ಸೋಮವಾರಪೇಟೆ, ಏ. 14: ಇಲ್ಲಿನ ಬಿ.ಟಿ. ಚನ್ನಯ್ಯ ಗೌರಮ್ಮ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಪ್ರಥಮ ಮತ್ತು ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿಗಳಿಂದ ತೃತೀಯ ಬಿ.ಎ. ಮತ್ತು ಬಿಕಾಂ ವಿದ್ಯಾರ್ಥಿಗಳನ್ನು ಬೀಳ್ಕೊಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲ ಪ್ರೊ. ಕೆ.ಇ. ಐಪು ಮಾತನಾಡಿ, ಜೀವನದಲ್ಲಿ ಪ್ರತಿಕ್ಷಣವೂ ಸಹ ಅಮೂಲ್ಯವಾದುದು. ಒಮ್ಮೆ ಕಳೆದ ಸಮಯ ಮತ್ತೆ ಬಾರದು. ಜೀವನದಲ್ಲಿ ಎಚ್ಚರ ತಪ್ಪದೆ ಏನಾದರೂ ಮಹತ್ಕಾರ್ಯ ಸಾಧಿಸುವ ಗುರಿ ಹೊಂದಿರಬೇಕು ಎಂದು ಕಿವಿಮಾತು ಹೇಳಿದರು.

ಪ್ರೊ. ಶ್ರೀಧರ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಬೇರೆ ಯಾವದೇ ಆಕರ್ಷಣೆಗಳಿಗೆ ಒಳಗಾಗದೇ ಉತ್ತಮ ವಿಚಾರಗಳಿಗೆ ಸಮಯವನ್ನು ಮೀಸಲಿಡಿ ಎಂದರು. ಇತಿಹಾಸ ಉಪನ್ಯಾಸಕ ಸುನಿಲ್ ಮಾತನಾಡಿ, ವಿದ್ಯಾರ್ಥಿ ಜೀವನದ ನಂತರ ಸಾಮಾಜಿಕ ಜವಾಬ್ದಾರಿಗಳನ್ನು ಅರಿತು ಉತ್ತಮ ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು.

ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ತಮ್ಮ ಮೂರು ವರ್ಷಗಳ ಕಾಲೇಜಿನ ಅನುಭವವನ್ನು ಕಿರಿಯರೊಂದಿಗೆ ಹಂಚಿಕೊಂಡರು. ಪ್ರಥಮ ಮತ್ತು ದ್ವಿತೀಯ ತರಗತಿ ವಿದ್ಯಾರ್ಥಿಗಳು ಹಿರಿಯ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕಾಲೇಜಿನ ಹಿರಿಯ ಪ್ರಾಧ್ಯಾಪಕರುಗಳಾದ ಪ್ರೊ. ಕಮಲಾಕ್ಷ ಬಲ್ಯಾಯ, ಪ್ರೊ. ಹೆಚ್.ಎನ್. ರಾಜು, ಪ್ರೊ. ಧನಲಕ್ಷ್ಮಿ, ವಿದ್ಯಾರ್ಥಿ ಪರಿಷತ್ ನಿರ್ದೇಶಕ ಪ್ರೊ. ಎಂ.ಎಸ್. ಶಿವಮೂರ್ತಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.