ಮಡಿಕೇರಿ, ಏ. 15: ಇಲ್ಲಿನ ಭಾರತೀಯ ವಿದ್ಯಾಭವನ ಕೊಡಗು ಕೇಂದ್ರ, ಕಲಾಭಾರತಿ ಸಹಯೋಗದಲ್ಲಿ ವಿಶ್ವ ಕಲಾದಿನಾಚರಣೆ ಪ್ರಯುಕ್ತ ನಾಡಿನ ಹಿರಿಯ ಕಲಾವಿದರು ಹಾಗೂ ಚಿಣ್ಣರು ಒಡಗೂಡಿ ಕಲಾರಾಧನೆ ಮುಖಾಂತರ ಅನೇಕ ಕಲೆಗಳನ್ನು ಅನಾವರಣಗೊಳಿಸಿದರು. ಕಲಾವಿದರಿಂದ ಅದ್ಭುತ ಕಲಾಚಿತ್ರಗಳು ಕುಂಚದಿಂದ ಮೂಡಿ ಬಂದವು.ಭಾರತೀಯ ವಿದ್ಯಾಭವನ ಆವರಣದಲ್ಲಿ ಜರುಗಿದ ಸರಳ ಸಮಾರಂಭಕ್ಕೆ ಡಾ. ಮನೋಹರ್ ಜಿ. ಪಾಟ್ಕರ್ ಚಾಲನೆ ನೀಡಿದರು. ಸಸಿನೆಟ್ಟು ನೀರೆರೆಯುವ ಮೂಲಕ ಅವರು ಉದ್ಘಾಟಿಸಿ ವಿಶ್ವ ಕಲಾದಿನಕ್ಕೆ ಶುಭ ಹಾರೈಸಿದರು. ಈ ವೇಳೆ 20ಕ್ಕೂ ಅಧಿಕ ಹಿರಿಯ ಕಲಾವಿದರು ಹಾಗೂ 30ಕ್ಕೂ ಅಧಿಕ ಪುಟಾಣಿಗಳು ತಮ್ಮ ತಮ್ಮ ವಿಭಿನ್ನ ಭಾವನೆಗಳನ್ನು ವರ್ಣಚಿತ್ರಗಳಿಂದ ರೂಪುಗೊಳಿಸಿ ಪ್ರೇಕ್ಷಕರ ಗಮನ ಸೆಳೆದರು.

ಪ್ರಪಂಚದಾದ್ಯಂತ ಕ್ರಿಯಾತ್ಮಕ ಚಟುವಟಿಕೆಯ ಅರಿವನ್ನು ಮೂಡಿಸುವ ಸಲುವಾಗಿ ಅಂತರ್ರಾಷ್ಟ್ರೀಯ ಕಲಾ ಒಕ್ಕೂಟವು ಖ್ಯಾತ ಕಲಾವಿದ ಲಿಯೋನಾರ್ಡೊ ಡಾ‘ವಿಂಚಿಯ ಜನ್ಮದಿನವನ್ನು (15 ಏಪ್ರಿಲ್) ‘ವಿಶ್ವ ಕಲಾ ದಿವಸ’ವೆಂದು 2012ರಲ್ಲಿ ಘೋಷಿಸಿತು. ವಿವಿಧ ಕ್ಷೇತ್ರಗಳಲ್ಲಿ ಕಲೆಯ ಮಹತ್ವ ಅಭಿವ್ಯಕ್ತಿ ಸ್ವಾತಂತ್ರ್ಯ, ಶಾಂತಿ ಮತ್ತು ಬಹುಸಂಸ್ಕøತಿಯ ಪ್ರತೀಕವೆಂದು ಲಿಯೋನಾರ್ಡೊ ಡಾ‘ವಿಂಚಿಯನ್ನು ಆಯ್ಕೆ ಮಾಡಲಾಯಿತು. ಸೃಜನಾತ್ಮಕ ಸಮಾಲೋಚನೆಗಳು, ಕ್ರಿಯಾತ್ಮಕ ಚಟುವಟಿಕೆಗಳು, ಕಲಾ ಶಿಬಿರಗಳು, ಕಲಾ ಪ್ರದರ್ಶನಗಳು... ಇವು ಈ ಆಚರಣೆಯ ವಿಶ್ವವ್ಯಾಪಿ ಆಶಯವಾಗಿದೆ.

