ಕೂಡಿಗೆ, ಏ. 14: ರಾಜ್ಯದಲ್ಲೇ ಹೆಸರುವಾಸಿಯಾಗಿರುವ ಕೂಡಿಗೆಯ ಜಿಲ್ಲಾ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ವಿಶ್ವ ಕಲಾ ದಿನದ ಅಂಗವಾಗಿ ಜಿಲ್ಲೆಯ ಕಲಾ ಶಿಕ್ಷಕರು ತರಬೇತಿ ಕೇಂದ್ರದಲ್ಲಿ ಶಿಕ್ಷಣ ಅಭಿಯಾನಕ್ಕೆ ಬೇಕಾದ ರೀತಿಯಲ್ಲಿ, ಶಿಕ್ಷಣ ಇಲಾಖೆಯ ಸವಲತ್ತುಗಳನ್ನು ಬಿಂಬಿಸುವ ಮತ್ತು ಜಾನಪದ ಶೈಲಿಯ ಸಂಸ್ಕøತಿ, ಕಲೆ, ನೃತ್ಯ, ಸಾಂಪ್ರದಾಯಿಕ ಪದ್ಧತಿಗಳ ವೈವಿದ್ಯಮಯ ಚಿತ್ರಗಳು ಮತ್ತು ವೆರ್ಲಿಕಲೆ ಮಾದರಿಯ ಚಿತ್ರಗಳನ್ನು ಬಿಡಿಸಿದ್ದು, ನೋಡುಗರನ್ನು ಆಕರ್ಷಿಸುತ್ತಿವೆ.

ಶಿಕ್ಷಕರ ತರಬೇತಿ ಕೇಂದ್ರದ ಮುಖ್ಯದ್ವಾರದಿಂದ ತರಬೇತಿ ಸಂಸ್ಥೆಯ ಹೊರಭಾಗದಲ್ಲೂ ಚಿತ್ರಗಳನ್ನು ಬಿಡಿಸಲಾಗಿದೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಈ ಕೇಂದ್ರದಲ್ಲಿ ತರಬೇತಿ ನೀಡುತ್ತಿದ್ದು, ಶಿಕ್ಷಕರಿಗೆ ತರಬೇತಿ ನೀಡುವ ತರಗತಿಗಳ ಕೋಣೆಗಳಲ್ಲಿಯೂ ತರಬೇತಿಯ ವಿಷಯಕ್ಕೆ ಸಂಬಂಧಿಸಿದ ಚಿತ್ರಗಳನ್ನು ಬಿಡಿಸಲಾಗಿದೆ.

ಕೂಡಿಗೆ ಶಿಕ್ಷಕರ ತರಬೇತಿ ಕೇಂದ್ರದ ಪ್ರಾಂಶುಪಾಲ ವಾಲ್ಟರ್ ಹಿಲೇರಿ ಡಿ. ಮೊಲೊ ಅವರ ಪ್ರಯತ್ನದಿಂದ ಜಿಲ್ಲೆಯ ಎಂಟು ಕಲಾ ಶಿಕ್ಷಕರು ಚಿತ್ರಗಳನ್ನು ಡಯಟ್ ಕೇಂದ್ರದ ಮುಂಭಾಗ ಹಾಗೂ ಮುಖ್ಯದ್ವಾರದ ಗೋಡೆಗಳಲ್ಲಿ ಕೊಠಡಿಗಳ ಗೋಡೆಗಳ ಮೇಲೆ ಚಿತ್ರಿಸಿದ್ದಾರೆ.

ಜಿಲ್ಲೆಯ ಪ್ರಸಿದ್ಧ ಕಲಾವಿದ ಬಿ.ಆರ್. ಸತೀಶ್, ಕ್ಲಿಫರ್ಡ್ ಡಿ. ಮೊಲೊ, ಪರಶುರಾಮಣ್ಣ, ಬಸವರಾಜ್ ಬಡಿಕೇರ್, ಬಾಸ್ಕರ್, ಕರಿಯಪ್ಪ, ಸದಾಶಿವ ಎಸ್. ಪಲ್ಲೇದ್, ಊ.ರಾ. ನಾಗೇಶ, ಕಲಾ ಶಿಕ್ಷಕರು ಈ ಕಲಾ ಚಟುವಟಿಕೆಗಳಲ್ಲಿ ಭಾಗಿಗಳಾಗಿ ತಮ್ಮ ಕುಂಚಗಳಿಂದ ಕಲಾತ್ಮಕ ಚಿತ್ರ ಮತ್ತು ಬರಹಗಳನ್ನು ಮೂಡಿಸಿದ್ದಾರೆ.