ಸೋಮವಾರಪೇಟೆ, ಏ. 15: ಕುಶಾಲನಗರದ ಕೊಫುಕಾನ್ ಶಿಟೋರಿಯೋ ಕರಾಟೆ ಶಾಲೆ ವತಿಯಿಂದ ಆಯೋಜಿಸಲಾಗಿದ್ದ ಶಿಬಿರದಲ್ಲಿ ಒಟ್ಟು 11 ಮಂದಿ ಬ್ಲ್ಯಾಕ್ ಬೆಲ್ಟ್ ಪಡೆದಿದ್ದಾರೆ.

ಸೋಮವಾರಪೇಟೆಯ ರೇಂಜರ್ ಬ್ಲಾಕ್‍ನ ಆರ್. ಜಗದೀಶ್ ಸೇರಿದಂತೆ ಪ್ರವೀಣ್, ಅಶ್ವಥ್, ಅನುಗ್ರಹ, ದಿವ್ಯ ದಿನೇಶ್, ಅಭಯ್ ಸಂರನ್, ಜೀವಿತ್ ಬೆಳ್ಳಿಯಪ್ಪ, ವಿ.ಡಿ. ರಿಶ್ವನ್, ವಿ.ಡಿ. ರಿತ್ವಿಕ್, ಎಂ.ಆರ್. ಪ್ರಮೋದ್, ತನ್ವಿಯ ಹರೀಶ್ ಅವರುಗಳು ಕರಾಟೆ, ಯೋಗ, ಥೈಚಿ, ಕಬ್ರಿ ಫೈಟ್‍ನಲ್ಲಿ ಬ್ಲ್ಯಾಕ್ ಬೆಲ್ಟ್‍ಗೆ ಭಾಜನರಾಗಿದ್ದಾರೆ.

ಇವರುಗಳಿಗೆ ಕುಶಾಲನಗರದ ಮಹಮ್ಮದ್ ಇಕ್ಬಾಲ್, ತಮಿಳುನಾಡಿನ ಕುಮಾರಸ್ವಾಮಿ, ಕೇರಳದ ಅನಿಲ್ ಕುಮಾರ್ ಅವರುಗಳು ತರಬೇತಿ ನೀಡಿದ್ದಾರೆ.

ಮಕ್ಕಳಿಂದ ಕಥೆಗಳ ಆಹ್ವಾನ

ಮಡಿಕೇರಿ, ಏ. 15: ಶಾಲಾ ರಜಾ ದಿನಗಳಲ್ಲಿ ಮಕ್ಕಳು ತಮ್ಮಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರಹಾಕಿ ಒರೆ ಹಚ್ಚುವ ಕೈಂಕರ್ಯಕ್ಕೆ ತೊಡಗಿಸಿಕೊಳ್ಳುವಂತೆ ಮಾಡುವ ಉದ್ದೇಶದಿಂದ ಮಕ್ಕಳ ಸಾಹಿತ್ಯ ಪರಿಷತ್ ಮಕ್ಕಳು ತಮ್ಮ ಮನೆಯಲ್ಲಿ ಕುಳಿತು ತಮ್ಮ ಯೋಚನಾ ಲಹರಿಯನ್ನು ಸೃಜನಾತ್ಮಕವಾಗಿ ಸಾಹಿತ್ಯದ ಕಡೆಗೆ ಹರಿಸುವಂತೆ ಮಕ್ಕಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮಕ್ಕಳಿಂದ ಕಥೆಗಳನ್ನು ಆಹ್ವಾನಿಸಲಾಗಿದೆ. 5ನೇ ತರಗತಿಯಿಂದ 10ನೇ ತರಗತಿಯನ್ನು ಓದುತ್ತಿರುವ ಮಕ್ಕಳು ತಮ್ಮ ಸ್ವಹಸ್ತಾಕ್ಷರದಲ್ಲಿ 4 ಪುಟಗಳಿಗೆ ಮೀರದಂತೆ ಮೇ 30 ರೊಳಗೆ ಕಳುಹಿಸುವಂತೆ ಕೋರಲಾಗಿದೆ. ‘ನಿರಂತರ’ ವಿಜಯನಗರ ಬೆಂಗಳೂರು (ಪುಸ್ತಕ ಪ್ರಕಾಶಕರು) ಇವರಿಂದ ಉತ್ತಮ ಕಥೆಗಳಿಗೆ ಬಹುಮಾನಗಳನ್ನು ನೀಡಲಾಗುವದು. ಹಾಗೆಯೇ ಆಯ್ದ ಉತ್ತಮ 20 ಕಥೆಗಳ ಪುಸ್ತಕವನ್ನು ಮಾಡಿ ಪ್ರಕಟಿಸಲಾಗುವದು.

ಇದು ಕೊಡಗು ಜಿಲ್ಲಾಮಟ್ಟದ ಮಕ್ಕಳಾ ಕಥೆ ಬರೆಯುವ ಸ್ಪರ್ಧೆಯಾಗಿದ್ದು, ಕೊಡಗು ಜಿಲ್ಲೆಯ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬಹುದು. ಜೂನ್ ತಿಂಗಳಿನಲ್ಲಿ ನಡೆಯುವ ನಮ್ಮ ಪರಿಷತ್ತಿನ ಜಿಲ್ಲಾಮಟ್ಟದ ಕಾರ್ಯಕ್ರಮದಲ್ಲಿ ಬಹುಮಾನಗಳನ್ನು ವಿತರಿಸಲಾಗುವದು ಹಾಗೂ ಪುಸ್ತಕವನ್ನು ಬಿಡುಗಡೆ ಮಾಡಲಾಗುವದು. ಬರಹಗಾರರು ಕಥೆಯನ್ನು 4 ಪುಟಗಳಿಗೆ ಮೀರದಂತೆ ತಮ್ಮ ಹಸ್ತಾಕ್ಷರದಲ್ಲಿ ಬರೆಯುವದು, ಬರೆದ ಬರಹಗಳನ್ನು ಸಂಪೂರ್ಣ ಮಾಹಿತಿಯೊಂದಿಗೆ ಭಾವಚಿತ್ರ ಹಾಗೂ ಓದುತ್ತಿರುವ ಶಾಲೆಯ ವಿಳಾಸದೊಂದಿಗೆ ಎಸ್.ಬಿ. ನಂದಕುಮಾರ್, ಕಾರ್ಯದರ್ಶಿ, ಮಕ್ಕಳ ಸಾಹಿತ್ಯ ಪರಿಷತ್, ಕೊಡಗು ಜಿಲ್ಲಾ ಘಟಕ, ವಿ.ಜಿ. ಕಾಂಪ್ಲೆಕ್ಸ್, ಬಿ.ಎಂ. ರಸ್ತೆ, ಕುಶಾಲನಗರ ಈ ವಿಳಾಸಕ್ಕೆ ಖುದ್ದಾಗಿ ಅಥವಾ ಅಂಚೆಯ ಮೂಲಕ ತಲಪಿಸುವಂತೆ, ವಿವರಗಳಿಗೆ 9448312564 ಕರೆ ಮಾಡಿ ಮಾಹಿತಿಯನ್ನು ಪಡೆಯುವಂತೆ ಕೋರಲಾಗಿದೆ.