ವೀರಾಜಪೇಟೆ, ಏ. 14: ಕೊಡಗು - ಕೇರಳ ನಡುವೆ ಸಂಪರ್ಕ ಬೆಸೆಯುವ ಮಾಕುಟ್ಟ ಪ್ರದೇಶ ದಲ್ಲಿರುವ ಶತಮಾನದ ಹಿಂದಿನ ಸೇತುವೆ ಪುನರ್ ನಿರ್ಮಾಣಕ್ಕೆ ಉಭಯ ರಾಜ್ಯಗಳ ನಡುವೆ ವಿವಾದ ತಲೆದೋರಿದೆ. ಇದಕ್ಕೆ ಕಾರಣ 12424 ಹೆಕ್ಟೇರ್‍ನಷ್ಟು ಮಾಕುಟ್ಟ ವಲಯದ ಕೆರ್ಟಿ ಮೀಸಲು ಅರಣ್ಯದ ಅಂಚಿನಲ್ಲಿ ಈ ಕೂಟುಹೊಳೆ ಹರಿಯುತ್ತಿದೆ.ಇಲ್ಲಿ 1928ರ ವೇಳೆಗೆ ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರು, ಅಂದಿನ ಕಾಲಕ್ಕೆ ತಕ್ಕಂತೆ ಕೂಟುಹೊಳೆಗೆ ಅಡ್ಡಲಾಗಿ

(ಮೊದಲ ಪುಟದಿಂದ) ಸೇತುವೆಯೊಂದನ್ನು ನಿರ್ಮಿಸಿದ್ದಾರೆ. ಅಂದು ಈ ಸೇತುವೆಯ ನಕಾಶೆಯನ್ನು ಹಾಗೂ ನಿರ್ಮಾಣ ತಂತ್ರಜ್ಞಾನವನ್ನು ‘‘ಸೆಂಟ್ರಲ್ ಕನ್ಸ್ಟ್ರಕ್ಷನ್ ಮಡ್ರಾಸ್’’ ಮುಖಾಂತರ ನಿರ್ಮಿಸಲಾಗಿದೆ. ಸರಿ ಸುಮಾರು 90 ವರ್ಷಗಳ ಇತಿಹಾಸವಿರುವ ಈ ಸೇತುವೆ ತನಕ ಈಗಾಗಲೇ ಕೇರಳ ಸರಕಾರದಿಂದ ಚತುಷ್ಪಥ ರಸ್ತೆ ಕಾಮಗಾರಿ ಭರದಿಂದ ಸಾಗಿದೆ. ಈ ಹಳೆಯ ಸೇತುವೆ ಬಳಿ ಬೃಹತ್ ಗಾತ್ರದೊಂದಿಗೆ ಚತುಷ್ಪಥ ರಸ್ತೆಗೆ ಸರಿಸಮಾನ ಸೇತುವೆಯ ಯೋಜನೆ ರೂಪುಗೊಂಡಿದೆ. ಅರಣ್ಯ ಇಲಾಖೆಯ ಅಡ್ಡಿ ನಮ್ಮ ರಾಜ್ಯವನ್ನು ನೆರೆಯ ಕೇರಳ ರಾಜ್ಯದೊಂದಿಗೆ ಬೆಸೆಯುವ 125 ವರ್ಷಗಳ ಇತಿಹಾಸ ಹೊಂದಿರುವ ಕೂಟುಹೊಳೆ ಸೇತುವೆಯನ್ನು ಕೆಡವಿ ಹೊಸ ಸೇತುವೆ ನಿರ್ಮಾಣಕ್ಕೆ ಕೇರಳ ಲೋಕೋಪಯೋಗಿ ಇಲಾಖೆ ತಿಂಗಳುಗಳ ಹಿಂದೆ ಕೈ ಹಾಕಿತ್ತು. ಹತ್ತಿರದ ಮಟ್ಟನೂರಿನಲ್ಲಿ ಪ್ರಾರಂಭದ ಹಂತದಲ್ಲಿರುವ ಕಣ್ಣನೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗುವ ಪ್ರಮುಖ ರಸ್ತೆಗಳ ಆಧುನೀಕರಣಕ್ಕಾಗಿ ವಿಶ್ವಬ್ಯಾಂಕ್‍ನ 256 ಕೋಟಿ ರೂ.ಗಳ ನೆರವಿನ ಯೋಜನೆಯಲ್ಲಿ ಈ ಸೇತುವೆಯ ಪುನರ್ ನಿರ್ಮಾಣ ಕಾಮಗಾರಿಯೂ ಸೇರಿತು. ವೀರಾಜಪೇಟೆ ನಗರದಿಂದ 28.ಕಿ.ಮೀ.ದೂರದಲ್ಲಿ ಕಣ್ಣನೂರಿಗೆ ಸಾಗುವ ರಸ್ತೆಯಲ್ಲಿ ಈ ಸೇತುವೆಯು ಇದೆ. ಅತ್ಯಂತ ಕಿರಿದಾದ ಈ ಸೇತುವೆ ಕೆಡವಿ ಹೊಸ ಸೇತುವೆ ನಿರ್ಮಾಣದ ಬೇಡಿಕೆಗೆ ವರ್ಷಗಳ ಇತಿಹಾಸವಿದೆ.