ಮಡಿಕೇರಿಯ ಭಾರತೀಯ ವಿದ್ಯಾಭವನದ ಕಲಾಭಾರತಿಯ ಪ್ರಾಂಗಣವು ಈ ವರ್ಷದ ವಿಶ್ವ ಕಲಾ ದಿವಸದ ಆಚರಣೆಗೆ ಸಜ್ಜುಗೊಂಡ ಈ ಕಾರ್ಯಕ್ರಮದಲ್ಲಿ ಕೊಡಗಿನ ಕಲಾವಿದರು ಮತ್ತು ಅತಿಥಿ ಕಲಾವಿದ ರೆಲ್ಲರೂ ಒಟ್ಟಿಗೆ ಸೇರಿ ಕಲಾರಚನೆ, ಕಲಾಪ್ರದರ್ಶನ ಮತ್ತು ಕಲಾಚಿಂತನೆಗಳಲ್ಲಿ ತೊಡಗಿಸಿಕೊಂಡರು.

22 ಮಂದಿ ವೃತ್ತಿನಿರತ ಕಲಾವಿದರು ಕ್ಯಾನ್‍ವಾಸ್‍ಗಳಲ್ಲಿ ಕಲಾಕೃತಿಗಳನ್ನು ರಚಿಸಿದರು. ಸುಮಾರು 32 ಕಲಾ ವಿದ್ಯಾರ್ಥಿಗಳು ಇವರೊಂದಿಗೆ ಬೆರೆತು, ತಾವುಗಳು ಕೂಡಾ ತಮ್ಮದೇ ಕಲಾಕೃತಿಗಳನ್ನು ರಚಿಸಿದರು.

ಕಲಾವಿದರುಗಳಾದ ಪಿ.ಮೋಹನ್ ಕುಮಾರ್, ಎಂ.ಪಿ. ದಿನೇಶ್, ಪ್ರಸನ್ನ ಕುಮಾರ್, ಬಾವಾ ಮಾಲ್ದಾರೆ, ಭರತ್ ಕೋಡಿ, ಉ.ರಾ. ನಾಗೇಶ್, ಜಯರಾಮ ವೈ.ಎಚ್., ರೂಪೇಶ್ ನಾಣಯ್ಯ, ಕೆ.ಆರ್. ಮಂಜುನಾಥ, ರಾಮ್ ಗೌತಮ್, ಸಾಧಿಕ್ ಹಂಸ, ಚಂದ್ರಶೇಖರ್ ಬಿ.ಎನ್., ಮಹೇಶ್ ಬಿ.ಎಲ್., ಸಜಿತ್ ಕುಮಾರ್, ಪ್ರವೀಣ್ ವರ್ಣಕುಟೀರ, ಆರತಿ ಸೋಮಯ್ಯ, ಅರುಣಾ ಗೌತಮ್, ಭುವನೇಶ್ವರಿ ಬಿ.ಎ. ಮತ್ತು ಚಂದ್ರಬೋಸ್ ಕೆ.ಎಸ್. ತಮ್ಮ ಕುಂಚದಿಂದ ಅಪೂರ್ವ ಕಲಾಚಿತ್ರ ರಚಿಸಿ ಗಮನ ಸೆಳೆದರು.

ಕಲಾವಿದರೆಲ್ಲರ ಸಮೂಹ ಕಲಾಪ್ರದರ್ಶನದ ಉದ್ಘಾಟನೆ ಮತ್ತು ವಿಶ್ವ ಕಲಾ ದಿವಸ ಕಾರ್ಯಕ್ರಮ ಸಮಾರೋಪದ ಸಮಾರಂಭವನ್ನು ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಅಧ್ಯಕ್ಷ ಬಿ.ಕೆ. ಸುಬ್ಬಯ್ಯ ಉದ್ಘಾಟಿಸಿದರು. ವಿದ್ಯಾಭವನ ಕೊಡಗು ಕೇಂದ್ರದ ಅಧ್ಯಕ್ಷ ಕೆ.ಎಸ್. ದೇವಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಕಲಾ ಶಿಬಿರದ ನಿರ್ದೇಶಕ ಪ್ರಸನ್ನ ಕುಮಾರ್ ಕಲಾ ಚಟುವಟಿಕೆಗಳ ಆಶಯವನ್ನು ವಿವರಿಸಿದರು.

ಚಿತ್ರಕಲಾ ಪ್ರದರ್ಶನವು ಇಂದಿನಿಂದ ತಾ. 22ರವರೆಗೆ ಬೆಳಿಗ್ಗೆ 10ರಿಂದ ಸಂಜೆ 7.30ರವರೆಗೆ ವೀಕ್ಷಣೆಗೆ ತೆರೆದಿರುತ್ತದೆ ಎಂದು ಅವರು ತಿಳಿಸಿದರು.