ಮಡಿಕೇರಿ, ಏ. 14: ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 127ನೇ ಜಯಂತಿಯನ್ನು ನಾಡಿನೆಲ್ಲೆಡೆ ಆಚರಿಸುವ ಮುಖಾಂತರ ಗೌರವ ನಮನ ಸಲ್ಲಿಸಲಾಯಿತು. ಜಿಲ್ಲಾಡಳಿತದಿಂದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.ನಗರದ ಸರಕಾರಿ ನೌಕರರ ಸಂಘದ ಕಚೇರಿಯಲ್ಲಿ ಡಾ. ಅಂಬೇಡ್ಕರ್ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಮಡಿಕೇರಿ ಅಶೋಕಪುರದ ಅನ್ನಪೂರ್ಣೇಶ್ವರಿ ದೇವಾಲಯ ಸಮಿತಿ ಹಾಗೂ ಸಂತೋಷ್ ಯುವಕ ಸಂಘದ ಆಶ್ರಯದಲ್ಲಿ ಇಲ್ಲಿನ ಮುಖ್ಯ ಬೀದಿಯಲ್ಲಿ ಅಂಬೇಡ್ಕರ್ (ಮೊದಲ ಪುಟದಿಂದ) ಭಾವಚಿತ್ರ ಮಂಟಪ ಸಹಿತ ಮೆರವಣಿಗೆಯೊಂದಿಗೆ ಸಂವಿಧಾನ ಶಿಲ್ಪಿಗೆ ನಮನ ಸಲ್ಲಿಸಲಾಯಿತು.ನಗರದ ಕಾವೇರಿ ಕಲಾಕ್ಷೇತ್ರದಿಂದ ಅಶೋಕಪುರ ತನಕ ಮೆರವಣಿಗೆ ನಡೆಸಲಾಯಿತು. ಕಲಶಹೊತ್ತ ಮಹಿಳೆಯರು, ಮಕ್ಕಳ ಸಹಿತ ವಾದ್ಯಗೋಷ್ಠಿಯೊಂದಿಗೆ ನೂರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಈ ಪ್ರಯುಕ್ತ ಕ್ರೀಡಾ ಕೂಟವನ್ನು ಆಯೋಜಿಸಲಾಗಿತ್ತು.

ಜಿಲ್ಲಾಡಳಿತ ನಮನ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 127 ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

ನಗರದ ಕೋಟೆ ಹಳೇ ವಿಧಾನಸಭಾ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್, ಜಿ.ಪಂ. ಸಿ.ಇ.ಒ ಪ್ರಶಾಂತ್ ಕುಮಾರ್ ಮಿಶ್ರ, ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಎಂ. ಸತೀಶ್ ಕುಮಾರ್, ಉಪ ವಿಭಾಗಾಧಿಕಾರಿ ರಮೇಶ್ ಪಿ.ಕೊನರೆಡ್ಡಿ, ಡಿವೈಎಸ್‍ಪಿ ಸುಂದರರಾಜ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಮಾಯದೇವಿ ಗಲಗಲಿ ಹಾಗೂ ಇತರರು ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಗೌರವ ನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆಯ ಪ್ರೊಭೆಷನರಿ ಅಧಿಕಾರಿ ಪ್ರಭು, ಆಧುನಿಕ ಭಾರತ ನಿರ್ಮಾಣಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಅಪಾರ ಎಂದು ಬಣ್ಣಿಸಿದರು.

ಸ್ತ್ರೀಯರಿಗೆ ಸಮಾನ ಹಕ್ಕುಗಳು ಮತ್ತು ಅವಕಾಶ, ಕಾರ್ಮಿಕರಿಗಾಗಿ ಹಲವು ಕಲ್ಯಾಣ ಕಾರ್ಯಕ್ರಮಗಳು, ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆ, 6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಶಿಕ್ಷಣ, ಚುನಾವಣಾ ಆಯೋಗ ಸ್ಥಾಪನೆ, ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಸಂವಿಧಾನದಲ್ಲಿ ಅಳವಡಿಸುವ ಮೂಲಕ ಸಮಾನತೆಯ ಸಮಾಜ ಹಾಗೂ ಆಧುನಿಕ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಶ್ರಮಿಸಿದ್ದಾರೆ ಎಂದು ಸ್ಮರಿಸಿದರು.