ಆದರೆ ಸೇತುವೆ ಪುನರ್ ನಿರ್ಮಾಣ ಕಾಮಗಾರಿಗೆ ಪ್ರಾರಂಭದಿಂದಲೇ ಕರ್ನಾಟಕ ಅರಣ್ಯ ಇಲಾಖೆ ತಡೆಯೊಡ್ಡುತ್ತಾ ಬಂತು. ಸೇತುವೆ ನಿರ್ಮಾಣದ 300 ಮೀ.ಜಾಗವನ್ನು ಕೇರಳ ರಾಜ್ಯವು ಅತಿಕ್ರಮಿಸಿದೆ ಎಂದು ಅರಣ್ಯ ಇಲಾಖೆ ಆರೋಪಿಸಿದೆ. ಬಹುತೇಕ ಭೂ ಭಾಗ ರಾಜ್ಯ ಅರಣ್ಯ ಇಲಾಖೆಗೆ ಸೇರಿದುದ್ದಾಗಿದೆ. ಕೇರಳ ಸರಕಾರ ಯಾವದೇ ಮುನ್ಸೂಚನೆಯಿಲ್ಲದೆ ಸೇತುವೆ ನಿರ್ಮಾಣಕ್ಕೆ ಕೈ ಹಾಕಿದ್ದು ಅರಣ್ಯ ಇಲಾಖೆಯ ಕೆಂಗÀಣ್ಣಿಗೆ ಕಾರಣವಾಗಿತ್ತು. ಆದ್ದರಿಂದ ಸೇತುವೆ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಬೇಕೆಂದು ಕಾಮಗಾರಿಯ ಹೊಣೆ ಹೊತ್ತಿರುವ ಕೆ.ಎಸ್.ಟಿ.ಪಿ.ಗೆ ಕಳೆದ ಡಿಸೆಂಬರ್‍ನಲ್ಲಿ ಅರಣ್ಯ ಇಲಾಖೆಯು ಪತ್ರವೊಂದನ್ನು ಬರೆದಿತ್ತು. ಭೂ ಭಾಗವನ್ನು ಸರ್ವೆ ಮಾಡುವದರ ಮೂಲಕ ಜಾಗದ ಗುರುತು ಮಾಡಬೇಕೆಂದು ಪತ್ರದಲ್ಲಿ ಕೋರಲಾಗಿತ್ತು. ಕಳೆದ ಡಿಸೆಂಬರ್‍ನಲ್ಲಿ ನಡೆದ ಭೂಭಾಗ ಅಳತೆ ನಂತರ ಹೊಸ ಗಡಿಯನ್ನು ಗುರುತಿಸಲಾಗಿತ್ತು. ಆದರೆ ಆ ಪ್ರದೇಶದಲ್ಲಿ ಕಾಮಗಾರಿಗೆ ಕೆ.ಎಸ್.ಟಿ.ಪಿ. ಒಪ್ಪಿಕೊಳ್ಳಲಿಲ್ಲ. ಈ ಕಾರಣದಿಂದ ಸೇತುವೆ ಕಾಮಗಾರಿಯು ಸ್ಥಗಿತಗೊಂಡ ಸ್ಥಿತಿಯಲ್ಲಿ ಇದೆ. ಕರ್ನಾಟಕ ಅರಣ್ಯ ಇಲಾಖೆಯು ತೀರ್ಮಾನ ಸಡಿಲಗೊಳಿಸಿದಲ್ಲಿ ಮಾತ್ರ ಕಾಮಗಾರಿಯು ಮುಂದುವರಿಯಲಿದೆ. ಈ ಮಧ್ಯೆ ಕೇರಳದ ಲೋಕೋಪ ಯೋಗಿ ಇಲಾಖೆಯ ಅಧಿಕಾರಿಗಳು ಮುಂಬರುವ ಚುನಾವಣೆ ನಂತರ ಕರ್ನಾಟಕದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವದಾಗಿ ಮಾಹಿತಿ ಲಭಿಸಿದೆ. -ವರದಿ: ರೆಹಮಾನ್.