ಸೋಮವಾರಪೇಟೆ, ಏ. 15: ಸಮೀಪದ ಮಾಟ್ನಳ್ಳಿ ಗ್ರಾಮಕ್ಕೆ ಒತ್ತಿಕೊಂಡಂತೆ ಇರುವ ಕಾಫಿ ತೋಟದೊಳಗೆ ಅನಧಿಕೃತವಾಗಿ ಹೋಂ ಸ್ಟೇ ನಡೆಸಲಾಗುತ್ತಿದ್ದು, ತಕ್ಷಣ ಇದನ್ನು ಮುಚ್ಚಿಸಬೇಕು. ತಪ್ಪಿದಲ್ಲಿ ಪ್ರಸಕ್ತ ಸಾಲಿನ ವಿಧಾನ ಸಭಾ ಚುನಾವಣೆಯನ್ನು ಬಹಿಷ್ಕರಿಸಿ ಉಗ್ರ ಪ್ರತಿಭಟನೆ ನಡೆಸಲಾಗುವದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.ನಿನ್ನೆ ರಾತ್ರಿ ಈ ಹೋಂ ಸ್ಟೇಗೆ ಆಗಮಿಸಿದ ಹೊರಭಾಗದ ಮಂದಿ ರಾತ್ರಿ ವೇಳೆ ಡಿ.ಜೆ. ಹಾಕಿಕೊಂಡು ಮೈಮರೆತು ಕುಣಿದಾಡಿದ್ದಾರೆ. ಇಲ್ಲಿ ಮೋಜು ಮಸ್ತಿ ನಡೆಯುತ್ತಿದ್ದು, ರಾತ್ರಿ ವೇಳೆಯಲ್ಲಿ ರಸ್ತೆಯಲ್ಲಿ ವಾಹನಗಳ ಓಡಾಟದಿಂದ ಸ್ಥಳೀಯರಿಗೆ ನೆಮ್ಮದಿ ಇಲ್ಲದಂತಾಗಿದೆ ಎಂದು ಗ್ರಾಮಸ್ಥರಾದ ಸುರೇಶ್, ಜಗದೀಶ್, ಮಹೇಶ್, ದರ್ಶನ್, ರುದ್ರಪ್ಪ ಸೇರಿದಂತೆ ಇತರರು ಆರೋಪಿಸಿದರು.

ನಿನ್ನೆ ರಾತ್ರಿ ಹೋಂ ಸ್ಟೇ ಗೆ ತೆರಳಿದ ಸಂದರ್ಭ ಗ್ರಾಮಸ್ಥರೊಂದಿಗೆ ವಾಗ್ವಾದ ನಡೆಸಿದ್ದಾರೆ. ಪೊಲೀಸ್ ಠಾಣಾಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆ ಸೌಂಡ್ ಬಾಕ್ಸ್ ಸೇರಿದಂತೆ ಇತರ ಪರಿಕರ ವಶಕ್ಕೆ ಪಡೆದಿದ್ದಾರೆ ಎಂದು ಗ್ರಾಮಾಧ್ಯಕ್ಷ ರಮೇಶ್ ತಿಳಿಸಿದರು.

ಹೋಂ ಸ್ಟೇಗೆ ಆಗಮಿಸಿದ ವಾಹನಗಳಿಗೆ ಇಂದು ಬೆಳಿಗ್ಗೆ ತಡೆಯೊಡ್ಡಿದ ಗ್ರಾಮಸ್ಥರು, ಪೊಲೀಸ್ ವೃತ್ತ ನಿರೀಕ್ಷಕರಿಗೆ ಈ ಬಗ್ಗೆ ದೂರು ನೀಡಿದರು. ನಂತರ ಸ್ಥಳಕ್ಕಾಗಮಿಸಿದ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ ಹಾಗೂ ಠಾಣಾಧಿಕಾರಿ ಎಂ. ಶಿವಣ್ಣ ಅವರುಗಳು, ಹೋಂ ಸ್ಟೇಗೆ ನೀಡಿರುವ ಅನುಮತಿ ಪತ್ರ ಕೇಳಿದರು. ಈ ಸಂದರ್ಭ ಮಾಲೀಕರಲ್ಲಿ ಅನುಮತಿ ಪತ್ರ ಇಲ್ಲದ ಹಿನ್ನೆಲೆ ತಕ್ಷಣ ಪ್ರವಾಸಿಗರನ್ನು ಹೊರಕಳಿಸಬೇಕು. ನಾಳೆಯಿಂದ ಯಾವದೇ ಚಟುವಟಿಕೆ ನಡೆಸಬಾರದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭ ಮಾತನಾಡಿದ ಗ್ರಾಮ ಸಮಿತಿ ಉಪಾಧ್ಯಕ್ಷ ಮಹೇಶ್, ಹಲವಷ್ಟು ಬಾರಿ ಎಚ್ಚರಿಕೆ ನೀಡಿದ್ದರೂ ಸಹ ಅಕ್ರಮಗಳಿಗೆ ಕಡಿವಾಣ ಬಿದ್ದಿಲ್ಲ. ರಾತ್ರಿ ವೇಳೆಯಲ್ಲಿ ಡಿ.ಜೆ. ಹಾಕಿಕೊಂಡು ಕುಣಿದಾಡುತ್ತಿರುತ್ತಾರೆ. ಕೆಳ ಭಾಗದಲ್ಲಿರುವ ಮನೆಯವರು ನಿದ್ರಿಸಲೂ ಸಾಧ್ಯವಾಗುತ್ತಿಲ್ಲ. ಇವರ ಮೋಜು ಮಸ್ತಿಗೆ ಕೃಷಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿನ ಸುರಿಮಳೆಗೈದರು.

ಮುಂದೆ ಇಂತಹ ಚಟುವಟಿಕೆಗಳು ಕಂಡುಬಂದರೆ ಕಾನೂನು ವ್ಯಾಪ್ತಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವದು. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೂ ತರಲಾಗುವದು ಎಂದು ವೃತ್ತನಿರೀಕ್ಷಕ ನಂಜುಂಡೇಗೌಡ ಭರವಸೆ ನೀಡಿದ ನಂತರ ಗ್ರಾಮಸ್ಥರು ಹಿಂತೆರಳಿದರು. ಗ್ರಾಮದ ಪ್ರಮುಖರಾದ ಜಯರಾಂ, ಮಧು, ವಿನೋದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮಾಟ್ನಳ್ಳಿ ಗ್ರಾಮದಲ್ಲಿರುವ ಹೋಂ ಸ್ಟೇಗೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಿಂದ ಯಾವದೇ ಅನುಮತಿ ಪಡೆದಿಲ್ಲ. ಅನಧಿಕೃತವಾಗಿ ನಡೆಯುತ್ತಿದ್ದರೆ ಅದರ ವಿರುದ್ಧ ಸ್ಥಳೀಯ ಗ್ರಾಮ ಪಂಚಾಯಿತಿಯೇ ಕ್ರಮ ಕೈಗೊಳ್ಳಲು ಅಧಿಕಾರವಿದೆ ಎಂದು ಇಲಾಖಾಧಿಕಾರಿ ಜಗನ್ನಾಥ್ ತಿಳಿಸಿದ್ದಾರೆ.