ಕೂಡಿಗೆ, ಏ. 14: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವತಿಯಿಂದ ‘ನಮ್ಮ ಮತ ನಮ್ಮ ಹಕ್ಕು’ ಎಂಬ ಅರಿವು ಕಾರ್ಯಕ್ರಮದಡಿ ಕೂಡ್ಲೂರು ಕೈಗಾರಿಕಾ ಬಡಾವಣೆಯಲ್ಲಿನ ಸಾರ್ವಜನಿಕರಿಗೆ ಮತದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಯಿತು.
ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿ ಅಧಿಕಾರಿ ಆಯೆಷಾ ಮತದಾನ ಹಕ್ಕು ಪಡೆದಿರುವವರೆಲ್ಲರೂ ಕಡ್ಡಾಯವಾಗಿ ಮತದಾನದ ಹಕ್ಕನ್ನು ಚಲಾಯಿಸಬೇಕು. 18 ವರ್ಷ ವಯೋಮಿತಿಯ ಯುವಕ-ಯುವತಿಯರು ತಮ್ಮ ಹೆಸರನ್ನು ಮತದಾನ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವದರ ಬಗ್ಗೆ ಖಾತರಿ ಪಡಿಸಿಕೊಂಡು ಮತದಾನ ಮಾಡಬೇಕು ಎಂದರು. ಇದರ ಜೊತೆಯಲ್ಲಿ ಕೈಗಾರಿಕಾ ಘಟಕದ ಕಾರ್ಮಿಕರಿಗೆ ಮತದಾನ ಮಾಡಬೇಕೆಂಬ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಕೂಡ್ಲೂರು ಕೈಗಾರಿಕಾ ಬಡಾವಣೆಯ ಕಾರ್ಮಿಕರು ‘ನಮ್ಮ ಮತ ನಮ್ಮ ಹಕ್ಕು’ ಎಂಬ ಭಿತ್ತಿಪತ್ರಗಳನ್ನು ಹಿಡಿದು ಮೆರವಣಿಗೆ ಸಾಗಿದರು.