ಷ ಸುಜು ಪೂಣಚ್ಚ, ಕೃಷಿ ಘಟಕದ ಜಿಲ್ಲಾಧ್ಯಕ್ಷ ಮಚ್ಚಮಾಡ ಮಾಚಯ್ಯ, ಪಕ್ಷದ ಹಿರಿಯ ಮುಖಂಡರಾದ ಮಲ್ಚೀರ ದೇವಯ್ಯ, ಎಸ್.ಎಸ್. ಶಿವ ನಂಜಪ್ಪ, ಎಂ.ಎಂ. ಮುದ್ದಯ್ಯ, ಆದೇಂಗಡ ನಾಚಪ್ಪ, ಅಕ್ಬರ್, ಎಂ.ಜೆ. ಅಪ್ಪಣ್ಣ ಮುಂತಾದವರು ಹಾಜರಿದ್ದರು.