ಮಡಿಕೇರಿ, ಏ. 14: ಹತ್ತು ಕುಟುಂಬ ಹದಿನೆಂಟು ಗೋತ್ರದ ಹಿರಿಮೆಯಿರುವ ಗೌಡ ಜನಾಂಗದ ನಡುವೆ ಕೊಡಗು ಗೌಡ ಯುವ ವೇದಿಕೆ ವತಿಯಿಂದ ಹಮ್ಮಿಕೊಂಡು ಬರಲಾಗುತ್ತಿರುವ ಕುಟುಂಬವಾರು ಕ್ರಿಕೆಟ್ ಹಬ್ಬ ಚೆರಿಯಮನೆ ಕ್ರಿಕೆಟ್ ಕಪ್ ತಾ. 15ರಿಂದ (ಇಂದಿನಿಂದ) ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. 224 ಕುಟುಂಬ ತಂಡಗಳು ಪ್ರತಿಷ್ಠಿತ ಕಪ್‍ಗಾಗಿ ಸೆಣಸಾಡಲಿದ್ದು, ಮೇ 5ರಂದು ಹಬ್ಬ ಸಮಾಪನಗೊಳ್ಳಲಿದೆ. ಈ ಪಂದ್ಯಾವಳಿಗೆ ಯುವ ವೇದಿಕೆ ಹಾಗೂ ಚೆರಿಯಮನೆ ಕುಟುಂಬಸ್ಥರು ಸಮರೋಪಾದಿಯಲ್ಲಿ ಸಿದ್ಧತೆಯಲ್ಲಿ ತೊಡಗಿದ್ದು, ಜ. ತಿಮ್ಮಯ್ಯ ಕ್ರೀಡಾಂಗಣ ಕ್ರೀಡಾಳುಗಳಿಗಾಗಿ ತಯಾರಾಗಿ ನಿಂತಿದೆ. ಮೈದಾನದಲ್ಲಿ ಎರಡು ಪಿಚ್‍ಗಳಲ್ಲಿ ಏಕಕಾಲದಲ್ಲಿ ಪಂದ್ಯಾಟಗಳು ನಡೆಯಲಿವೆ. ಮೈದಾನದ ಒಂದು ಬದಿಯಲ್ಲಿ ಉದ್ಘಾಟನಾ ಸಮಾರಂಭಕ್ಕಾಗಿ ಭವ್ಯ ವೇದಿಕೆ ಸಿದ್ಧಪಡಿಸಲಾಗಿದೆ. ಉದ್ಘಾಟನಾ ದಿನವಾದ
(ಮೊದಲ ಪುಟದಿಂದ) ತಾ. 15ರಂದು (ಇಂದು) ಬೆಳಿಗ್ಗೆ ಓಂಕಾರೇಶ್ವರ ದೇವಾಲಯದಿಂದ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರ್ರಾಷ್ಟ್ರೀಯ ಕ್ರೀಡಾಪಟುಗಳು ಕ್ರೀಡಾಜ್ಯೋತಿಯನ್ನು ತಂದು ಸುದರ್ಶನ ವೃತ್ತದಲ್ಲಿರುವ ಗುಡ್ಡೆಮನೆ ಅಪ್ಪಯ್ಯಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮೈದಾನಕ್ಕೆ ಆಗಮಿಸಲಿದ್ದಾರೆ. ಕ್ರೀಡಾ ಜ್ಯೋತಿ ಬೆಳಗಿದ ಬಳಿಕ ಸಮಾರಂಭ ಜರುಗಲಿದೆ.
