ಮಡಿಕೇರಿ, ಏ. 14: ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಗರ್ವಾಲೆಯಲ್ಲಿರುವ ಭಾರತೀಯ ವಿದ್ಯಾಭವನದ ಗ್ರಾಮೀಣ ಶಾಲೆಗೆ ಹ್ಯಾಪಿ ಸ್ಕೂಲ್ ಪ್ರಾಜೆಕ್ಟ್ ನಡಿಯಲ್ಲಿ ರೂ. 1.15 ಲಕ್ಷ ಮೌಲ್ಯದ ಕ್ರೀಡೋಪಕರಣಗಳನ್ನು ನೀಡಲಾಯಿತು.

ರೋಟರಿ ಸಭಾಂಗಣದಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಅನಿಲ್ ಎಚ್.ಟಿ. ಕಾರ್ಯಕ್ರಮ ಸಂಯೋಜಕ ಡಾ. ಸಿ.ಆರ್. ಪ್ರಶಾಂತ್, ಕೆ.ಕೆ. ವಿಶ್ವನಾಥ್ ಕ್ರೀಡೋಪಕರಣಗಳನ್ನು ಗರ್ವಾಲೆಯಲ್ಲಿರುವ ಭಾರತೀಯ ವಿದ್ಯಾಭವನ ಶಾಲೆಯ ಮುಖ್ಯೋಪಾಧ್ಯಾಯ ಪಿ.ಕೆ. ಸೋಮಯ್ಯ ಮತ್ತು ದೈಹಿಕ ತರಬೇತಿ ಶಿಕ್ಷಕ ಹರೀಶ್ ಅವರಿಗೆ ಹಸ್ತಾಂತರಿಸಿದರು.

ಫುಟ್ಬಾಲ್, ವಾಲಿಬಾಲ್, ಬಾಸ್ಕೆಟ್ ಬಾಲ್, ಹಾಕಿ ಸ್ಟಿಕ್, ಶಟಲ್ ಬ್ಯಾಡ್ಮಿಂಟನ್ ನೆಟ್, ಕ್ರಿಕೆಟ್ ಬ್ಯಾಟ್, ಚೆಂಡು, ಕ್ರೀಡಾ ಸಮವಸ್ತ್ರಗಳು, ಶಾಲೆಯ ಪ್ರಯೋಗಾಲಯಕ್ಕೆ ವಿಜ್ಞಾನದ ಪರಿಕರಗಳೂ ಸೇರಿದಂತೆ ವಿವಿಧ ಪಠ್ಯೇತರ ಹಾಗೂ ಪ್ರಯೋಗಾಲಯಕ್ಕೆ ಸಂಬಂಧಿಸಿದ ಪರಿಕರಗಳನ್ನು ವಿತರಿಸಲಾಯಿತು.

ಇದೇ ಸಂದರ್ಭ ಸಂಖ್ಯಾ ಯೋಜನಾ ನಿರ್ದೇಶಕ ಕೆ.ಕೆ. ವಿಶ್ವನಾಥ್, ಈ ಶಾಲೆಗೆ 4 ಕಂಪ್ಯೂಟರ್‍ಗಳನ್ನು ನೀಡುವದಾಗಿ ಘೋಷಿಸಿದರು. ಮಿಸ್ಟಿ ಹಿಲ್ಸ್ ಅಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ಮಿಸ್ಟಿ ಹಿಲ್ಸ್ ಸದಸ್ಯರ ಆರ್ಥಿಕ ಸಹಕಾರದೊಂದಿಗೆ ಗರ್ವಾಲೆ ಶಾಲೆಯ ಮಕ್ಕಳಿಗೆ ಕ್ರೀಡೆಯಲ್ಲಿ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ರೂ. 1.15 ಲಕ್ಷ ಮೌಲ್ಯದ ಕ್ರೀಡೋಪಕರಣಗಳನ್ನು ನೀಡಲಾಗಿದೆ. ಈಗಾಗಲೇ ಈ ಗ್ರಾಮೀಣ ಶಾಲಾ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಾಕಷ್ಟು ಸಾಧನೆ ಮಾಡಿರುವದನ್ನು ಪರಿಗಣಿಸಿ ಮಿಸ್ಟಿ ಹಿಲ್ಸ್ ಪ್ರೋತ್ಸಾಹ ರೂಪದಲ್ಲಿ ನೆರವು ನೀಡುತ್ತಿದೆ ಎಂದರು. ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಕಾರ್ಯದರ್ಶಿ ಬಾಲಾಜಿ ಕಶ್ಯಪ್, ಮಿಸ್ಟಿ ಹಿಲ್ಸ್ ಮಾಜಿ ಅಧ್ಯಕ್ಷ ಡಾ. ಸಿ.ಆರ್. ಪ್ರಶಾಂತ್ ಅವರ ನೆರವನ್ನು ಈ ಸಂದರ್ಭ ಅನಿಲ್ ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಪಿ.ಎಂ. ಸಂದೀಪ್, ಮುಂದಿನ ಸಾಲಿನ ಅಧ್ಯಕ್ಷ ಜಿ.ಆರ್. ರವಿಶಂಕರ್, ಟೀಚ್ ಯೋಜನಾ ನಿರ್ದೇಶಕ ಪಿ.ಆರ್. ರಾಜೇಶ್, ಮಿಸ್ಟಿ ಹಿಲ್ಸ್ ನಿರ್ದೇಶಕರು, ಸದಸ್ಯರು ಹಾಜರಿದ್ದರು.