ಗೋಣಿಕೊಪ್ಪಲು, ಏ. 15: ರಾಜ್ಯ ಮಟ್ಟದ ‘ಬಲಿಜ ಬಿಂಬ’ ದ್ವಿಮಾಸ ಪತ್ರಿಕೆಯ 3ನೇ ಸಂಚಿಕೆಯನ್ನು ತಾ. 13 ರಂದು ಗೋಣಿಕೊಪ್ಪಲು ಸಿಲ್ವರ್ ಸ್ಕೈ ಸಭಾಂಗಣದಲ್ಲಿ ಬಿಡುಗಡೆ ಮಾಡಲಾಯಿತು.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ ಬಲಿಜ ಸಮುದಾಯವನ್ನು ಒಗ್ಗೂಡಿಸಲು, ಜಿಲ್ಲಾ ಬಲಿಜ ಸಮಾಜಗಳಲ್ಲಿ ನಡೆಯುತ್ತಿರುವ ಚಟುವಟಿಕೆ, ವಧೂ ವರರ ವೇದಿಕೆ, 2ಎ ಹೋರಾಟ ಕುರಿತಾದ ಮಾಹಿತಿ, ರಾಜ್ಯ ಬಲಿಜ ಸಮಾಜದ ಆಸ್ತಿ ಪಾಸ್ತಿ ರಕ್ಷಣೆ ಕುರಿತಾದ ಮಾಹಿತಿ ಒಳಗೊಂಡಂತೆ ಇನ್ನು ಮುಂದೆ ಕೊಡಗು ಬಲಿಜ ಸಮಾಜ ವಾರ್ತೆಗಳನ್ನು ಹಂತ ಹಂತವಾಗಿ ಪ್ರಕಟಿಸಲಾಗುವದು ಎಂದು ಸಂಪಾದಕ ಎನ್. ಸಂಜೀವಪ್ಪ ಮಾಹಿತಿ ನೀಡಿದರು.
ಕೊಡಗು ಜಿಲ್ಲೆಯಲ್ಲಿ ಮೇ. 26 ಹಾಗೂ 27 ರಂದು ನಡೆಯುವ ಬಲಿಜ ಕ್ರೀಡೋತ್ಸವದ ವಿಶೇಷ ಸಂಚಿಕೆಯನ್ನೂ ಹೊರತರಲಾಗುವದು ಮತ್ತು ಪುಟ್ಟ ಜಿಲ್ಲೆ ಕೊಡಗಿನಲ್ಲಿ ಶಿಸ್ತು ಬದ್ಧವಾಗಿ ನಡೆಯುತ್ತಿರುವ ಬಲಿಜ ಗಣತಿ ಕಾರ್ಯಕ್ರಮ ರಾಜ್ಯದ ಯಾವ ಭಾಗದಲ್ಲಿಯೂ ಸಮರ್ಪಕವಾಗಿ ನಡೆದಿಲ್ಲ. ರಾಜ್ಯದ ಬಲಿಜ ಸಮುದಾಯದ ಸಮರ್ಪಕ ಜಾತಿ ಗಣತಿ ಮಾಡಲು ಕೊಡಗು ಜಿಲ್ಲಾ ಬಲಿಜ ಸಮಾಜ ಅನುಸರಿಸುತ್ತಿರುವ ಮಾರ್ಗ ಶ್ಲಾಘನೀಯ ಎಂದು ಹೇಳಿದರು.
ಕರ್ನಾಟಕ ರಾಜ್ಯ ಬಲಿಜ ಸಂಘ ಉಪಾಧ್ಯಕ್ಷ ರವಿನಾಯ್ಡು ಅವರು ಕೊಡಗು ಜಿಲ್ಲೆಯಲ್ಲಿ ಬಲಿಜ ಸಮಾಜ ರಾಜಕೀಯ ರಹಿತವಾಗಿ ಕಾರ್ಯನಿರ್ವಹಿಸುತ್ತಿರುವದು ಉತ್ತಮ ಬೆಳವಣಿಗೆ ಎಂದರು.
ಬೆಂಗಳೂರು ಉತ್ತುಂಗ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸಿಇಓ ಎನ್. ರಾಜಶೇಖರ್ ಅವರು, ಕೊಡಗು ಬಲಿಜ ಕ್ರೀಡೋತ್ಸವಕ್ಕೆ ವೈಯಕ್ತಿಕ ಆರ್ಥಿಕ ಸಹಾಯ ನೀಡಲಾಗುವದು ಎಂದರು.
ಬೆಂಗಳೂರು ಉದ್ಯಮಿ ವಿ. ಮುನಿರಾಜು ಕೊಡಗು ಬಲಿಜ ಕ್ರೀಡೋತ್ಸವಕ್ಕೆ ಪೂರ್ಣ ಸಹಕಾರ ನೀಡುವದಾಗಿ ಭರವಸೆ ನೀಡಿದರು.
ಕೊಡಗು ಜಿಲ್ಲಾ ಬಲಿಜ ಸಮಾಜ ಅಧ್ಯಕ್ಷ ಟಿ.ಎಲ್.ಶ್ರೀನಿವಾಸ್ ಅವರು ಬಲಿಜ ಬಿಂಬ ದ್ವಿಮಾಸ ಪತ್ರಿಕೆಯ ಮೂರನೇಯ ಸಂಚಿಕೆ ಬಿಡುಗಡೆ ಮಾಡಿ, ಕ್ರೀಡೋತ್ಸವ ಸಂದರ್ಭ ಪತ್ರಿಕೆಗಳ ಪ್ರದರ್ಶನ, ಮಾರಾಟ ಮತ್ತು ಚಂದಾದಾರರಾಗಲು ಒಂದು ಮಳಿಗೆಯನ್ನು ಉಚಿತವಾಗಿ ನೀಡಲಾಗುವದು ಎಂದು ತಿಳಿಸಿದರು.
