ಮಡಿಕೇರಿ, ಏ. 14: ಕೊಡಗಿನ ಮೂಲಭೂತ ಸಮಸ್ಯೆಗಳಿಗೆ ರಾಜಕೀಯ ಪಕ್ಷಗಳು ಸ್ಪಂದಿಸದಿರುವ ಹಿನ್ನೆಲೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪುಷ್ಪಗಿರಿ ಮೂಲ ನಿವಾಸಿಗಳ ಸಂಘ ಮಡಿಕೇರಿ ಹಾಗೂ ವೀರಾಜಪೇಟೆ ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಸಂಘದ ಅಧ್ಯಕ್ಷ ಎಂ.ಎಸ್. ಚಂದ್ರಶೇಖರ್ ತಿಳಿಸಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿಕೇರಿ ಕ್ಷೇತ್ರದಿಂತ ತಾನು ಪಕ್ಷೇತರನಾಗಿ ಸ್ಪರ್ಧಿಸಲಿದ್ದು, ಸಂಘಟನೆಯ ತತ್ವ ಸಿದ್ಧಾಂತವನ್ನು ಒಪ್ಪುವ ಸಮಾನ ಮನಸ್ಕ ಸೂಕ್ತ ವ್ಯಕ್ತಿ ಸ್ಪರ್ಧಿಸಲು ಇಚ್ಛಿಸಿದಲ್ಲಿ ವೀರಾಜಪೇಟೆ ಕ್ಷೇತ್ರದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುವದಾಗಿ ಹೇಳಿದರು.

ಪುಷ್ಪಗಿರಿ ಮೂಲನಿವಾಸಿಗಳ ಸಂಘವು ಜಿಲ್ಲೆಯ ಮೂಲ ನಿವಾಸಿ ಸಮುದಾಯಗಳಾದ ಅಮ್ಮಕೊಡವ, ಕೊಡವ, ಗೌಡ, ಹೆಗ್ಗಡೆ, ಕೆಂಬಟ್ಟಿ, ಜಮ್ಮಾ ಮಾಪಿಳ್ಳೆ, ಐರಿ, ಗೊಲ್ಲ, ಯರವ, ಮಾರಂಗಿ, ಕೊಯವ, ಕಣಿಯ, ಕುಡಿಯರು, ಕಾಪಾಳ, ಬೋವಿ, ಉಪ್ಪಾರ, ದೇವಾಂಗ ಬಿಲ್ಲವ, ವೀರಶೈವ ಲಿಂಗಾಯತ ಮತ್ತು ಬ್ರಾಹ್ಮಣ ಸಮುದಾಯಗಳನ್ನು ಪ್ರತಿನಿಧಿಸುವ ಸಂಘಟನೆಯಾಗಿದೆ ಎಂದರು. ನೆಲ, ಜಲ, ಕಲೆ, ಸಂಸ್ಕøತಿ, ಪರಿಸರದ ರಕ್ಷಣೆಗಾಗಿ, ದೂರದೃಷ್ಟಿಯ ಅಭಿವೃದ್ಧಿಗಾಗಿ, ಮತಾಂಧರಿಂದ ಕೊಡಗನ್ನು ಉಳಿಸುವದಕ್ಕಾಗಿ ಶ್ರಮಿಸುವ ಸಂಘಟನೆಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಕಸ್ತೂರಿ ರಂಗನ್ ಹಾಗೂ ಸೂಕ್ಷ್ಮ ಪರಿಸರ ತಾಣಕ್ಕೆ ಸಂಬಂಧಿಸಿದಂತೆ ವರದಿಗಳು ಬಂದಾಗ ಜಿಲ್ಲೆಯ ಗ್ರಾಮೀಣ ಜನರ ಭಾವನೆಗಳಿಗೆ ಪೂರಕವಾದ ನಿರ್ಣಯಗಳನ್ನು ಪಂಚಾಯಿತಿಗಳು ಮಂಡಿಸದೆ ಕೆಲವು ಗ್ರಾಮಗಳನ್ನು ಮಾತ್ರ ಸೂಕ್ಷ್ಮ ಪರಿಸರ ತಾಣವೆಂದು ಗುರುತಿಸುವಂತಾಗಿದೆ ಎಂದು ಆರೋಪಿಸಿದರು. ಈ ಗ್ರಾಮಗಳಲ್ಲಿ ಅನಾದಿ ಕಾಲದಿಂದ ನೆಲೆ ನಿಂತಿರುವ ಮೂಲ ನಿವಾಸಿಗಳ ಅಸ್ತಿತ್ವ ಮತ್ತು ಪರಿಸರ ರಕ್ಷಣೆಯ ಬಗ್ಗೆ ಯಾವದೇ ರಾಜಕೀಯ ಪಕ್ಷಗಳು ಸ್ಪಷ್ಟವಾದ ನಿರ್ಧಾರವನ್ನು ಪ್ರಕಟಿಸಿಲ್ಲ ಎಂದು ಚಂದ್ರಶೇಖರ್ ಅಸಮಾಧಾನ ವ್ಯಕ್ತಪಡಿಸಿದರು.

