ಮಡಿಕೇರಿ, ಏ. 14: ಭಗವಂತನ ಕೃಪೆಗೆ ಪಾತ್ರರಾಗಿ, ಭೌತಿಕ ತೊಂದರೆಗಳಿಂದ ಪಾರಾಗಲು ಜಗನ್ನಾಥನ ದರ್ಶನ ಮುಖ್ಯ ಎಂದು ವೃಂದಾವನ ಧಾಮದ ಭಕ್ತಿಗೌರವ ನಾರಾಯಣ ಸ್ವಾಮಿ ಮಹಾರಾಜ್ ನುಡಿದರು.ಇಂದು ಇಲ್ಲಿ ಜಗನ್ನಾಥ ರಥಯಾತ್ರೆಯ ಸಭಾ ಕಾರ್ಯಕ್ರಮ ಹಾಗೂ ರಥಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀಕೃಷ್ಣನು- ಕೃಷ್ಣನಾಗಿ, (ಮೊದಲ ಪುಟದಿಂದ) ನೀಲಮೇಘಶ್ಯಾಮನಾಗಿ, ಜಗನ್ನಾಥನಾಗಿ ಸತ್ಯ, ತ್ರೇತಾ, ದ್ವಾಪರ ಮತ್ತು ಕಲಿಯುಗಗಳಲ್ಲಿ ಪ್ರಕಟಗೊಳ್ಳುವ ಕುರಿತು ಚರಿತ್ರೆಯ ಪುಟ ಬಿಡಿಸಿ ವಿವರಿಸಿದರು. ಇಸ್ಕಾನ್ ಸ್ಥಾಪಕ ಪ್ರಭುಪಾದರು 1968ರಲ್ಲಿ ಪ್ರಥಮ ಬಾರಿಗೆ ಸ್ಯಾನ್‍ಫ್ರಾನ್ಸಿಸ್ಕೋದಲ್ಲಿ ಆರಂಭಿಸಿದ ಪ್ರಥಮ ಜಗನ್ನಾಥ ಯಾತ್ರೆ ಇಂದು ದೇಶ - ವಿದೇಶಗಳಲ್ಲಿ, ನೂರಾರು ನಗರಗಳಲ್ಲಿ ನಡೆಯುತ್ತಿದೆ ಎಂದರು. ರಥಯಾತ್ರೆಯಲ್ಲಿ ಪಾಲ್ಗೊಳ್ಳುವ, ದರುಷನ ಪಡೆಯುವ ಪ್ರತಿಯೊಬ್ಬರೂ ಕೃಷ್ಣ ಕೃಪೆಗೆ ಪಾತ್ರರಾಗುತ್ತಾರೆ ಎಂದರು.

‘ಶಕ್ತಿ’ಯ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಮಾತನಾಡಿ, ಕೃಷ್ಣನ ಬಾಹ್ಯಾರಾಧನೆಯೊಂದಿಗೆ ಅವನ ಜೀವನ ಸಂದೇಶವನ್ನು, ಭಗವದ್ಗೀತೆಯ ಸಾರವನ್ನು ಅರಿಯುವದು, ಅಳವಡಿಸಿಕೊಳ್ಳುವದು ಅವಶ್ಯ ಎಂದರು. ಬದಲು, ಭಗವದ್ಗೀತೆಯ ಪುಸ್ತಕಕ್ಕೆ ಪೂಜೆ ಮಾಡಿದರೆ ಏನೂ ಉಪಯೋಗವಿಲ್ಲ ಎಂದು ಹೇಳಿದರು.

ಚಂದ್ರಕಾಂತ್ ಬಿಲ್ಡರ್ಸ್ ವ್ಯವಸ್ಥಾಪಕ ಸಬಾಸ್ಟಿನ್ ಶುಭ ಕೋರಿದರು. ನಾರಾಯಣಸ್ವಾಮಿ ಮಹಾರಾಜ್ ಹಾಜರಿದ್ದರು. ಸುಧೀರ್ ಚೈತನ್ಯ ದಾಸ್ ಪ್ರಭು ವಂದನಾರ್ಪಣೆ, ಶ್ರೀನಿಧಿ ಅವರು ಸ್ವಾಗತಿಸಿದರು.

ನಗರದ ಮುಖ್ಯ ಬೀದಿಗಳಲ್ಲಿ ಜಗನ್ನಾಥನ ಸುಂದರ ಮೆರವಣಿಗೆ ಸಾಗಿತು.