ಮಡಿಕೇರಿ, ಏ. 14: ವಿಶ್ವ ಚಿತ್ರಕಲಾ ದಿನಾಚರಣೆಯ ಪ್ರಯುಕ್ತ ಮಡಿಕೇರಿಯ ರಾಜಾಸೀಟ್ನಲ್ಲಿ ತಾ. 15 ರಂದು ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದ್ದು, ಇದೇ ದಿನ ಮತದಾನದ ಮಹತ್ವ ಸಾರುವ ಬೃಹತ್ ಚಿತ್ರಕಲಾ ಕ್ಯಾನ್ವಸ್ ಮೂಡಿಬರಲಿದೆ.
ಮಡಿಕೇರಿ ತಾಲೂಕು ಜಾನಪದ ಪರಿಷತ್, ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಬೆಳಿಗ್ಗೆ 10 ಗಂಟೆಗೆ ಚಿತ್ರಕಲಾ ಪ್ರದರ್ಶನವನ್ನು ಜಿಲ್ಲಾ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ ಉದ್ಘಾಟಿಸಲಿದ್ದಾರೆ. ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್, ಮಡಿಕೇರಿ ತಾಲೂಕು ಜಾನಪದ ಪರಿಷತ್ ಕಾರ್ಯದರ್ಶಿ ಸಂಗೀತ ಪ್ರಸನ್ನ, ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಪಿ.ಎಂ. ಸಂದೀಪ್, ಮುಂದಿನ ಸಾಲಿನ ಅಧ್ಯಕ್ಷ ಜಿ.ಆರ್. ರವಿಶಂಕರ್, ಅರುಣ್ ಸ್ಟೋರ್ಸ್ ಮಾಲೀಕ ಎಂ.ಕೆ. ಅರುಣ್, ರೋಟರಿ ಜೋನಲ್ ಲೆಫ್ಟಿನೆಂಟ್ ವಿನೋದ್ ಕುಶಾಲಪ್ಪ ಪಾಲ್ಗೊಳ್ಳಲಿದ್ದಾರೆ.
ವಿಶ್ವ ಚಿತ್ರಕಲಾ ದಿನಾಚರಣೆ ಅಂಗವಾಗಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಮತದಾನ ವಿಚಾರದ ಕುರಿತಂತೆ ಚಿತ್ರಕಲಾ ಸ್ಪರ್ಧೆಯನ್ನು ರಾಜಾಸೀಟ್ನಲ್ಲಿ ಬೆಳಿಗ್ಗೆ 10.30 ರಿಂದ 12 ಗಂಟೆಯವರೆಗೆ ಆಯೋಜಿಸಲಾಗಿದೆ. 1 ರಿಂದ 4, 5 ರಿಂದ 7 ಮತ್ತು 8 ರಿಂದ 10 ಹಾಗೂ ವಿಶೇಷಚೇತನ ಮಕ್ಕಳ ವಿಭಾಗದಲ್ಲಿ ಮತದಾನ ಕುರಿತ ವಿಚಾರವಾಗಿ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದ್ದು, ಸ್ಪರ್ಧಿಗಳೇ ಎಲ್ಲಾ ಪರಿಕರಗಳನ್ನು ತರಬೇಕಾಗಿದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ತಾ. 15 ರಂದು ಬೆಳಿಗ್ಗೆ 9.30 ಗಂಟೆಗೆ ರಾಜಾಸೀಟ್ಗೆ ಬಂದು ಸ್ಥಳದಲ್ಲಿಯೇ ಹೆಸರು ನೋಂದಾಯಿಸಿಕೊಳ್ಳಬಹುದು.
ಈ ಸಂದರ್ಭ ಮತದಾನದ ಮಹತ್ವ ಸಾರುವ ಬೃಹತ್ ಕ್ಯಾನ್ವಸ್ ಅನ್ನು ಕಲಾವಿದ ಬಿ.ಆರ್. ಸತೀಶ್ ನೇತೃತ್ವದಲ್ಲಿ ರೂಪಿಸಲಾಗುತ್ತದೆ. ಹಾಗೆಯೇ ವೀರಾಜಪೇಟೆಯ ಗಾಯಕ ಟಿ.ಡಿ. ಮೋಹನ್, ಕ್ಲಿಪರ್ಡ್ ಡಿಮೆಲ್ಲೋ ತಂಡವು ಕಲಾವಿದ ಸತೀಶ್ ಅವರೊಂದಿಗೆ ಗಾನ - ಕುಂಚ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದೆ. ಮಡಿಕೇರಿಯಲ್ಲಿ ಎರಡನೇ ವರ್ಷದ ವಿಶ್ವ ಚಿತ್ರಕಲಾ ದಿನಾಚರಣೆಯನ್ನು ಆಯೋಜಿಸಲಾಗುತ್ತಿದ್ದು, ಸ್ಪರ್ಧಾ ವಿದ್ಯಾರ್ಥಿಗಳೊಂದಿಗೆ ಆಸಕ್ತರು ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವೈವಿಧ್ಯಮಯ ಚಿತ್ರಕಲೆ ವೀಕ್ಷಿಸಬಹುದಾಗಿದೆ ಎಂದು ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ, ಖಜಾಂಚಿ ಅಂಬೆಕಲ್ ನವೀನ್ ಕುಶಾಲಪ್ಪ ಹೇಳಿಕೆಯಲ್ಲಿ ತಿಳಿಸಿದ್ದಾರೆ.