ಸೋಮವಾರಪೇಟೆ, ಏ. 14: ಆಧ್ಯಾತ್ಮಿಕ ಶಕ್ತಿಯನ್ನು ಸಂಪಾದಿಸಿಕೊಂಡರೆ ಪ್ರತಿಯೊಬ್ಬರೂ ಜೀವನದಲ್ಲಿ ಯಶಸ್ಸು ಕಾಣಬಹುದು ಎಂದು ಆರ್ಟ್ ಆಫ್ ಲಿವಿಂಗ್‍ನ ಗುರುಗಳಾದ ಶ್ರೀ ಸೂರ್ಯಪಾದ ಸ್ವಾಮೀಜಿ (ಛಾಯಣ್ಣ) ಅಭಿಪ್ರಾಯಿಸಿದರು.

ಸೋಮವಾರಪೇಟೆ ಆರ್ಟ್ ಆಫ್ ಲಿವಿಂಗ್ ಘಟಕದ ವತಿಯಿಂದ ಇಲ್ಲಿನ ರಾಮಮಂದಿರದಲ್ಲಿ ಆಯೋಜಿಸಲಾಗಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಭಗವಂತನ ನಾಮಸ್ಮರಣೆಯಿಂದಲೇ ಜೀವನವನ್ನು ಸುಗಮಗೊಳಿಸಿ ಕೊಳ್ಳಬಹುದು. ಸೃಷ್ಟಿಕರ್ತನೊಂದಿಗೆ ಶರಣಾಗತಿ ಭಾವದಿಂದಿದ್ದರೆ ಹಲವಷ್ಟು ಸಂಕಷ್ಟಗಳು ತನ್ನಿಂತಾನೇ ದೂರಾಗುತ್ತದೆ. ಆಧ್ಮಾತ್ಮ ಎಂಬದು ಕೇವಲ ಕೆಲ ವರ್ಗಗಳಿಗೆ ಮಾತ್ರ ಸೀಮಿತವಲ್ಲ; ಸೀಮಾತೀತವಾದ ಆಧ್ಯಾತ್ಮಕ್ಕೆ ಎಲ್ಲರನ್ನೂ ಬರಸೆಳೆಯುವ ಅಗಾಧ ಶಕ್ತಿ ಇದೆ ಎಂದರು.

ಶ್ರೀ ರವಿಶಂಕರ್ ಗುರೂಜಿ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಆಧ್ಯಾತ್ಮ ಜ್ಞಾನವನ್ನು ವಿಶ್ವದಾದ್ಯಂತ ಪಸರಿಸುವ ಕಾರ್ಯವನ್ನು ಸಂಸ್ಥೆ ಮಾಡುತ್ತಿದೆ ಎಂದರು.

ಶ್ರೀಸೂರ್ಯಪಾದ ಸ್ವಾಮೀಜಿ, ಸಂಸ್ಥೆಯ ಶಿಕ್ಷಕರುಗಳಾದ ಸುನಿಲ್ ಚಂದ್ರ, ಗುರುಪ್ರಸಾದ್, ಕಾವ್ಯ, ಶ್ರುತಿ, ಅನೂಪ್, ಶ್ರೀವತ್ಸ, ಹಾಡಿಗರಿಂದ ಮೂಡಿಬಂದ ಭಜನಾ ಕಾರ್ಯಕ್ರಮ ಆಸ್ತಿಕ ಬಾಂಧವರಲ್ಲಿ ನವ ಚೈತನ್ಯ ತುಂಬಿಸಿತು. ಸೋಮವಾರಪೇಟೆ ಮಾತ್ರವಲ್ಲದೇ ಮಡಿಕೇರಿ, ಕುಶಾಲನಗರ, ವೀರಾಜಪೇಟೆಯಿಂದಲೂ ಆರ್ಟ್ ಆಫ್ ಲಿವಿಂಗ್‍ನ ಪದಾಧಿಕಾರಿಗಳು ಭಾಗವಹಿಸಿದ್ದರು.

ಸಂಸ್ಥೆಯ ಸೋಮವಾರಪೇಟೆಯ ಸಂಚಾಲಕಿ ರಾಗಿಣಿ, ಮೃತ್ಯುಂಜಯ, ಸ್ವಯಂ ಸೇವಕರಾದ ಅಶ್ವಿನಿ, ಶ್ರೀನಿವಾಸ್ ಅವರುಗಳು ಸತ್ಸಂಗವನ್ನು ಆಯೋಜಿಸಿದ್ದರು. ಶ್ರೀ ರಾಮ ಮಂದಿರದ ಪ್ರಧಾನ ಅರ್ಚಕ ಮೋಹನ್ ಮೂರ್ತಿ ಶಾಸ್ತ್ರಿ ಅವರು ವಿಶೇಷ ಪೂಜೆ ನೆರವೇರಿಸಿದರು.