ಮಡಿಕೇರಿ, ಏ.14 : ಮಲ್ಲಿಕಾರ್ಜುನ ನಗರದ ಶ್ರೀರಾಮಸೇವಾ ಸಮಿತಿಗೆ ಸೇರಿದ ಜಾಗವನ್ನು ಪತ್ರಕರ್ತರೊಬ್ಬರು ಕಬಳಿಸಲು ಯತ್ನಿಸಿದ್ದಾರೆ ಎಂದು ದಲಿತ ಸಂಘಟನೆಗಳು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಶ್ರೀ ಕೋದಂಡರಾಮ ದೇವಾಲಯದ ಶ್ರೀರಾಮ ಸೇವಾ ಸಮಿತಿ ಪದಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಗೌರವಾಧ್ಯಕ್ಷರಾದ ಹೆಚ್. ಮಂಜುನಾಥ್ ಹಾಗೂ ಇತರರು, ವಿನೋದ್ ಎಂಬ ವ್ಯಕ್ತಿ ದಲಿತ ಸಮುದಾಯದ ಹೆಸರಿಗೆ ಚ್ಯುತಿ ಬರುವ ರೀತಿಯಲ್ಲಿ ಪತ್ರಿಕಾ ಹೇಳಿಕೆಯನ್ನು ನೀಡಿದ್ದು, ಸಮಿತಿಯಲ್ಲಿ ಸ್ಥಾನ ದೊರೆಯಲಿಲ್ಲ ಎನ್ನುವ ಕಾರಣಕ್ಕಾಗಿ ಆರೋಪಗಳನ್ನು ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಲ್ಲಿಕಾರ್ಜುನ ನಗರದಲ್ಲಿ ಶೇ.70ರಷ್ಟು ಜನ ದಲಿತ ಸಮುದಾಯದ ಮಂದಿ ಇದ್ದು, ಇಲ್ಲಿ ದಲಿತ ವರ್ಗ ಬಲಿಷ್ಠವಾಗಿದೆ. ಸುಮಾರು 50 ವರ್ಷಗಳ ಹಿಂದೆ ಹೆಚ್.ನಿಂಗಪ್ಪ ಅವರು ಅಧ್ಯಕ್ಷರಾಗಿದ್ದ ಸಂದರ್ಭ ರಾಮಮಂದಿರವನ್ನು ದೇವಾಲಯವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಜಾಗವನ್ನು ಖರೀದಿಸಿದ್ದು, ಅಂದಿನಿಂದ ಇಂದಿನವರೆಗೂ ದೇವಾಲಯದ ಆಡಳಿತ ಮಂಡಳಿಯವರು ಇದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಸುಮಾರು 44 ವರ್ಷಗಳಿಂದ ದೇವಾಲಯದ ವತಿಯಿಂದ ದಸರಾ ಆಚರಿಸಲಾಗುತ್ತಿದ್ದು, ನಾಡಿನ ಎಲ್ಲಾ ಜನರು ಇದಕ್ಕೆ ಸಹಾಯ ಮಾಡುತ್ತಿದ್ದಾರೆ. ಪ್ರಸಕ್ತ ದೇವಾಲಯದ ಜೀರ್ಣೋದ್ಧಾರ ಕಾರ್ಯವನ್ನು ಸುಮಾರು 2-3 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದ್ದು, ಈ ಭಾರೀ ಮೊತ್ತದ ಹಣವನ್ನು ಸಂಗ್ರಹಿಸಬೇಕಾಗಿರುವದರಿಂದ ಸಭೆ ಕರೆದು ಚರ್ಚೆ ಮಾಡಲಾಗಿದೆ.