ಕೊಡಗಿನ ಪೈಸಾರಿ ಭೂಮಿಯಲ್ಲಿ ಕೃಷಿ ಮಾಡಿರುವ ಬಡ ರೈತರಿಗೆ, ಮನೆ ನಿರ್ಮಿಸಿಕೊಂಡು ವಾಸವಿರುವ ನಿವೇಶನ ರಹಿತರಿಗೆ ಹಕ್ಕುಪತ್ರಗಳನ್ನು ನೀಡುವಲ್ಲೂ ರಾಜಕೀಯ ಪಕ್ಷಗಳು ವಿಫಲವಾಗಿವೆ. ಸರಕಾರಿ ಆಸ್ಪತ್ರೆ, ಶಾಲೆಗಳನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸಿಲ್ಲ. ಸರಕಾರದ ಎಲ್ಲಾ ಕೆಲಸಗಳಲ್ಲೂ ಕಳಪೆ ಕಾಮಗಾರಿ, ದುಂದುವೆಚ್ಚ, ಕಮೀಷನ್ ದಂಧೆ ನಿಯಂತ್ರಿಸದಿರುವದು, ಕಚೇರಿಗಳಲ್ಲಿನ ಭ್ರಷ್ಟಾಚಾರವನ್ನು ತಡೆಯದಿರುವದು, ತೆರಿಗೆ ವಂಚನೆ, ಸರಕಾರಿ ಭೂಮಿ ಒತ್ತುವರಿ ಮಾಡಿ ರೆಸಾರ್ಟ್‍ಗಳ ನಿರ್ಮಾಣ, ಕಾನೂನು ಉಲ್ಲಂಘಿಸಿ ಬಹುಮಹಡಿ ಕಟ್ಟಡಗಳ ನಿರ್ಮಾಣ ಸೇರಿದಂತೆ ಜಿಲ್ಲೆಯ ಬಹುತೇಕ ಸಮಸ್ಯೆಗಳಿಗೆ ರಾಜಕೀಯ ಪಕ್ಷಗಳೇ ನೇರ ಹೊಣೆಯಾಗಿವೆ ಎಂದು ಆರೋಪಿಸಿದರು.

ಈ ಎಲ್ಲಾ ಸಮಸ್ಯೆಗಳ ಸಂಪೂರ್ಣ ಮಾಹಿತಿಯನ್ನೊಳಗೊಂಡ ಮನವಿಯನ್ನು ಸಂಘದ ವತಿಯಿಂದ ಸರಕಾರಕ್ಕೆ ಸಲ್ಲಿಸಲಾಗಿದ್ದರೂ, ಇದುವರೆಗೆ ಯಾವದೇ ಸ್ಪಂದನ ದೊರಕದಿರುವ ಹಿನ್ನೆಲೆಯಲ್ಲಿ ಸಂಘಟನೆಯು ಜಿಲ್ಲೆಯ ಮೂಲ ನಿವಾಸಿಗಳ ಪರವಾಗಿ ಚುನಾವಣಾ ಕಣಕ್ಕೆ ಇಳಿಯಲು ತೀರ್ಮಾನಿಸಿದೆ ಎಂದು ಚಂದ್ರಶೇಖರ್ ಘೋಷಿಸಿದರು.