ಹಿಂದೂ ಕೋಡ್ ಬಿಲ್ ಜಾರಿಗೊಳಿಸುವ ಮೂಲಕ ಮಹಿಳೆಯರಿಗೆ ಸಮಾನ ಹಕ್ಕು ಮತ್ತು ಅವಕಾಶ ನೀಡಿದ್ದಾರೆ. ಕಾರ್ಲ್ ಮಾಕ್ರ್ಸ್ ನಂತರ ಕಾರ್ಮಿಕರ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ. ಕೃಷಿ, ವಿದ್ಯುತ್ ಹಾಗೂ ನಿರಾವರಿಗೆ ಒತ್ತು, ಹೀಗೆ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ಸಮಾಜ ಸುಧಾರಣೆಗೆ ದುಡಿದಿದ್ದಾರೆ ಎಂದು ಪ್ರಭು ಅವರು ತಿಳಿಸಿದರು.

ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳು, ಸಂದೇಶಗಳು ಮನೆ ಮನೆಗೂ ತಲಪಬೇಕು. ದೇಶಕ್ಕಾಗಿ ಹಾಗೂ ರಾಷ್ಟ್ರದ ಎಲ್ಲಾ ವರ್ಗದ ಜನರ ಶ್ರೇಯೊಭಿವೃದ್ಧಿಗೆ ಮಾಡಿರುವ ಕಾರ್ಯಗಳ ಬಗ್ಗೆ ಮಾಹಿತಿ ಒದಗಿಸುವಂತಾಗಬೇಕು ಎಂದು ಅವರು ಕರೆ ನೀಡಿದರು.

ಸರ್ವರಿಗೂ ಸಮಪಾಲು ಮತ್ತು ಸರ್ವರಿಗೂ ಸಮಬಾಳು ಎಂಬದನ್ನು ಪ್ರತಿಪಾದಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರು, ಶಿಕ್ಷಣ ಪಡೆದಾಗ ಸಮಾನ ಅವಕಾಶ ಮತ್ತು ಆರ್ಥಿಕ ಪ್ರಗತಿ ಸಾಧ್ಯ ಎಂಬದನ್ನು ಪ್ರತಿಪಾದಿಸಿದ್ದರು ಎಂದು ನುಡಿದರು.

ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ನಂದ, ಜಿ.ಪಂ.ಕಾರ್ಯಪಾಲಕ ಎಂಜಿನಿಯರ್ ರಾಜಕುಮಾರ ರೆಡ್ಡಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರಾದ ಪುಟ್ಟಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಮಲ್ಲೇಸ್ವಾಮಿ, ಕಾರ್ಮಿಕ ಇಲಾಖೆ ಅಧಿಕಾರಿ ರಾಮಕೃಷ್ಣ, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಜಗನ್ನಾಥ್, ಪೌರಾಯುಕ್ತರಾದ ಬಿ. ಶುಭಾ, ನಾನಾ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇದ್ದರು. ನಿಲಯ ಮೇಲ್ವಿಚಾರಕರಾದ ಬಾಲಕೃಷ್ಣ ರೈ ನಿರೂಪಿಸಿ, ವಂದಿಸಿದರು.

ಸೋಮವಾರಪೇಟೆ: ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 127ನೇ ಜನ್ಮದಿನವನ್ನು ಸೋಮವಾರಪೇಟೆಯಲ್ಲಿ ತಾಲೂಕು ಆಡಳಿತ, ಭಾರತೀಯ ಜನತಾ ಪಾರ್ಟಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಆಚರಿಸಲಾಯಿತು.

ಇಲ್ಲಿನ ಬಾಣಾವರ ರಸ್ತೆಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಪ್ರಮುಖರು, ಸಂವಿಧಾನ ಶಿಲ್ಪಿಯ ಗುಣಗಾನ ಮಾಡಿ, ಅವರ ಜೀವನಗಾಥೆಯನ್ನು ಮೆಲುಕು ಹಾಕಿದರು.