ಉದ್ಘಾಟನಾ ಸಮಾರಂಭ ತಾ.15ರ ಪೂರ್ವಾಹ್ನ 10ಗಂಟೆಗೆ ನಡೆಯಲಿದ್ದು, ಆದಿಚುಂಚನಗಿರಿ ಮಹಾಸಂಸ್ಥಾನದ ಕೊಡಗು-ಹಾಸನ ಜಿಲ್ಲೆಗಳ ಮಠಾಧಿಪತಿ ಶ್ರೀ ಶಂಭುನಾಥ ಮಹಾಸ್ವಾಮೀಜಿ ಅವರು ಕ್ರೀಡಾಜ್ಯೋತಿ ಬೆಳಗಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಸಮಾರಂಭವನ್ನು ಕೇಂದ್ರ ಸಾಂಖ್ಯಿಕ ಯೋಜನಾ ಖಾತೆ ಸಚಿವ ದೇವರಗುಂಡ ಸದಾನಂದ ಗೌಡ ಅವರು ಉದ್ಘಾಟಿಸಲಿದ್ದು, ಕ್ರೀಡಾಕೂಟವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಉದ್ಘಾಟಿಸಲಿದ್ದಾರೆ. ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ನಿವೃತ್ತ ಪ್ರಾಂಶುಪಾಲ ಹಾಗೂ ಚೆರಿಯಮನೆ ಕ್ರಿಕೆಟ್ ಕಪ್ ಕ್ರೀಡಾಸಮಿತಿ ಅಧ್ಯಕ್ಷ ಚೆರಿಯಮನೆ ಡಾ|| ರಾಮಚಂದ್ರ ಅವರು ಆಶಯ ನುಡಿಗಳನ್ನಾಡಲಿದ್ದು, ಜಿ.ಪಂ. ಸದಸ್ಯ ಬಿ.ಎ.ಹರೀಶ್, ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚುರಂಜನ್, ಸುನಿಲ್ ಸುಬ್ರಮಣಿ, ಸಂಸದ ಪ್ರತಾಪ್‍ಸಿಂಹ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಕಬಡ್ಡಿ ಆಕರ್ಷಣೆ
ಅದೇ ರೀತಿ ಕ್ರಿಕೆಟ್ ಪಂದ್ಯಾಟದ ಜೊತೆಗೆ ಕುಟುಂಬವಾರು ಪುರುಷರ ಕಬಡ್ಡಿ ಮತ್ತು ಮಹಿಳೆಯರ ಮುಕ್ತ ಕಬಡ್ಡಿ ಪಂದ್ಯಾಟಗಳನ್ನೂ ಆಯೋಜಿಸಲಾಗುತ್ತಿದ್ದು,
ತಾ. 22ರಂದು ಈ ಪಂದ್ಯ ನಡೆಯಲಿದೆ. ಅಲ್ಲದೆ ಮಹಿಳೆಯರ ಮುಕ್ತ ಕಬಡ್ಡಿಗೆ 8 ತಂಡಗಳನ್ನು ನಿರೀಕ್ಷಿಸಲಾಗುತ್ತಿದೆ.
ಮಹಿಳೆಯರಿಗಾಗಿ ಕುಟುಂಬ ವಾರು ಥ್ರೋಬಾಲ್ ಪಂದ್ಯಾಟವನ್ನು ತಾ.22ರಂದು ನಡೆಸಲಾಗುತ್ತಿದ್ದು, ಭಾಗವಹಿಸಲಿಚ್ಛಿಸುವ ತಂಡಗಳು ಅದೇ ದಿನ ಬೆಳಿಗ್ಗೆ 9.30ರ ಒಳಗಾಗಿ ಹೆಸರು ನೋಂದಾಯಿಸಿ ಕೊಳ್ಳಬಹುದಾಗಿದೆ. ಕ್ರಿಕೆಟ್ ಪಂದ್ಯಾಟದ ಜೊತೆಗೆ ವಿವಿಧ ಸಾಮಾಜಿಕ ಸೇವಾ ಕಾರ್ಯ ಕ್ರಮಗಳಾದ ರಕ್ತದಾನ ಶಿಬಿರ, ನೇತ್ರ ತಪಾಸಣಾ ಶಿಬಿರ, ಮಧುಮೇಹ ತಪಾಸಣಾ ಶಿಬಿರವನ್ನು ಆಯೋಜಿ ಸಲಾಗಿದೆ. ಕಾರ್ಯಕ್ರಮದಲ್ಲಿ ಜನಾಂಗ ಭಾಂಧವರು ಸಾಂಪ್ರದಾಯಿಕ ಉಡುಗೆಯಲ್ಲಿ ಪಾಲ್ಗೊಳ್ಳಲಿರುವರು. -ಸಂತೋಷ್