ಸೋಮವಾರಪೇಟೆ, ಏ. 14: ಇಲ್ಲಿನ ಡಾಲ್ಫೀನ್ಸ್ ಸ್ಪೋಟ್ರ್ಸ್ ಕ್ಲಬ್ ಆಶ್ರಯದಲ್ಲಿ ಸ್ಥಳೀಯ ಜಿಎಂಪಿ ಶಾಲಾ ಮೈದಾನದಲ್ಲಿ ಆಯೋಜಿಸ ಲಾಗಿರುವ ಅಂತರಾಷ್ಟ್ರೀಯ ಹಾಕಿ ಆಟಗಾರ ಎಸ್.ವಿ. ಸುನಿಲ್ ತಂದೆ ದಿ. ವಿಠಲಾಚಾರ್ಯ ಸ್ಮರಣಾರ್ಥ ಕಪ್ ಹಾಕಿ ಪಂದ್ಯಾಟದಲ್ಲಿ ಆತಿಥೇಯ ಡಾಲ್ಪೀನ್ಸ್ ಸ್ಪೋಟ್ರ್ಸ್ ಕ್ಲಬ್ ಮತ್ತು ಕೂಡಿಗೆ ಸ್ಪೋಟ್ರ್ಸ್ ಹಾಸ್ಟೆಲ್ ತಂಡಗಳು ಫೈನಲ್ ಪ್ರವೇಶಿಸಿವೆ.
ಜಿಲ್ಲೆಯ 6 ಪ್ರತಿಷ್ಠಿತ ತಂಡಗಳು ಭಾಗವಹಿಸಿರುವ ಪಂದ್ಯಾವಳಿಯಲ್ಲಿ ಇಂದು ಸೆಮಿಫೈನಲ್ ಪಂದ್ಯ ನಡೆಯಿತು. ಹಾತೂರು ಸ್ಪೋಟ್ರ್ಸ್ ಕ್ಲಬ್ ಮತ್ತು ಕೂಡಿಗೆ ಸ್ಪೋಟ್ರ್ಸ್ ಹಾಸ್ಟೆಲ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೂಡಿಗೆ ತಂಡ 5-4 ಗೋಲುಗಳ ಅಂತರದಲ್ಲಿ ಜಯ ದಾಖಲಿಸಿತು.
ಡ್ರಿಬ್ಲರ್ಸ್ ಕುತ್ತುನಾಡು ಮತ್ತು ಡಾಲ್ಪೀನ್ಸ್ ಸ್ಪೋಟ್ರ್ಸ್ ಕ್ಲಬ್ ಸೋಮವಾರಪೇಟೆ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಡಾಲ್ಪೀನ್ಸ್ ಕ್ಲಬ್ ತಂಡ 3-0 ಗೋಲುಗಳ ಅಂತರದಿಂದ ಡ್ರಿಬ್ಲರ್ಸ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು.
ಪ್ರಥಮ ಸೆಮಿಫೈನಲ್‍ನಲ್ಲಿ ಕೂಡಿಗೆಯ ಕ್ರೀಡಾಶಾಲೆ ತಂಡ ಹಾತೂರು ಸ್ಪೋಟ್ರ್ಸ್ ಕ್ಲಬ್ ತಂಡವನ್ನು ಸಡನ್‍ಡೆತ್‍ನಲ್ಲಿ 5-4 ಗೋಲುಗಳ ಅಂತರದಿಂದ ಮಣಿಸಿತು. ಪಂದ್ಯಾಟದ ಪ್ರಾರಂಭದಿಂದಲೇ ತೀವ್ರ ಹಣಾಹಣಿಯಿಂದ ಕೂಡಿದ ಪಂದ್ಯದಲ್ಲಿ ಇತ್ತಂಡಗಳು ನಿಗದಿತ ಅವಧಿಯಲ್ಲಿ ತಲಾ 1 ಗೋಲು ಗಳೊಂದಿಗೆ ಸಮಬಲ ಸಾಧಿಸಿದವು.
ಆಟದ ಪೂರ್ವಾರ್ಧದ 16ನೇ ನಿಮಿಷದಲ್ಲಿ ಕೂಡಿಗೆ ಕ್ರೀಡಾಶಾಲೆಯ ಅಜಿತ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ದಾಖಲಿಸಿದರು. ದ್ವೀತಿಯಾರ್ಧದಲ್ಲಿ ಹಾತೂರು ತಂಡದ ಗಣಪತಿ 6ನೇ ನಿಮಿಷದಲ್ಲಿ ಅತ್ಯುತ್ತಮ ಫೀಲ್ಡ್ ಗೋಲು ದಾಖಲಿಸುವ ಮೂಲಕ ಸಮಬಲ ಸಾಧಿಸಲು ನೆರವಾದರು.