ತಾಲೂಕು ಆಡಳಿತ: ಸೋಮವಾರಪೇಟೆ ತಾಲೂಕು ಆಡಳಿತ, ತಾ.ಪಂ., ಪಟ್ಟಣ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ತಾಲೂಕು ತಹಸೀಲ್ದಾರ್ ವೀರೇಂದ್ರ ಬಾಡಕರ್ ಮಾತನಾಡಿ, ಅಸ್ಪøಶ್ಯತೆಯ ವಿರುದ್ಧ ದಿಟ್ಟ ಹೋರಾಟ ಮಾಡಿ ಸಮಾಜದ ಕಣ್ಣು ತೆರೆಸಿದ ಧೀಮಂತ ವ್ಯಕ್ತಿ ಅಂಬೇಡ್ಕರ್ ಅವರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ಜಿಎಂಪಿ ಶಾಲಾ ಮುಖ್ಯ ಶಿಕ್ಷಕಿ ಎಂ.ಜೆ. ಅಣ್ಣಮ್ಮ ಮಾತನಾಡಿ, ಅಂಬೇಡ್ಕರ್ ಅವರು ಓದಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದರು ಎಂದು ಅಭಿಪ್ರಾಯಿಸಿದರು.

ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಚಿಕ್ಕಬಸವಯ್ಯ, ತಾಲೂಕು ಕಚೇರಿಯ ಅರುಣ್‍ಕುಮಾರ್ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬಿಜೆಪಿಯಿಂದ ಅಂಬೇಡ್ಕರ್ ನೆನಪು: ಭಾರತೀಯ ಜನತಾ ಪಾರ್ಟಿಯ ಎಸ್.ಸಿ. ಮೋರ್ಚಾ ವತಿಯಿಂದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಇಲ್ಲಿನ ಕೊಡವ ಸಮಾಜದಲ್ಲಿ ಜನ್ಮದಿನಾಚರಣಾ ಕಾರ್ಯಕ್ರಮ ನಡೆಯಿತು.

ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಪ್ರಪಂಚದಲ್ಲಿಯೇ ಶ್ರೇಷ್ಠ ಸಂವಿಧಾನ ರಚಿಸಿದ ಅಂಬೇಡ್ಕರ್ ಅವರ ಚಿಂತನೆಗಳನ್ನು ನನಸು ಮಾಡುವಲ್ಲಿ ದೇಶದ ಪ್ರಧಾನಿ ಮೋದಿ ಅವರು ಮುಂದಾಗಿದ್ದಾರೆ. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ ಎಂದರು.

ಪಕ್ಷದ ಜಿಲ್ಲಾ ವಕ್ತಾರ ಅಭಿಮನ್ಯುಕುಮಾರ್ ಮಾತನಾಡಿ, ಪ್ರಪಂಚ ಕಂಡ ಅತ್ಯಂತ ಶ್ರೇಷ್ಠ ವ್ಯಕ್ತಿಯನ್ನು ಒಂದೇ ವರ್ಗಕ್ಕೆ ಮೀಸಲಿಡುವ ಪ್ರಯತ್ನವನ್ನು ಕೆಲ ಪಕ್ಷಗಳು ಮಾಡುತ್ತಿವೆ ಎಂದು ಆರೋಪಿಸಿದರು.

