ವೀರಾಜಪೇಟೆ, ಏ. 14: ಹರದಾಸ ಅಪ್ಪಚ್ಚಕವಿ ಕಾವ್ಯ ಸುಧೆಯಲ್ಲಿ ಕರಡ ಗ್ರಾಮದ ಕಾವ್ಯ ಪ್ರಿಯರು ಮಿಂದೆದ್ದರು. ಹಿರಿಯ ರಂಗಕರ್ಮಿ, ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಅಡ್ಡಂಡ ಕಾರ್ಯಪ್ಪ ನಿರ್ದೇಶಿಸಿದ “ಅಮರ ಕಾವ್ಯ” ಕಾರ್ಯಕ್ರಮ, ಕಾವ್ಯ ಪ್ರಿಯರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು. ಕನ್ನಡ ನಾಡಿನ ಖ್ಯಾತ ಕವಿಗಳೊಂದಿಗೆ ಅಪ್ಪಚ್ಚ ಕವಿಯನ್ನು ಸಮೀಕರಿಸಿ ನಡೆಸಿದ ಕವಿಗಾಯನ - ಅರ್ಥ ವಿವರಣೆ ಕವಿಯ ಬದುಕು, ಬರಹದ ಪೂರ್ಣ ಮಾಹಿತಿಯನ್ನು ಒದಗಿಸಿತು. ಈ ಕಾರ್ಯಕ್ರಮದಲ್ಲಿ ಕಲಾವಿದರಾದ ಮದ್ರೀರ ಸಂಜು ಬೆಳ್ಯಪ್ಪ, ಆಂಗೀರ ಕುಸುಮ್‍ಮಾದಪ್ಪ, ವಿ.ಟಿ.ಶ್ರೀನಿವಾಸ್, ಚಂದ್ರು, ಅನಿತಾ ಕಾರ್ಯಪ್ಪ ಭಾಗವಹಿಸಿದ್ದರು.
ಕರಡ ಕಲ್ಚರಲ್ ರಿಕ್ರಿಯೇಷನ್ ಕ್ಲಬ್ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಹರದಾಸ ಅಪ್ಪಚ್ಚಕವಿಯ 150ನೇ ಜನ್ಮೋತ್ಸವ ಮತ್ತು ಹಾಕಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಈ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವೀರಾಜಪೇಟೆ ಜಾನಪದ ಪರಿಷತ್ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ಮಾತನಾಡಿ ಕೊಡಗಿನ ದಾನಿಗಳು ಉದಾತ್ತ ಮನಸ್ಸಿನಿಂದÀ ಶಿಕ್ಷಣ ಕ್ಕಾಗಿ ದಾನ ಮಾಡಿದ ಸಂಸ್ಥೆಗಳನ್ನು ಪರ ಊರಿನ, ಪರಸಂಸ್ಥೆಗಳಿಗೆ ವರ್ಗಾವಣೆ ಮಾಡಿ ದಾನಿಗಳ ಆತ್ಮಕ್ಕೆ ದ್ರೋಹ ಬಗೆಯಬಾರದೆಂದರು.
ಮತ್ತೊಬ್ಬ ಅತಿಥಿ, ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ಮಾತನಾಡಿ ಅಪ್ಪಚ್ಚಕವಿ ನಾಡಿನ ಶ್ರೇಷ್ಠ ತತ್ವಜ್ಞಾನಿ. ಇವರೊಂದಿಗೆ ಕಡಿಯತ್‍ನಾಡಿನಲ್ಲಿ ಅದರಲ್ಲೂ ಕರಡ ಗ್ರಾಮದವರೇ ಆದ ನಡಿಕೇರಿಯಂಡ ಚಿಣ್ಣಪ್ಪ ಮಹಾನ್ ಜಾನಪದ ವಿದ್ವಾಂಸರಾಗಿದ್ದರು. ಇಂತಹವರನ್ನು ನೆನೆಸಿಕೊಳ್ಳುವದು ಜನಾಂಗದ ಕರ್ತವ್ಯ ಆಗಬೇಕು ಎಂದರು. ಮಾರ್ಚ್ 30 ರಿಂದ ಏಪ್ರಿಲ್ 13ರ ವರೆಗೆ ವಿದ್ಯಾರ್ಥಿಗಳಿಗೆ ನಡೆಸಿದ ಹಾಕಿ ಶಿಬಿರದ ಸಮಾರೋಪ ಸಮಾರಂಭವು ಇದರೊಂದಿಗೆ ನಡೆಯಿತು. ರಾಷ್ಟ್ರೀಯ ಫ್ಲೋರ್ ಹಾಕಿ ಆಟಗಾರ ಐತಿಚಂಡ ಪೂವಯ್ಯ ತರಬೇತಿ ನೀಡಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಬೇಪಡಿಯಂಡ ಬಿದ್ದಪ್ಪ ವಹಿಸಿದ್ದು, ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ವಾಂಚೀರ ನಾಣಯ್ಯ, ಮಲೆತಿರಿಕೆ ಈಶ್ವರ ದೇವಸ್ಥಾನದ ಅಧ್ಯಕ್ಷ ನಡಿಕೇರಿಯಂಡ ಚಿಣ್ಣಪ್ಪ ಮುಂತಾದವರು ಭಾಗವಹಿಸಿದ್ದರು. ಬಲ್ಯಮಿದೇರಿರ ಸುಬ್ರಮಣಿ ಕಾರ್ಯಕ್ರಮ ನಿರೂಪಿಸಿದರು.