ಸುಂಟಿಕೊಪ್ಪ, ಏ. 15: ಅಕ್ರಮವಾಗಿ ಜೂಜಾಡುತ್ತಿದ್ದ 6 ಮಂದಿ ಆರೋಪಿಗಳನ್ನು ಬಂಧಿಸಿ 11 ಸಾವಿರದ 550 ರೂಪಾಯಿಗಳನ್ನು ವಶಪಡಿಸಿಕೊಂಡ ಘಟನೆಯೊಂದು ಗರಗಂದೂರುವಿನಲ್ಲಿ ನಡೆದಿದೆ.

ಇಲ್ಲಿಗೆ ಸಮೀಪದ ಗರಗಂದೂರಿನಲ್ಲಿ ನೇಮೋತ್ಸವ ನಡೆಯುತ್ತಿದ್ದ ಸ್ಥಳದ ಅನತಿ ದೂರದಲ್ಲಿ ಮುಂಜಾನೆಯ ವೇಳೆ ಗರಗಂದೂರು ನಿವಾಸಿ ಬಾಪ್ಪುಟ್ಟಿ ಮತ್ತು ಅವನ ಪುತ್ರ ಲತೀಫ್ ಹಾಗೂ ಮಾದಾಪುರದ ನಿವಾಸಿ ಕುಮಾರ ಎಂಬವರುಗಳು ಜೂಜಾಟ ಆಡಿಸುತ್ತಿದ್ದ ಬಗ್ಗೆ ಮಾಹಿತಿ ಕಲೆ ಹಾಕಿದ ಸುಂಟಿಕೊಪ್ಪ ಠಾಣಾಧಿಕಾರಿ ಎನ್.ಎಸ್. ಜಯರಾಂ ಹಾಗೂ ಸಿಬ್ಬಂದಿ ಧಾಳಿ ನಡೆಸಿ ಅಕ್ರಮ ಜೂಜಾಟದಲ್ಲಿ ತೊಡಗಿದ್ದ ಲೋಕೇಶ್, ಜನಾರ್ಧನ, ರಾಜು, ಜಾನ್, ವಿನು ನಾಣಯ್ಯ, ಸುಂದರ ಎಂಬವರುಗಳನ್ನು ಬಂಧಿಸಿದ್ದಾರೆ. ಬಾಪ್ಪುಟ್ಟಿ, ಅವನ ಪುತ್ರ ಲತೀಫ್, ಸುಂಟಿಕೊಪ್ಪ ಆಟೋ ಚಾಲಕ ಮಂಜಯ್ಯ, ಅಜೀಜ್ ಪುತ್ರ ಅಪ್ಪುಣಿ ಹಾಗೂ ಸುರೇಶ್ ಪರಾರಿಯಾಗಿದ್ದಾರೆ.

ಬಂಧಿತರಿಂದ ರೂ. 11 ಸಾವಿರದ 550 ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೂಜಾಟ ಸ್ಥಳದಲ್ಲಿದ್ದ ಮಾರುತಿ 800 ಕಾರು 4 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಸುಂಟಿಕೊಪ್ಪ ಪಿಎಸ್‍ಐ ಜಯರಾಂ, ಮುಖ್ಯ ಪೇದೆ ದಯಾನಂದ, ಪೇದೆಗಳಾದ ಪುನೀತ್, ರಹಮಾನ್, ಜಗದೀಶ್ ಹಾಗೂ ಚಾಲಕ ರವಿ ಪಾಲ್ಗೊಂಡಿದ್ದರು.