ಜಿ.ಪಂ. ಸದಸ್ಯೆ ಸರೋಜಮ್ಮ ಮಾತನಾಡಿ, ದಲಿತರ ಹೆಸರು ಹೇಳಿಕೊಂಡು ರಾಜಕೀಯ ನಡೆಸಿದ ಪಕ್ಷಗಳು ದಲಿತರ ಏಳಿಗೆಗೆ ಮುಂದಾಗಿಲ್ಲ. ಕೇವಲ ಓಟ್ ಬ್ಯಾಂಕ್‍ಗಾಗಿ ಬಳಸಿಕೊಂಡಿವೆ. ಬಿಜೆಪಿಯಲ್ಲಿ ದಲಿತ ವ್ಯಕ್ತಿಗೆ ರಾಷ್ಟ್ರಪತಿ ಸ್ಥಾನ ನೀಡಲಾಗಿದೆ. ದಲಿತರು ಜಾಗೃತರಾಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಎಸ್.ಸಿ. ಮೋರ್ಚಾದ ತಾಲೂಕು ಅಧ್ಯಕ್ಷ ಕುಮಾರಸ್ವಾಮಿ ವಹಿಸಿದ್ದರು. ವೇದಿಕೆಯಲ್ಲಿ ಮೋರ್ಚಾದ ಜಿಲ್ಲಾಧ್ಯಕ್ಷ ಸತೀಶ್, ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ಪಕ್ಷದ ಮುಖಂಡರಾದ ಲೋಕೇಶ್ವರಿ ಗೋಪಾಲ್, ವಿ.ಎಂ. ವಿಜಯ, ನಳಿನಿ ಗಣೇಶ್, ರಾಮಕೃಷ್ಣ, ಶೇಖರ್, ಜೆ.ಕೆ. ಮುತ್ತಮ್ಮ, ಬಿ.ಡಿ. ಮಂಜುನಾಥ್, ಕುಶಾಲಪ್ಪ, ತಂಗಮ್ಮ, ಮಣಿ, ಲೀಲಾವತಿ, ಆರ್.ಪುಷ್ಪ, ಮಹೇಶ್ ತಿಮ್ಮಯ್ಯ, ಅಜೀಶ್‍ಕುಮಾರ್, ಶಾಂತಳ್ಳಿ ಪ್ರತಾಪ್, ಲೋಕೇಶ್, ಗಣೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವೆಂಕಟೇಶ್ವರ ಬ್ಲಾಕ್: ಪಟ್ಟಣದ ವೆಂಕಟೇಶ್ವರ ಬ್ಲಾಕ್‍ನ ಸಾರ್ವಜನಿಕರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿದರು. ದಲಿತ ಸಂಘರ್ಷ ಸಮಿತಿಯ ಪ್ರಮುಖರಾದ ಜಯಪ್ಪ ಹಾನಗಲ್ಲು, ಹೆಚ್.ಜೆ. ಜವರಪ್ಪ, ಬಸವರಾಜ್, ಜಯಪ್ಪ, ಎಸ್.ಆರ್. ಸುಮಂತ್, ಸರೋಜಮ್ಮ, ಧನುಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಬೆಟ್ಟದಳ್ಳಿ: ಬೆಟ್ಟದಳ್ಳಿ ಗ್ರಾಮಾಭಿವೃದ್ಧಿ ಸಮಿತಿ ಮತ್ತು ಮಾನವತಾ ಯುವಕ ಸಂಘದ ಆಶ್ರಯದಲ್ಲಿ ಸಂವಿಧಾನ ಶಿಲ್ಪಿಯ ಜನ್ಮದಿನಾಚರಣೆ ಕಾರ್ಯಕ್ರಮ ನಡೆಯಿತು. ಪ್ರಮುಖರಾದ ಬಿ.ವಿ. ರಾಜು, ಬಿ.ಸಿ. ಆದರ್ಶ, ಬಿ.ಈ. ಜಯೇಂದ್ರ, ಬಿ.ಎಂ. ದಿನೇಶ್, ಬಿ.ಬಿ. ಆನಂದ್, ಬಿ.ಆರ್. ಧರ್ಮಪ್ಪ, ಬಿ.ಎನ್. ನಂದೀಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

ವೀರಾಜಪೇಟೆ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 127ನೇ ಜನ್ಮದಿನಾಚರಣೆ ಅಂಗವಾಗಿ ತಾಲೂಕು ಆಡಳಿತ ವೀರಾಜಪೇಟೆ ಮಿನಿ ವಿಧಾನಸೌದದ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಚುನಾವಣಾಧಿಕಾರಿ ಕೆ.ರಾಜು ಅವರು ಜ್ಯೋತಿ ಬೆಳಗಿಸಿ ಅಂಬೇಡ್ಕರ್ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಈ ಸಂದರ್ಭ ತಹಶೀಲ್ದಾರ್ ಸಹಾಯಕ ಚುನಾವಣಾದಿಕಾರಿ ಆರ್. ಗೋವಿಂದರಾಜು, ಎಂ.ಜಿ. ವಸಂತ್ ಕುಮಾರ್, ಶಿರಸ್ತೆದಾರ್ ಕೆ.ಎಂ. ಚಿಣ್ಣಪ್ಪ, ಪ್ರವೀಣ್ ಕುಮಾರ್, ಕಂದಾಯ ಪರಿವೀಕ್ಷಕ ಪಳಂಗಪ್ಪ, ಸಮಾಜಕಲ್ಯಾಣ ಇಲಾಖೆಯ ಹೆಚ್.ಜಿ. ಮಂಜುನಾಥ್ ಹಾಗೂ ತಾಲೂಕು ಕಚೇರಿಯ ಸಿಬ್ಬಂದಿಗಳು ಹಾಜರಿದ್ದರು.