ನಿಗದಿತ ಅವಧಿಯಲ್ಲಿ ಎರಡು ತಂಡಗಳು 1-1 ಸಮಬಲ ಹೊಂದಿದ ಕಾರಣ ಸಡನ್‍ಡೆತ್ ನೀಡಲಾಯಿತು. ಈ ಸಂದರ್ಭದಲ್ಲಿ 3-3 ಗೋಲು ದಾಖಲಿಸಲ್ಪಟ್ಟವು. ನಂತರ ನಡೆದ ಗೋಲ್ಡನ್ ಗೋಲ್‍ನಲ್ಲಿ ಕೂಡಿಗೆ ತಂಡದ ಚೇತನ್ ಅತ್ಯುತ್ತಮ ಗೋಲು ದಾಖಲಿಸುವ ಮೂಲಕ ತಮ್ಮ ತಂಡವನ್ನು ಫೈನಲ್‍ಗೆ ಕೊಂಡೊಯ್ದರು. ಕೂಡಿಗೆ ಕ್ರೀಡಾಶಾಲೆಯ ಗೋಲ್‍ಕೀಪರ್ ಪೃಥ್ವಿ ಉತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದರು.
ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ಡಾಲ್ಫಿನ್ಸ್ ಸ್ಪೋಟ್ರ್ಸ್ ಕ್ಲಬ್ ತಂಡದ ಆಟಗಾರ ಆಭರಣ್ ಪಂದ್ಯದ ಮೊದಲಾರ್ಧದ 16 ಮತ್ತು 24ನೇ ನಿಮಿಷದಲ್ಲಿ ಎರಡು ಫೀಲ್ಡ್ ಗೋಲುಗಳನ್ನು ದಾಖಲಿಸಿದರು. ದ್ವಿತೀಯಾರ್ಧದ 44 ನಿಮಿಷದಲ್ಲಿ ಡಾಲ್ಪೀನ್ಸ್ ಪರ ರಾಹಿಲ್ ಮೂರನೇ ಗೋಲು ದಾಖಲಿಸಿದರು. ಅಂತಿಮವಾಗಿ ಆತಿಥೇಯ ಡಾಲ್ಫಿನ್ಸ್ ತಂಡ ಮೂರು ಗೋಲುಗಳ ಅಂತರದಲ್ಲಿ ಗೆಲುವ ಸಾಧಿಸಿತು.
ತೀರ್ಪುಗಾರರಾಗಿ ನೆಲ್ಲಮಕ್ಕಡ ಪವನ್, ಬೊಳ್ಳಚಂಡ ನಾಣಯ್ಯ, ಅನ್ನಡಿಯಂಡ ಪೊನ್ನಣ್ಣ, ಕೋಡಿಮಣಿಯಂಡ ಗಣಪತಿ, ತಾಂತ್ರಿಕ ವಿಭಾಗದಲ್ಲಿ ವಿನೋದ್, ಪಂದ್ಯಾಟದ ನಿರ್ದೇಶಕರಾಗಿ ಬುಟ್ಟಿಯಂಡ ಚಂಗಪ್ಪ ಕಾರ್ಯನಿರ್ವಹಿಸಿದರು. ವೀಕ್ಷಕ ವಿವರಣೆಯನ್ನು ಮಾನಸ ನೀಡಿದರು.
ಸಮಾರೋಪ: ಪಂದ್ಯಾವಳಿಯ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ತಾ. 15ರಂದು (ಇಂದು) ಅಪರಾಹ್ನ 4 ಗಂಟೆಗೆ ಜಿ.ಎಂ.ಪಿ. ಶಾಲಾ ಮೈದಾನದಲ್ಲಿ ನಡೆಯಲಿದೆ.
ಅಂತರ್ರಾಷ್ಟ್ರೀಯ ಹಾಕಿ ಆಟಗಾರ ಮತ್ತು ಪಂದ್ಯಾವಳಿಯ ಪ್ರಾಯೋಜಕರಾದ ಎಸ್.ವಿ. ಸುನಿಲ್ ಅವರ ಪತ್ನಿ ನೀಶಾ ಸುನಿಲ್, ಹಾಕಿ ಕೊಡಗು ಅಧ್ಯಕ್ಷ ಕಾಳಯ್ಯ, ಡಾಲ್ಪೀನ್ಸ್ ಕ್ಲಬ್ ಅಧ್ಯಕ್ಷ ಅಶೋಕ್, ಹಾಕಿ ಕರ್ನಾಟಕ ಕಾರ್ಯದರ್ಶಿ ಎ.ಬಿ. ಸುಬ್ಬಯ್ಯ, ಎಸ್.ಎಲ್.ಎನ್. ಕಾಫಿ ಸಂಸ್ಥೆ ಮಾಲೀಕ ಸಾತಪ್ಪನ್, ಒಲಂಪಿಯನ್ ಅರ್ಜುನ್ ಹಾಲಪ್ಪ, ವಿ.ಆರ್. ರಘುನಾಥ್, ಅಂತರ್ರಾಷ್ಟ್ರೀಯ ಹಾಕಿ ತೀರ್ಪುಗಾರ ಆರ್.ವಿ. ರಘುಪ್ರಸಾದ್, ಹಾಕಿ ಆಟಗಾರ ನಿಕಿನ್ ತಿಮ್ಮಯ್ಯ, ವಿಕ್ರಂಕಾಂತ್, ವಿ.ಎಸ್. ವಿನಯ್, ಹರಿಪ್ರಸಾದ್, ಶಿವಗಾಮಿ ಹೋಲ್ಡಿಂಗ್ಸ್ ಮಾಲೀಕ ಚಾಮೇರ ಪವನ್ ದೇವಯ್ಯ ಅವರುಗಳು ಭಾಗವಹಿಸಲಿದ್ದಾರೆ.