ಗೋಣಿಕೊಪ್ಪಲು, ಏ. 14: ಬಾಳೆಲೆ ಸಮೀಪದ ಕೊಟ್ಟಗೇರಿಯ ಮಾಪಂಗಡ ಸಜನ್ ದೇವಯ್ಯ ತೋಟದಲ್ಲಿ ಸತತ ಎಂಟು ದಿನಗಳ ಕಾಲ ಹಗಲು, ರಾತ್ರಿ ಹುಲಿ ಸೆರೆಗೆ ಕಾರ್ಯಾಚರಣೆ ನಡೆಸಿದ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ತಾ. 14ರಿಂದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದಿದ್ದು ಸ್ಥಳದಲ್ಲಿ ಹುಲಿಯ ಹೆಜ್ಜೆ ಗುರುತುಗಳನ್ನು ಕಂಡು ಹಿಡಿಯುವ ತಜ್ಞರು ಹೊರತುಪಡಿಸಿ ಇನ್ನುಳಿದ ಎಲ್ಲಾ ಸಿಬ್ಬಂದಿಗಳನ್ನು ಹಿಂದಕ್ಕೆ ಕರೆಸಿಕೊಳ್ಳಲಾಗಿದೆ.
ಶುಕ್ರವಾರ ರಾತ್ರಿ ಹುಲಿ ಸೆರೆಗೆ ಕಾರ್ಯತಂತ್ರ ರೂಪಿಸಿದ್ದ ಹಿರಿಯ ಅಧಿಕಾರಿಗಳಿಗೆ ಬೆಳಗ್ಗಿನ ಜಾವದ ವರೆಗೂ ಹುಲಿಯ ಚಲನ ವಲನಗಳ ಬಗ್ಗೆ ಯಾವದೇ ರೀತಿಯ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಿದ್ದಾರೆ.
ರಾತ್ರಿ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಗದ್ದೆ ಬಯಲು ಸಮೀಪದಲ್ಲಿಯೇ ಮೂರು ಅಟ್ಟಣಿಗೆಗಳನ್ನು ಅಳವಡಿಸಿ ಹುಲಿಯ ಸಂಚಾರದ ಬಗ್ಗೆ ನಿಗಾ ಇಟ್ಟಿದ್ದರು..ವಿವಿಧ ಭಾಗಗಳಲ್ಲಿ ಕ್ಯಾಮೆರಾ ಅಳವಡಿಸಿದ್ದರು ಯಾವದೇ ಕ್ಯಾಮರಾಕ್ಕೆ ಹುಲಿ ಸಂಚಾರ ಸೆರೆಯಾಗಿರಲಿಲ್ಲ. ಇದರಿಂದ ಶನಿವಾರ ಮುಂಜಾನೆಯಿಂದ ಕಾರ್ಯ ಚರಣೆಯನ್ನು ಸದ್ಯಕ್ಕೆ ಮುಂದೂಡಲಾಗಿದ್ದು, ಸತತ 8 ದಿನಗಳ ಕಾರ್ಯಾಚರಣೆಯಲ್ಲಿ ತೊಡಗಿದ್ದ ಸಿಬ್ಬಂದಿಗಳಿಗೆ ಇದೀಗ ಹಿರಿಯ ಅಧಿಕಾರಿಗಳು ವಿಶ್ರಾಂತಿ ನೀಡಿದ್ದಾರೆ. ಈ ಭಾಗದಲ್ಲಿ ಹುಲಿ ಸಂಚಾರದ ಬಗ್ಗೆ ಮಾಹಿತಿ ಲಭ್ಯವಾದಲ್ಲಿ ಕೂಡಲೇ ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
ರಾತ್ರಿ ವೇಳೆಯಲ್ಲಿ ಹೆಚ್ಚಾಗಿ ಹುಲಿ ಸಂಚಾರದ ಸುಳಿವು ಸಿಕ್ಕಿದ ನಂತರ ಹುಲಿ ಸೆರೆಗೆ ಹಿರಿಯ ಅಧಿಕಾರಿಗಳಿಂದ ವಿಶೇಷ ಅನುಮತಿ ಪಡೆದು ಕಾರ್ಯಾಚರಣೆ ನಡೆಸಿದರೂ ಹುಲಿ ಪತ್ತೆ ಆಗಲಿಲ್ಲ. ಇದರಿಂದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದು ಸಿಬ್ಬಂದಿಗಳಿಗೆ ವಿಶ್ರಾಂತಿ ನೀಡಿದ್ದೇವೆ. ಸ್ಥಳದಲ್ಲಿ ಪ್ರತಿ ದಿನ ಹುಲಿಯ ಹೆಜ್ಜೆ ಗುರುತುಗಳನ್ನು ಕಂಡು ಹಿಡಿಯಲು ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಹುಲಿ ಸಂಚಾರ ದೃಢಪಟ್ಟಲ್ಲಿ ಮತ್ತೆ ಕಾರ್ಯಾಚರಣೆ ಮುಂದುವರೆಸಲಾಗುವದು ಎಂದು ಎಸಿಎಫ್ ಶ್ರೀಪತಿ ತಿಳಿಸಿದ್ದಾರೆ.
- ಹೆಚ್.ಕೆ. ಜಗದೀಶ್