ಕುಶಾಲನಗರ: ಆಧುನಿಕ ಯುಗದಲ್ಲೂ ಕೂಡ ಸಮಾಜದಲ್ಲಿ ಅಸ್ಪøಶ್ಯತೆಯ ವಿವಿಧ ಮಜಲುಗಳು ಹಾಗೆಯೇ ಮುಂದುವರೆದಿರುವದು ವಿಷಾದಕರ ಎಂದು ಚಿಕ್ಕ ಅಳುವಾರದ ಮಂಗಳೂರು ವಿವಿ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ. ಪಿ.ಎಲ್. ಧರ್ಮ ಹೇಳಿದರು.

ಪರಿಶಿಷ್ಟ ಜಾತಿ/ವರ್ಗಗಳ ನಿವೃತ್ತ ನೌಕರರ ಸಂಘದ ಆಶ್ರಯದಲ್ಲಿ ಪಟ್ಟಣದ ಮಹಾಲಕ್ಷ್ಮಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಸಂಘದ ಅಧ್ಯಕ್ಷರಾದ ನಿವೃತ್ತ ಐಎಫ್‍ಎಸ್ ಅಧಿಕಾರಿ ಸಿದ್ದಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಪ್ರೊ. ಹೆಚ್.ಕೆ. ಕೇಶವಯ್ಯ ಮಾತನಾಡಿದರು.

ಕೊಡಗು ಜಿಲ್ಲಾ ದಲಿತ ಹಿತರಕ್ಷಣಾ ಸಮಿತಿ ಸಂಚಾಲಕ ಬಿ.ಡಿ. ಅಣ್ಣಯ್ಯ, ಸಂಘದ ಕಾರ್ಯದರ್ಶಿ ಪುಟ್ಟಸ್ವಾಮಿ ಇದ್ದರು.

ಕುಶಾಲನಗರ: ಸಂವಿಧಾನದ ಆಶಯಗಳು ತಲೆಕೆಳಗಾಗಿಸುವ ಹುನ್ನಾರ ದೇಶದಲ್ಲಿ ಕಂಡುಬರುತ್ತಿರುವದು ಆತಂಕದ ವಿಚಾರ ಎಂದು ಮಾಜಿ ಸಚಿವ ಎಂ.ಸಿ. ನಾಣಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣ ಕನ್ನಿಕಾ ಸಭಾಂಗಣದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಮತ್ತು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ, ಭಾವೈಕ್ಯತೆ, ಅಖಂಡತೆಗೆ ಯಾವದೇ ರೀತಿಯ ಧಕ್ಕೆಯಾಗದ ರೀತಿಯಲ್ಲಿ ಕಾಪಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಾ ಬಂದಿತ್ತು. ಇತ್ತೀಚಿನ ದಿನಗಳಲ್ಲಿ ಸಮಗ್ರತೆಗೆ ಕೈಗನ್ನಡಿಯಾಗಿರುವ ಸಂವಿಧಾನವನ್ನು ತಿದ್ದುಪಡಿಗೊಳಿಸಿ ಬದಲಾಯಿಸುವ ಹೇಳಿಕೆಗಳು ಕೇಳಿಬರುತ್ತಿರುವದು ದೇಶಕ್ಕೆ ಮಾರಕವಾಗಿ ಪರಿಣಮಿಸಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ, ಜಿಲ್ಲೆಯ ಕಾಂಗ್ರೆಸ್ ಅತ್ಯಂತ ಶಕ್ತಿಶಾಲಿಯಾಗಿ ರೂಪುಗೊಂಡಿದೆ. ತಳಮಟ್ಟದಿಂದ ಪಕ್ಷದ ಬಲವರ್ಧನೆಯಲ್ಲಿ ಕಾಯಕರ್ತರು ತಮ್ಮನ್ನು ತೊಡಗಿಸಿಕೊಂಡಿದ್ದು ಚುನಾವಣೆಯಲ್ಲಿ ವಿರೋಧಿಗಳಿಗೆ ತೀವ್ರ ಪೈಪೋಟಿ ಒಡ್ಡಲು ಸನ್ನದ್ದರಾಗಿದ್ದೇವೆ ಎಂದರು.