ಸಭೆಯಲ್ಲಿ ಗೋಣಿಕೊಪ್ಪಲು ಹಿರಿಯ ನೇಮಿರಾಜ್, ಜಿಲ್ಲಾ ಬಲಿಜ ಸಮಾಜ ಉಪಾಧ್ಯಕ್ಷ ಎಸ್.ಕೆ. ಯತಿರಾಜು ನಾಯ್ಡು, ಮಾಜಿ ವೀರಾಜಪೇಟೆ ಬಲಿಜ ಸಮಾಜ ಅಧ್ಯಕ್ಷ ಎನ್.ಕೆ.ನಾರಾಯಣಸ್ವಾಮಿ ನಾಯ್ಡು, ಹೇಮಾವತಿ, ಕುಮಾರಿ ಆಶಿತಾ ಉಪಸ್ಥಿತರಿದ್ದರು.
ಗಣತಿಗೆ ಚಾಲನೆ: ಸೋಮವಾರ ಪೇಟೆ ತಾಲೂಕು ಬಲಿಜ ಸಮಾಜ ಜಾತಿ ಗಣತಿ ಕಾರ್ಯಕ್ರಮಕ್ಕೆ ತಾ. 17 ರಂದು ಶಿರಂಗಾಲದಿಂದ ಚಾಲನೆ ನೀಡಲಾಗುವದು ಎಂದು ಕೊಡಗು ಬಲಿಜ ಸಮಾಜ ಅಧ್ಯಕ್ಷ ಟಿ.ಎಲ್. ಶ್ರೀನಿವಾಸ್ ತಿಳಿಸಿದ್ದಾರೆ.
ವೀರಾಜಪೇಟೆ ಹಾಗೂ ಮಡಿಕೇರಿ ತಾಲೂಕು ಬಲಿಜ ಗಣತಿ ಆರಂಭಗೊಂಡಿದ್ದು ಸೋಮವಾರ ಪೇಟೆ ಗಣತಿ ಕಾರ್ಯ ಅಲ್ಲಿನ ಹಿರಿಯ ಬಲಿಜ ಮುಖಂಡ ಎಸ್.ಎ. ಶ್ರೀನಿವಾಸ್ ನಿವಾಸದಿಂದ ಆರಂಭಿಸಲಾಗುವದು. ತಾಲೂಕು ಬಲಿಜ ಗಣತಿಗೆ ಸೋಮವಾರಪೇಟೆ ಬಲಿಜ ಸಮಾಜ ಅಧ್ಯಕ್ಷ ದಯಾನಂದ್ ಚಾಲನೆ ನೀಡಲಿದ್ದು, ಕ್ರೀಡೋತ್ಸವ ಪ್ರಚಾರವನ್ನು ಎಸ್.ಎ. ಶ್ರೀನಿವಾಸ್ ಉದ್ಘಾಟಿಸಲಿದ್ದಾರೆ.
ಶಿರಂಗಾಲದಲ್ಲಿ ಸುಮಾರು 40ಕ್ಕೂ ಅಧಿಕ ಕುಟುಂಬಗಳಿದ್ದು, 200ಕ್ಕೂ ಅಧಿಕ ಬಲಿಜ ಜನಾಂಗವಿದ್ದು ತಾ. 18 ರಂದು ಸಿದ್ದಾಪುರದಲ್ಲಿ ಬಲಿಜ ಗಣತಿ ಹಾಗೂ ಕ್ರೀಡೋತ್ಸವ ಪ್ರಚಾರ ಕಾರ್ಯ ಆರಂಭಿಸಲಾಗುವದು.
ಈಗಾಗಲೇ ಮೂರ್ನಾಡು, ನಾಪೆÇೀಕ್ಲು, ಬಲಮುರಿ, ಬೆಕ್ಕೆಸೊಡ್ಲೂರು, ಪೆÇನ್ನಂಪೇಟೆ, ತಿತಿಮತಿ, ಹುದಿಕೇರಿ, ಮಾಯಮುಡಿ ಗ್ರಾಮದಲ್ಲಿ ಬಲಿಜ ಗಣತಿ ಕಾರ್ಯ ಪೂರ್ಣಗೊಂಡಿದ್ದು, ಮುಂದಿನ ಹಂತದಲ್ಲಿ ಗೋಣಿಕೊಪ್ಪಲು, ಪೆರುಂಬಾಡಿ, ವೀರಾಜಪೇಟೆ, ಕದನೂರು (ತುಕ್ಕಡಿ), ಶನಿವಾರಸಂತೆ, ಚಂಗದಹಳ್ಳಿ, ಕೂಡಿಗೆ, ಕುಶಾಲನಗರ, ಮಡಿಕೇರಿಯಲ್ಲಿ ಗಣತಿ ಕಾರ್ಯವನ್ನು ಹಮ್ಮಿಕೊಳ್ಳಲಾಗುವದು ಎಂದು ತಿಳಿಸಿದ್ದಾರೆ.