ಕಳೆದ ಹಲವಾರು ವರ್ಷಗಳಿಂದ ಯಾವದೇ ಪ್ರತಿಫಲಾಪೇಕ್ಷೆಯಿಲ್ಲದೆ, ಅಧಿಕಾರಕ್ಕಾಗಿ ಆಸೆ ಪಡದೆ ದೇವಾಲಯದ ಅಭಿವೃದ್ಧಿಗೆ ಶ್ರಮಿಸಿರುವ ಹಿರಿಯ ಪತ್ರಕರ್ತರೊಬ್ಬರನ್ನು ಈ ಸಮಿತಿಯ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ದೇವಾಲಯಕ್ಕೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳನ್ನು ಆನ್‍ಲೈನ್ ಮಾಡುವ ಸಂದರ್ಭ ದೇವಾಲಯಕ್ಕೆ ಸಂಬಂಧಿಸಿದ ಪ್ರಮುಖರ ಭಾವಚಿತ್ರ ಆ ದಾಖಲೆಯಲ್ಲಿ ಮುದ್ರಿತವಾಗುವದು ಕಡ್ಡಾಯವಾಗಿದೆ. ಆ ಪ್ರಕಾರವಾಗಿ ಸಂಬಂಧಿಸಿದ ಪತ್ರಕರ್ತರ ಹೆಸರು ಮತ್ತು ಭಾವಚಿತ್ರ ಫಾರಂ. ನಂ.3ರಲ್ಲಿ ನಮೂದಾಗಿದೆಯೇ ಹೊರತು ದೇವಾಲಯಕ್ಕೆ ಸಂಬಂಧಿಸಿದ ಜಾಗ ಅವರ ಹೆಸರಿಗೆ ವರ್ಗಾವಣೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಸ್ತುತ ಆಡಳಿತ ಮಂಡಳಿಯ ಅವಧಿ ಮೂರು ವರ್ಷಗಳಾಗಿದ್ದು, ಜೀರ್ಣೋದ್ಧಾರ ಕಾರ್ಯ ನಡೆದ ನಂತರ ಸ್ಥಳೀಯರೇ ಟ್ರಸ್ಟ್‍ನ ಅಧ್ಯಕ್ಷರಾಗಲಿದ್ದಾರೆ. ಆದರೆ ವಿನೋದ್ ಹಾಗೂ ಅವರೊಂದಿಗಿದ್ದ ದಲಿತ ನಾಯಕರೆನಿಸಿಕೊಂಡವರು ಇದರ ಪೂರ್ವಾಪರ ತಿಳಿಯದೆ ದಲಿತರ ಹೆಸರಿಗೆ ಚ್ಯುತಿ ಬರುವ ರೀತಿಯಲ್ಲಿ ಹೇಳಿಕೆ ನೀಡಿದ್ದು, ಇದು ಖಂಡನೀಯ ಎಂದರು.

ಮಲ್ಲಿಕಾರ್ಜುನ ನಗರದಲ್ಲಿರುವ ವಿನೋದ್ ಎಂಬ ಏಕ ವ್ಯಕ್ತಿ ದಲಿತ ಸಮುದಾಯಕ್ಕೆ ಕೆಟ್ಟ ಹೆಸರು ಬರುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದು, ಈ ವ್ಯಕ್ತಿ ಸೇವಾ ಸಮಿತಿ ಅಧ್ಯಕ್ಷರಾಗಿದ್ದ ಸಂದರ್ಭ ದಲಿತ ಸಮುದಾಯದವರಿಗೆ ಅಲ್ಲಿ ಗಣೇಶ ಚತುರ್ಥಿ ಮತ್ತು ಇತರ ಹಬ್ಬಗಳನ್ನು ಮಾಡಲು ಬಿಡುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಒಂದೇ ವರ್ಷದಲ್ಲಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿದ್ದು, ಅವರ ಬಳಿಕ ತಿಮ್ಮಯ್ಯ ಎಂಬವರು ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಈ ವಿನೋದ್ ಎಂಬ ವ್ಯಕ್ತಿ ಈಗಲೂ ತಮ್ಮಲ್ಲಿರುವ ಲೆಟರ್‍ಹೆಡ್‍ನ್ನು ದುರ್ಬಳಕೆ ಮಾಡಿಕೊಂಡು ನಗರಸಭೆ, ಮೂಡಾ ಮತ್ತಿತರ ಕಡೆಗಳಿಗೆ ತಾನೇ ಅಧ್ಯಕ್ಷನೆಂದು ಪತ್ರಗಳನ್ನು ಬರೆದು ದೇವಾಲಯದ ಅಭಿವೃದ್ಧಿ ಕಾರ್ಯಗಳಿಗೆ ತೊಡಕುಂಟು ಮಾಡುತ್ತಿದ್ದಾರೆ. ಅಲ್ಲದೆ ಅವರ ಅವಧಿಯಲ್ಲಿ ಸಮಿತಿಯಲ್ಲಿ ಹಣದ ಹಣದ ಲೆಕ್ಕಾಚಾರವನ್ನು ಸಮರ್ಪಕವಾಗಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ನಗರದ ಯಾವದೇ ದಲಿತರು ಅವರೊಂದಿಗೆ ಬೆರೆಯುತ್ತಿಲ್ಲ. ಇದಕ್ಕಾಗಿ ಅವರು ದೂರದ ಕುಶಾಲನಗರ, ಸೋಮವಾರಪೇಟೆ, ಪಾಲೆಮಾಡು ಮುಂತಾದೆಡೆಗಳಿಂದ ದಲಿತ ಮುಖಂಡರೆನಿಸಿಕೊಂಡವರನ್ನು ಕರೆಸಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ ಎಂದು ಹೆಚ್. ಮಂಜುನಾಥ್ ಆರೋಪಿಸಿದರು.

