ಚಿತ್ರ ವರದಿ: ಎ.ಎನ್ ವಾಸು ಸಿದ್ದಾಪುರ, ಏ. 14: ಕೊಡಗು ಜಿಲ್ಲಾಮಟ್ಟದ ರೋಮನ್ ಕ್ಯಾಥೋಲಿಕ್ 7ನೇ ವರ್ಷದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಸಿದ್ದಾಪುರದಲ್ಲಿ ಅದ್ಧೂರಿಯಾಗಿ ಚಾಲನೆ ನೀಡಲಾಯಿತು.ಸಿದ್ದಾಪುರದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ಸಂತ ಮರಿಯಮ್ಮ ಫರೋನಾ ದೇವಾಲಯ ವತಿಯಿಂದ ಮೂರು ದಿನಗಳ ಕಾಲ ನಡೆಯುವ ಜಿಲ್ಲಾಮಟ್ಟದ ರೋಮನ್ ಕ್ಯಾಥೋಲಿಕ್ ಕ್ರಿಕೆಟ್ ಪಂದ್ಯಾವಳಿಯ ಧ್ವÀ್ವಜಾರೋಹಣವನ್ನು ಸಿದ್ದಾಪುರ ಸಂತ ಮರಿಯಮ್ಮ ಫೋರೋನ್ ದೇವಾಲಯದ ಧರ್ಮಗುರು ಫಾ.ವಿ.ಎಂ ಮಾಣಿ ನೆರವೇರಿಸಿದರು. ನಂತರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಸಮಾಜದಲ್ಲಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಹಾಗೂ ಸೌಹಾರ್ದತೆ, ಭಾವೈಕ್ಯತೆ ಮೂಡಿಸಲು ಕ್ರೀಡೆ ಸಹಕಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ಸಮುದಾಯದಲ್ಲಿ ಪ್ರೀತಿ ವಿಶ್ವಾಸ ಬೆಳೆಸಿಕೊಳ್ಳಲು, ಭಾಂದವ್ಯವನ್ನು ವೃದ್ಧಿಸಲು ಕ್ರೀಡೆ ಆಯೋಜಿಸಲಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಸಣ್ಣ ಬೆಳೆಗಾರರ ಸಂಘದ ಉಪಾಧ್ಯಕ್ಷ ಚೇರಂಡ ನಂದಾ ಸುಬ್ಬಯ್ಯ, ಜಿಲ್ಲೆಯಲ್ಲಿ ಕ್ರೀಡೆಗೆ ಹೆಚ್ಚಿನ ಪ್ರಾಶಸ್ತ್ಯ ದೊರೆಯುತ್ತಿದ್ದು, ಕ್ರೀಡೆಯ ತವರೂರಾದ ಕೊಡಗು ಜಿಲ್ಲೆಯಲ್ಲಿ ಕೊಡವ ಕುಟುಂಬಗಳು ಆರಂಭಿಸಿದ ಹಾಕಿಯ ನಂತರ ಇದೀಗ ಎಲ್ಲಾ ಸಮುದಾಯದವರು ಬೇರೆ ಬೇರೆ ರೀತಿಯ ಕ್ರೀಡಾಕೂಟವನ್ನು ಹಮ್ಮಿಕೊಳ್ಳುತ್ತಿರುವದು ಉತ್ತಮ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರೋಮನ್ ಕ್ಯಾಥೋಲಿಕ್ ಸಂಘದ ಉಪಾಧ್ಯಕ್ಷ
(ಮೊದಲ ಪುಟದಿಂದ) ಪಿ.ವಿ ಜಾನ್ಸನ್ ಮಾತನಾಡಿ, ಜಿಲ್ಲೆಯಲ್ಲಿ ಪುಟ್ಟ ಪುಟ್ಟ ಹೆಜ್ಜೆಯನ್ನಿಡುತ್ತಾ ಪ್ರಾರಂಭಿಸಿದ ರೋಮನ್ ಕ್ಯಾಥೋಲಿಕ್ ಕ್ರೀಡಾ ಕೂಟ ಇದೀಗ 7ನೇ ವರ್ಷಕ್ಕೆ ಕಾಲಿಟ್ಟಿದ್ದು, ಸಮುದಾಯದಲ್ಲಿ ಸಾಮರಸ್ಯ, ಭಾವೈಕ್ಯತೆ ಹಾಗೂ ಒಬ್ಬರನ್ನೊಬ್ಬರು ಗುರುತಿಸಿಕೊಳ್ಳಲು ಕ್ರೀಡಾಕೂಟ ಸಹಕಾರಿಯಾಗಿದೆ ಎಂದರು. ಮೈದಾನವನ್ನು ರೋಮನ್ ಕ್ಯಾಥೋಲಿಕ್ ಸಂಘದ ಜಿಲ್ಲಾ ಅಧ್ಯಕ್ಷ ಜೋಸೆಫ್ ಶಾಂ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಟಿ.ಪಿ ಕಂಸ್ಟ್ರಕ್ಷನ್ ಮಾಲೀಕ ಸಬಾಸ್ಟಿನ್, ಕ್ರೈಸ್ತ ಸಮುದಾಯದ ಪ್ರಮುಖರಾದ ಆಂಟೋಣಿ, ಜೋಯಿ, ಬೆನ್ನಿ, ಆಂಟೋ, ಜೋಕಿಂ, ಸಿಸ್ಟರ್ ಮೇರಿ ಸೇರಿದಂತೆ ಇನ್ನಿತರರು ಇದ್ದರು. ಕಾರ್ಯಕ್ರಮದ ಪ್ರಮುಖರಾದ ವಕೀಲ ವಿನಿಲ್ ಜೋಸೆಫ್ ಸ್ವಾಗತಿಸಿ, ವಂದಿಸಿದರು.