ಕೊಡಗು ಜಿಲ್ಲಾ ವೀಕ್ಷಕ ವೆಂಕಪ್ಪ ಗೌಡ ಮಾತನಾಡಿ, ಸಂವಿಧಾನ ಬದಲಿಸುವ ಮಾತನಾಡಿದ ಬಿಜೆಪಿ ಪಕ್ಷದವರು ಅಂಬೇಡ್ಕರ್ ಜಯಂತಿ ಆಚರಿಸಲು ಯಾವದೇ ನೈತಿಕ ಹಕ್ಕಿಲ್ಲ. ದೇಶದಲ್ಲಿ ಎಸ್‍ಸಿ/ಎಸ್ಟಿ ಕಾಯ್ದೆ ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿರುವದು ದೇಶದ ದುರಂತ ಎಂದರು.

ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ವಿ.ಪಿ.ಶಶಿಧರ್ ಮಾತನಾಡಿ, ಜಾತ್ಯತೀತ ನೆಲೆಗಟ್ಟಿನಡಿ ಕಾರ್ಯನಿರ್ವಹಿಸುತ್ತಿರುವ ಕಾಂಗ್ರೆಸ್ ಪಕ್ಷದ ಬಲವರ್ಧನೆ ಅಗತ್ಯವಿದೆ. ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಿದಲ್ಲಿ ಮಾತ್ರ ಪ್ರತಿಯೊಬ್ಬರಿಗೂ ಭದ್ರತೆಯ ವಾತಾವರಣ ನಿರ್ಮಾಣಗೊಳ್ಳಲಿದೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಪಿ.ಚಂದ್ರಕಲಾ, ಕುಮುದಾ ಧರ್ಮಪ್ಪ, ಸುನಿತಾ, ಲತೀಫ್, ಕುಡಾ ಅಧ್ಯಕ್ಷ ಬಿ.ಜಿ. ಮಂಜುನಾಥ್, ಮಾಜಿ ಅಧ್ಯಕ್ಷ ಎಸ್.ಎನ್. ನರಸಿಂಹಮೂರ್ತಿ, ಪದವೀಧರ ಕ್ಷೇತ್ರದ ಅಭ್ಯರ್ಥಿ ಕೆ.ಕೆ. ಮಂಜುನಾಥ್ ಕುಮಾರ್, ನಗರ ಘಟಕದ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಜಿಲ್ಲಾ ಎಸ್ಟಿ ಘಟಕದ ಅಧ್ಯಕ್ಷ ವಸಂತ, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಲತಾ, ವಿವಿಧ ಘಟಕಗಳ ಪ್ರಮುಖರು ಇದ್ದರು.

ಶನಿವಾರಸಂತೆ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ದೇಶ-ವಿದೇಶಕ್ಕೆ ಮಾದರಿಯಾಗಿರುವ ಧೀಮಂತ ನಾಯಕ ಎಂದು ಎಸ್‍ಐ ಎನ್. ಆನಂದ್ ಅಭಿಪ್ರಾಯಪಟ್ಟರು.

ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಶನಿವಾರ ನಡೆದ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ 127ನೇ ಜನ್ಮದಿನಾಚರಣೆ ಪ್ರಯುಕ್ತ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.

ಅಂಬೇಡ್ಕರ್ ಅವರ ಧ್ಯೇಯ, ತತ್ವಸಿದ್ಧಾಂತ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕ. ಅವರ ಧ್ಯೇಯಾದರ್ಶಗಳನ್ನು ವಿದ್ಯಾರ್ಥಿಗಳು ಹಾಗೂ ಯುವ ಜನತೆ ತಮ್ಮಲ್ಲಿ ಅಳವಡಿಸಿಕೊಂಡು ಪಾಲಿಸಬೇಕು ಎಂದು ಸಲಹೆ ನೀಡಿದರು.

ದುಂಡಳ್ಳಿ ಗ್ರಾ.ಪಂ. ಅಧ್ಯಕ್ಷ ಸಿ.ಜೆ. ಗಿರೀಶ್ ಹಾಗೂ ಪ್ರಮುಖ ಪಾಲಾಕ್ಷ ಮಾತನಾಡಿದರು. ಡಾ. ಅಂಬೇಡ್ಕರ್ ಅಭಿಮಾನಿಗಳ ಸಂಘದ ಪದಾಧಿಕಾರಿಗಳಾದ ಪುಟ್ಟಸ್ವಾಮಿ, ಗುರು, ಮಂಜು, ಶಿವಶಂಕರ್, ರಾಮು, ರವಿ, ನಾಗರಾಜ್, ಶಿವಲಿಂಗ ಇತರರು ಹಾಜರಿದ್ದರು.