ಸಮಾಜದಲ್ಲಿ ಗೌರವ ಸ್ಥಾನದಲ್ಲಿರುವ ಮತ್ತು ಎಲ್ಲಾ ರಂಗದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಗಳ ತೇಜೋವಧೆ ಮಾಡುವದಕ್ಕಾಗಿಯೇ ವಿನೋದ್, ನಿರ್ವಾಣಪ್ಪ, ರಾಜು, ಸಣ್ಣಪ್ಪ, ಶಿವಕುಮಾರ್ ಹಾಗೂ ಮೊಣ್ಣಪ್ಪ ಅವರನ್ನು ಬಳಸಿಕೊಂಡಿದ್ದು, ಅವರುಗಳು ಕೂಡಾ ಮಲ್ಲಿಕಾರ್ಜುನ ನಗರದ ಸ್ಥಳೀಯರೊಂದಿಗೆ ಚರ್ಚಿಸದೆ ಕೇವಲ ಒಬ್ಬ ವ್ಯಕ್ತಿಯ ಮಾತು ಕೇಳಿಕೊಂಡು ಸುಳ್ಳು ಆರೋಪಗಳನ್ನು ಮಾಡಿರುವದು ಖಂಡನೀಯವೆಂದರು.

ಮಲ್ಲಿಕಾರ್ಜುನಗರದ ದೇವಾಲಯಕ್ಕೆ ಸಂಬಂಧಿಸಿದ ವಿಚಾರದಲ್ಲಿ ವಿನೋದ್ ಅಪಪ್ರಚಾರ ನಿಲ್ಲಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಕಾನೂನಿನ ಹೋರಾಟ ನಡೆಸುವದಾಗಿ ಪ್ರಮುಖರು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಹೆಚ್.ಎನ್. ತಿಮ್ಮಯ್ಯ, ಪ್ರಧಾನ ಕಾರ್ಯದರ್ಶಿ ಆರ್. ವಿಶ್ವನಾಥ್, ಖಜಾಂಚಿ ಹೆಚ್.ಎಸ್. ಭರತ್, ಸಲಹೆಗಾರ ಹೆಚ್.ಎಸ್. ಗೋಪಿನಾಥ್ ಹಾಗೂ ಹೆಚ್.ಎನ್. ನಂಜುಂಡ ಅವರುಗಳು ಉಪಸ್ಥಿತರಿದ್ದರು.

ಆರೋಪ : ನಿನ್ನೆ ದಿನ ಪತ್ರಿಕಾಗೋಷ್ಠಿ ನಡೆಸಿದ್ದ ಶ್ರೀ ರಾಮ ಸೇವಾ ಸಮಿತಿಯ ಮಾಜಿ ಅಧ್ಯಕ್ಷ ಎಂ.ಜಿ. ವಿನೋದ್ ಹಾಗೂ ಇತರರು ಮಾತನಾಡಿ ಹಿರಿಯ ಪತ್ರಕರ್ತರೊಬ್ಬರು ದೇವಾಲಯದ ಜಾಗವನ್ನು ಅವರ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ನಗರಸಭಾ ಪೌರಾಯುಕ್ತರಿಗೆ ದೂರು ನೀಡಿರುವದಾಗಿ ತಿಳಿಸಿದ್ದರು. ಗೋಷ್ಠಿಯಲ್ಲಿ ಡಿ.ಎಸ್. ನಿರ್ವಾಣಪ್ಪ, ಕೆ.ಬಿ. ರಾಜು, ಹೆಚ್.ಇ. ಸಣ್ಣಪ್ಪ, ಮೊಣ್ಣಪ್ಪ, ಶಿವಕುಮಾರ್ ಉಪಸ್ಥಿತರಿದ್ದರು.